ಬೀದರ್ : ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಹಾಗೂ ಆತನ ಗ್ಯಾಂಗ್ ನವರು ಲಕ್ಷಾಂತರ ರುಪಾಯಿ ಹಣ ಲಪಟಾಯಿಸಿ ಟೆಂಡರ್ ಕೊಡಿಸದೆ ಮೋಸ ಮಾಡಿದ್ದಾರೆ. ಜೊತೆಗೆ, ತಮ್ಮ ಕುಟುಂಬವನ್ನೇ ಸರ್ವನಾಶ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು, ಯುವ ಗುತ್ತಿಗೆದಾರರೊಬ್ಬರು ರೈಲಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೀದರ್ ಜಿಲ್ಲೆ ಬಾಲ್ಕಿ ತಾಲೂಕಿನ ತುಗ್ಗಾವ್‌ಕಟ್ಟೆ ನಿವಾಸಿ ಸಚಿನ್ ಪಂಚಾಳ (28) ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ. ಬೀದರ್‌ನ ಕರ್ನಾಟಕ ಕಾಲೇಜು ಹಿಂಭಾಗದ ರೈಲ್ವೆ ಹಳಿಗಳ ಮೇಲೆ ಗುರುವಾರ ರುಂಡ ತುಂಡಾಗಿ ಬಿದ್ದಿದ್ದ ಸಚಿನ್ ಪಂಚಾಳ ಅವರ ಮೃತದೇಹವನ್ನು ಕಂಡು ಸ್ಥಳೀಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದೆನ್ನಲಾದ ಡೆತ್‌ನೋಟ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಚಿನ್ ಅವರು ಪಂಚಾಳ ಯುನಿಟಿ ಇನ್ಫ್ರಾ ಬಿಲ್ಡರ್ಸ್ ಹೆಸರಿನ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ತಮ್ಮದೇ ಸ್ವಂತ ಗುತ್ತಿಗೆ ಕಾಮಗಾರಿಗಳನ್ನೂ ಹಲವು ವರ್ಷಗಳಿಂದ ನಡೆಸುತ್ತಿದ್ದರು.
ಡೆತ್‌ನೋಟ್‌ನಲ್ಲಿ ಏನಿದೆ?:
7 ಪುಟಗಳ ಡೆತ್‌ನೋಟ್ ನಲ್ಲಿ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಮುಖಂಡ, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಕಲಬುರಗಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಮಹಾರಾಷ್ಟ್ರ ಮೂಲದ ಪ್ರತಾಪ ಧೀರ್, ಕಾರ್ಪೊರೇಟರ್ ಮನೋಜ್, ಯುನಿಟಿ ಇನ್ಫ್ರಾ ಬಿಲ್ಡರ್ಸ್ ಬೆಂಗಳೂರಿನ ಎಂಡಿ ಎಚ್.ಎಂ.ವಿಕಾಸ್, ಯೋಜನಾ ವ್ಯವಸ್ಥಾಪಕ ವಿನಯ್, ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ್ ಸೇರಿ 8 ಜನರ ಹೆಸರನ್ನು ಬರೆಯಲಾಗಿದೆ.
ಸಚಿವರ ಆಪ್ತ ರಾಜು ಕಪನೂರ್ ಮತ್ತಿತರರು ತಮಗೆ ವಿವಿಧ ಸರ್ಕಾರಿ ಇಲಾಖೆಗಳ ಟೆಂಡರ್ ಪಡೆಯಲು ಸಹಾಯ ಮಾಡುವುದಾಗಿ ನಂಬಿಸಿ ಹಣ ಪಡೆದಿದ್ದರು. ಆದರೆ, ಟೆಂಡರ್ ಕೊಡಿಸದೆ ಮೋಸ ಮಾಡಿದ್ದಾರೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಲು ಒಪ್ಪದಿದ್ದಾಗ ಕೊಲೆ ಬೆದರಿಕೆ ಒಡ್ಡಿದ್ದಾರೆ. ರಾಜು ಕಪನೂರ್‌ಗೆ ವಿವಿಧ ಹಂತದಲ್ಲಿ ₹75 ಲಕ್ಷಕ್ಕೂ ಅಧಿಕ ಮೊತ್ತದ ಹಣ ನೀಡಿದ್ದೇನೆ. ಮತ್ತೆ ₹1 ಕೋಟಿಗೆ ಬೆದರಿಕೆ ಇಟ್ಟಿದ್ದರು. ಅಲ್ಲದೆ, ತಮ್ಮ ಸೋದರಿಯ ಸರ್ಕಾರಿ ನೌಕರಿಗೂ ಕುತ್ತು ತರುವುದಾಗಿ ಬೆದರಿಸಿದ್ದಾರೆ. ಇದರಿಂದ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.ರಾಜೀನಾಮೆ ನೀಡಿ
ಪ್ರತಿ ವಿಷಯದಲ್ಲೂ ಅನಗತ್ಯ ಮೂಗು ತೂರಿಸಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದನ್ನು ಆತ್ಮಹತ್ಯೆಗೊಳಗಾದ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಸಿದ್ದರಾಮಯ್ಯ ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಬೇಕು.
- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಕೇಸಿನ ತನಿಖೆಯಾಗಲಿ
ಸಚಿನ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದು ನನ್ನ ಇಲಾಖೆಗೆ ಬರುವುದರಿಂದ ಪ್ರಕರಣದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ. ಮಿಥ್ಯಾರೋಪ ಮಾಡುವುದು ಬಿಜೆಪಿಯವರ ಹಳೆಯ ಅಭ್ಯಾಸವಾಗಿದೆ. ಆದರೆ, ಆಧಾರರಹಿತ ಆರೋಪಗಳಿಂದ ನನ್ನನ್ನು ಕುಗ್ಗಿಸುವ ಬಿಜೆಪಿಯವರ ಪ್ರಯತ್ನ ಸಫಲವಾಗದು.
- ಪ್ರಿಯಾಂಕ್ ಖರ್ಗೆ, ಸಚಿವ.