ಬಸವಣ್ಣನ ಉದ್ದೇಶ ಮರೆತಿದ್ದರಿಂದ ಸಂಕಷ್ಟದಲ್ಲಿ ನಾಡು

KannadaprabhaNewsNetwork | Published : May 10, 2024 11:49 PM
Follow Us

ಸಾರಾಂಶ

ಸಂಸ್ಕೃತದ ಪ್ರಭಾವ ಇದ್ದ ಕಾಲದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಶಿವಶರಣರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಕೆಲಸದ ಮಹತ್ವ ತಿಳಿಸಿಕೊಟ್ಟಿರುವ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಿದ್ದರು.

ಶಿರಹಟ್ಟಿ:

ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಿರದೇ ಅವರ ಜೀವನದ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಬಸವಣ್ಣನವರ ಆಚಾರ, ವಿಚಾರ, ವಚನಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಸವಣ್ಣ ಸಾಮಾನ್ಯರಲ್ಲ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಬಸವಣ್ಣ ಈ ನಾಡಿನಲ್ಲಿ ಯಾವ ಕಾರಣಕ್ಕೆ, ಉದ್ದೇಶ, ವಿಚಾರಕ್ಕಾಗಿ ಹುಟ್ಟಿ ಬಂದರು ಎಂಬುದನ್ನು ಮರೆತಿದ್ದರಿಂದ ನಾಡು ಸಂಕಷ್ಟದಲ್ಲಿದೆ ಎಂದರು.

ಸಂಸ್ಕೃತದ ಪ್ರಭಾವ ಇದ್ದ ಕಾಲದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಶಿವಶರಣರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಕೆಲಸದ ಮಹತ್ವ ತಿಳಿಸಿಕೊಟ್ಟಿರುವ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಿದ್ದರು. ಇದರಿಂದ ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ ಮೊದಲಾದ ಶಿವಶರಣೆಯರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ

ಎಂದು ಹೇಳಿದರು.೮೦೦ ವರ್ಷಗಳ ಹಿಂದೆ ಕಲ್ಯಾಣದಲ್ಲಿ ಕ್ರಾಂತಿ ಮಾಡಿದ ಬಸವಣ್ಣ ಮತ್ತೆ ಹುಟ್ಟಿ ಬಂದು ಇಂದಿನ ಪೀಳಿಗೆಯನ್ನು ಉದ್ಧಾರ ಮಾಡಬೇಕಾಗಿದೆ. ೧೨ನೇ ಶತಮಾನದಲ್ಲಿ ಯಾವುದೇ ಕಾನೂನು ಮಾಡದೇ ಜನರ ಮನ ಪರಿವರಿವರ್ತನೆಯಿಂದ ಆಡಳಿತ ನಡೆಸಿದ ವ್ಯಕ್ತಿ ಬಸವಣ್ಣ ಎಂದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಬಸವಣ್ಣನವರು ವರ್ಣರಹಿತ, ವರ್ಗರಹಿತ, ಲಿಂಗಭೇದರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು. ಕೇವಲ ಆಚಾರ-ವಿಚಾರಗಳಲ್ಲಿ ಪ್ರಾಮಾಣಿಕರಾಗಿರದೇ ದಿನನಿತ್ಯದ ಕೆಲಸಗಳಲ್ಲಿ ಪ್ರಾಮಾಣಿಕರಾಗಿರಬೇಕು. ದುಡಿಮೆ ಶಿವಪೂಜೆಗೆ ಸಮಾನ ಎಂದ ಬಸವಣ್ಣ ಹೇಳಿದ್ದರು ಎಂದು ತಿಳಿಸಿದರು.

12ನೇ ಶತಮಾನದಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿ ವಿಶ್ವದಲ್ಲೇ ವಿನೂತನ ಕ್ರಾಂತಿಯಾಗಿತ್ತು. ಮನುಷ್ಯನ ಅಂತರಂಗ, ಬಹಿರಂಗ ಒಂದಾಗಿರಬೇಕು. ಜೀವನ ಸಹಜ, ಸರಳ ಆಗಿರಬೇಕು. ಆಡಂಬರದ ಜೀವನದಿಂದ ಸಂಕಷ್ಟಗಳೇ ಹೆಚ್ಚು. ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹದ ಪರಿಕಲ್ಪನೆಗಳ ಮೂಲಕ ಸದೃಢ ಸಮಾಜದ ಕನಸನ್ನು ಬಿತ್ತಿದವರು ಎಂದರು.

ಮುಖಂಡರಾದ ಸೂರಣ್ಣ ಕಪ್ಪತ್ತನವರ, ಪ್ರಕಾಶ ಭೋರಶೆಟ್ಟರ, ಬಸವರಾಜ ಭೋರಶೆಟ್ಟರ, ಮಹೇಶ ಪಟ್ಟಣಶೆಟ್ಟಿ, ಎಚ್.ಎಂ. ದೇವಗೀರಿ, ನಂದಾ ಕಪ್ಪತ್ತನವರ, ಈರಪಾಕ್ಷಪ್ಪ ಸಂಗಪ್ಪಶೆಟ್ಟರ, ದ್ರಾಕ್ಷಾಯಣಿ ಸಂಗಪ್ಪಶೆಟ್ಟರ, ಪ್ರಭು ಹಲಸೂರ, ಗೀತಾ ಹಲಸೂರ ಸೇರಿದಂತೆ ಅನೇಕರು ಇದ್ದರು.