ವಚನ ಸಾಹಿತ್ಯ ಸಂರಕ್ಷಕ ಫ.ಗು.ಹಳಕಟ್ಟಿ ಕೊಡುಗೆ ಅಪಾರ

KannadaprabhaNewsNetwork | Published : Jul 3, 2024 12:18 AM

ಸಾರಾಂಶ

ಬಸವಾದಿ ಶರಣ-ಶರಣೆಯರ ಅಮೂಲ್ಯ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಕೊಡುಗೆ ಅವಿಸ್ಮರಣೀಯವಾಗಿದೆ. ಇಂತಹ ಶ್ರೀಮಂತ ವಚನ ಸಾಹಿತ್ಯವನ್ನು ಸಂರಕ್ಷಿಸಿ, ಜನತೆ ಹಾಗೂ ವಿಶ್ವ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ ಮಹನೀಯರು ಫ.ಗು.ಹಳಕಟ್ಟಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಸ್ಮರಿಸಿದ್ದಾರೆ.

- ಜಿಲ್ಲಾಡಳಿತ ಭವನದಲ್ಲಿ ಫ.ಗು.ಹಳಕಟ್ಟಿ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಡಿಸಿ ಡಾ.ವೆಂಕಟೇಶ ಸ್ಮರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವಾದಿ ಶರಣ-ಶರಣೆಯರ ಅಮೂಲ್ಯ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಕೊಡುಗೆ ಅವಿಸ್ಮರಣೀಯವಾಗಿದೆ. ಇಂತಹ ಶ್ರೀಮಂತ ವಚನ ಸಾಹಿತ್ಯವನ್ನು ಸಂರಕ್ಷಿಸಿ, ಜನತೆ ಹಾಗೂ ವಿಶ್ವ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ ಮಹನೀಯರು ಫ.ಗು.ಹಳಕಟ್ಟಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಸ್ಮರಿಸಿದರು.

ನಗರದ ಜಿಲ್ಲಾಡಳಿತ ಭ‍ವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಡಾ.ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಇಂದು ನಮಗೆ ಇಷ್ಟೊಂದು ಸುಲಭವಾಗಿ ಸಿಗುತ್ತಿದೆಯೆಂದರೆ ಅದಕ್ಕೆ ಮೂಲ ಕಾರಣರು ಡಾ.ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ. ದಶಕಗಳ ಕಾಲ ಸುತ್ತಾಡಿ, ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ಅಮೂಲ್ಯ ತಾಳೆ ಗರಿಗಳನ್ನು ರಾಜ್ಯ, ವಿದೇಶಗಳಿಗೆ ತೆರಳಿ, ಹುಡುಕಾಡಿ, ಸಂಗ್ರಹಿಸಿ ತಂದವರು. ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಅವುಗಳನ್ನು ಗ್ರಂಥರೂಪದಲ್ಲಿ ಎಲ್ಲರೂ ಓದುವಂತೆ ಮುದ್ರಿಸಿ, ಹೊರ ತಂದವರು ಸಹ ಹಳಕಟ್ಟಿಯವರು ಎಂದು ತಿಳಿಸಿದರು.

ಸಂಶೋಧಿಸಿ ವಚನಗಳ ಸಂಗ್ರಹ:

ಫ.ಗು.ಹಳಕಟ್ಟಿ ಅವರ ಪರಿಶ್ರಮದಿಂದಾಗಿ ಇಂದು ಇಡೀ ವಿಶ್ವಕ್ಕೆ ದಾರಿದೀಪ ಆಗುವಂತಹ ಅಮೂಲ್ಯ ವಚನ ಭಂಡಾರವು ಎಲ್ಲರಿಗೂ ತಲುಪಲು ಸಾಧ್ಯವಾಗಿದೆ. ವಚನಗಳಲ್ಲಿನ ಮಾನವೀಯ ಮೌಲ್ಯಗಳು, ಜೀವನ ಸಂದೇಶಗಳು, ವಿಶ್ವಶಾಂತಿ, ವಿಶ್ವಪ್ರೇಮ ಮೂಡಿಸುತ್ತದೆ. ಶರಣರು ತಮ್ಮ ಜೀವನದ ಅನುಭವಗಳನ್ನು ವೇದ- ಉಪನಿಷತ್‌ಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ ರಚಿಸುತ್ತಿದ್ದರು. ಸಮಾಜದಲ್ಲಿ ನಡೆಯುವ ದೌರ್ಜನ್ಯ ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ. ಹಳಕಟ್ಟಿಯವರು ಸಾಕಷ್ಟು ಸಂಶೋಧನೆ ಮಾಡಿ, ವಚನಗಳನ್ನು ಸಂರಕ್ಷಿಸಿ, ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಇದೇ ವೇಳೆ ಶಿವಾನಂದ ಗುರೂಜಿ ಕುಂಬಳೂರು, ಚಿಕ್ಕೋಳ್ ಈಶ್ವರಪ್ಪ, ಹಿರೇಕೊಗಲೂರು, ಎಂ.ಕೆ ಬಕ್ಕಪ್ಪ ವಚನ ಸಾಧಕರಿಗೆ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಬಿ.ದಿಳ್ಯಪ್ಪ, ಶರಣಪ್ಪ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂತೋಷ ಇತರರು ಇದ್ದರು.

- - -

ಬಾಕ್ಸ್‌ ಬಡತನಕ್ಕೂ ಜಗ್ಗದೇ ಪ್ರಕಟಣೆ: ಸುಮತಿ ಜಯಪ್ಪ

ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಬಾಲ್ಯದಿಂದಲೂ ತಂದೆಯ ಸಾಹಿತ್ಯ ವಲಯದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಬೆಳೆದ ಹಳಕಟ್ಟಿ ಅವರು ಕುಟುಂಬದ ಕಿತ್ತು ತಿನ್ನುವ ಬಡನ, ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಧೃತಿಗೆಡಲಿಲ್ಲ. ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಅವುಗಳನ್ನು ಪ್ರಕಟಿಸುವ ಮಹಾತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸೈಕಲ್‌ನ ಸಹಾಯದಿಂದ ಹಲವಾರು ಕಡೆ ಸುತ್ತಾಡಿ, ಸಂಗ್ರಹಿಸಿದ ತಾಳೆಗರಿ, ಹಸ್ತಪ್ರತಿಗಳನ್ನು ಕೊಳ್ಳುವ ಮೂಲಕ ಸಂರಕ್ಷಣೆ ಮಾಡಿದ ಸಾಧಕರು ಹಳಕಟ್ಟಿ ಎಂದರು. ಕರ್ನಾಟಕ ವಿವಿ ಡಾಕ್ಟರೇಟ್‌: ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ 1923ರಲ್ಲಿ ಹಳಕಟ್ಟಿ ಅವರ ವಚನ ಸಾಹಿತ್ಯ ಸಂಪುಟ-1 ಪ್ರಕಟವಾಯಿತು. 1925ರಲ್ಲಿ ತಮ್ಮ ಸ್ವಗೃಹದಲ್ಲೇ ಹಿತ ಸಾಹಿತ್ಯ ಮುದ್ರಣಾಲಯ ಸ್ಥಾಪಿಸಿ, ಸುಮಾರು 175 ಕೃತಿಗಳು ಹಾಗೂ ಹರಿಹರ ಕವಿಯವರ 42 ರಗಳೆಗಳನ್ನು ಮುದ್ರಣ ಮಾಡಿ, ಪ್ರಸಾರ ಮಾಡಿದವರು ಫ.ಗು.ಹಳಕಟ್ಟಿ. ಇದಕ್ಕಾಗಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1956ರಲ್ಲಿ ಡಾಕ್ಟರೇಟ್ ಪದವಿಗೂ ಹಳಕಟ್ಟಿ ಪಾತ್ರರಾದರು ಎಂದು ತಿಳಿಸಿದರು.

- - - -2ಕೆಡಿವಿಜಿ1:

ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಡಾ. ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಶಿವಾನಂದ ಗುರೂಜಿ ಕುಂಬಳೂರು, ಚಿಕ್ಕೋಳ ಈಶ್ವರಪ್ಪ, ಎಂ.ಕೆ.ಬಕಪ್ಪ ಅವರನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಸನ್ಮಾನಿಸಿದರು.

Share this article