೨೦ ಸಿಬ್ಬಂದಿ ತಂಡ, ೧೨ ಶ್ವಾನಗಳನ್ನು ಒಳಗೊಂಡ ತರಬೇತಿ ಕೇಂದ್ರ । ಹುಲಿ ಸಂರಕ್ಷಿತ ಅಭಯಾರಣ್ಯದ ಮೇಲುಕಾಮನಹಳ್ಳಿ ಬಳಿ ಆರಂಭ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದಲ್ಲಿ ಪ್ರಪ್ರಥಮ ಬಾರಿಗೆ ಶ್ವಾನ ತರಬೇತಿ ಕೇಂದ್ರ ಅಧಿಕೃತವಾಗಿ ಆರಂಭಗೊಂಡಿದೆ. ಹಲವು ಹಿರಿಮೆಗಳ ಮೂಲಕ ದೇಶದ ಗಮನ ಸೆಳೆದಿರುವ ಅರಣ್ಯ ಇಲಾಖೆಯು ಹುಲಿ ಯೋಜನೆ ಪ್ರದೇಶಗಳಲ್ಲಿ ಶ್ವಾನದಳ ತರಬೇತಿ ಕೇಂದ್ರಕ್ಕೆ ಚಾಲನೆ ದೊರೆತಿದೆ.
ಬಂಡೀಪುರದಲ್ಲಿ ಆರಂಭವಾದ ಶ್ವಾನದಳಕ್ಕೆ ಹೊಸದಾಗಿ ನಿರ್ಮಾಣ ಮಾಡಿದ್ದ ಕನೆಲ್‌ಗಳನ್ನು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಹಾಗೂ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಸೋಮವಾರ ಉದ್ಘಾಟಿಸಿದರು.ಈ ವೇಳೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಎಸಿಎಫ್ ಎನ್.ಪಿ.ನವೀನ್ ಕುಮಾರ್, ಆರ್‌ಎಫ್‌ಒ ಬಿ.ಎಂ.ಮಲ್ಲೇಶ್, ಗಾಡ್ ಗುರು ಅಮೃತ್ ಶ್ರೀಧರ ಹಿರಣ್ಯ ಮತ್ತು ತರಬೇತಿಗೆ ಆಯ್ಕೆಯಾದ ಸಿಬ್ಬಂದಿ ಇದ್ದರು.
ಈ ಮೂಲಕ ಕರ್ನಾಟಕ ಅರಣ್ಯ ಇಲಾಖೆಯ ಹಿರಿಮೆಗೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಶ್ವಾನದಳಕ್ಕೆ ತನಿಖೆ ಹಾಗೂ ವಿಚಕ್ಷಣೆಯ ತರಬೇತಿ ನೀಡಲು ಹೊಸ ತಂಡ ರಚನೆಯಾಗಿದೆ.ಬಂಡೀಪುರದಲ್ಲಿ ಶ್ವಾನದ ಮೂಲಕ ತನಿಖೆ, ವನ್ಯಜೀವಿ ಬೇಟೆಗಾರರನ್ನು ಹಿಡಿಯುವ ಕಾರ್ಯ ಒಂದು ದಶಕದಿಂದ ಇದ್ದರೂ ಪ್ರತ್ಯೇಕ ಘಟಕ ಇರಲಿಲ್ಲ. ಆದರೀಗ ಶ್ವಾನಗಳಿಗೆ ತಾಲೀಮು ನಡೆಸುವ ಜತೆಗೆ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಗೂ ತರಬೇತಿ ಶುರುವಾಗಿದೆ.
ಈ ಹಿಂದೆ ಬಂಡೀಪುರದಲ್ಲಿ ರಾಣ ಹೆಸರಿನ ಶ್ವಾನ ಇತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಂಬಂಧಿತ ಅಪರಾಧ ಪತ್ತೆ ಹಚ್ಚುವಲ್ಲಿ ಮತ್ತು ಮುನ್ನೆಚ್ಚರಿಕೆ ವಹಿಸುವಲ್ಲಿ ಸತತ ೮ ವರ್ಷಗಳ ಸೇವೆ ಸಲ್ಲಿಸಿದ್ದ ರಾಣ ಎಂಬ ಶ್ವಾನ ಕಳೆದ ವರ್ಷ ಅಸುನೀಗಿತ್ತು. ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟದ ಹುಲಿಧಾಮ, ಭದ್ರಾ, ದಾಂಡೇಲಿಯ ಕಾಳಿ ಸೇರಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ.ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ, ವನ್ಯಜೀವಿ ಸಂಬಂಧಿತ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಶ್ರಮಿಸುತ್ತಿದ್ದರೂ ಶ್ವಾನಗಳ ಬಳಕೆ ಆರಂಭಿಸಲಾಗಿತ್ತು. ಈಗ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸೇರಿಸಿ ತರಬೇತಿ ಕೇಂದ್ರ ಆರಂಭವಾಗಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶದಲ್ಲಿ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಶ್ವಾನದಳ ಬಲಪಡಿಸಲು ಯೋಜನೆ ರೂಪಿಸಿ ಅನುಮತಿ ಪಡೆದಿದ್ದಾರೆ. ಈಗಾಗಲೇ ಶ್ವಾನದಳ ಹೊಂದಿದ್ದ ಬಂಡೀಪುರದಲ್ಲಿಯೇ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಜನೆ ರೂಪಿಸಿ ಜಾರಿಗೆ ತಂದಿದ್ದು, ಈಗ ಸುಸಜ್ಜಿತ ಘಟಕವೀಗ ಬಂಡೀಪುರದಲ್ಲಿ ಉದ್ಘಾಟನೆಯಾಗಿದೆ.೨೦ ಸಿಬ್ಬಂದಿ (ಸ್ನಿಫರ್ ಡಾಗ್ ಕೀಪರ್ಸ್) ಬಂಡೀಪುರ ಬಳಿ ಮೇಲುಕಾಮನಹಳ್ಳಿ ಆಡ್ಮಿನ್ ಬ್ಲಾಕ್‌ನಲ್ಲಿ ಇದ್ದು,೧೦ ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ. ೧೦ ತಿಂಗಳ ತರಬೇತಿ ಬಳಿಕ ಸಿಬ್ಬಂದಿಯನ್ನು ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ, ಕಾಳಿ ಪ್ರದೇಶದಲ್ಲಿ ಬೇಟೆ ಪ್ರಕರಣ, ಅಕ್ರಮ ಮರ ಕಡಿಯುವ ಪ್ರಕರಣಗಳಂತಹ ಅರಣ್ಯ ಮತ್ತು ವನ್ಯಜೀವಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಗುತ್ತದೆ.
ಈ ತರಬೇತಿ ಕೇಂದ್ರ ಪ್ರತಿ ವರ್ಷ ೧೦ ಶ್ವಾನಗಳಿಗೆ ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳ ಅಪರಾಧ ಪ್ರಕರಣ ಪತ್ತೆಹಚ್ಚಲು ತರಬೇತಿ ನೀಡುತ್ತದೆ. ಇವುಗಳನ್ನು ವನ್ಯಜೀವಿ ಸ್ನಿಫರ್ ಮತ್ತು ವನ್ಯಜೀವಿ ಅಪರಾಧ ಟ್ರ್ಯಾಕಿಂಗ್ ಶ್ವಾನಗಳು ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಶ್ವಾನಗಳ ಬಳಸುವಲ್ಲಿ ಯಶ ಕಂಡಿದೆ.ಕರ್ನಾಟಕ ಅರಣ್ಯ ಇಲಾಖೆಯು ಈ ವಿನೂತನ ಪ್ರಯತ್ನ ಮಾಡಿದೆ. ಬಂಡೀಪುರದಲ್ಲಿ ಆರಂಭವಾದ ಶ್ವಾನದಳ ತರಬೇತಿ ಕೇಂದ್ರ ದೇಶದಲ್ಲಿ ಪ್ರಥಮವಾಗಿದೆ. ಸದ್ಯಕ್ಕೀಗ ೮ ಶ್ವಾನಗಳು ಬಂದಿವೆ. ತರಬೇತಿ ಕೇಂದ್ರ ಬಂಡೀಪುರದಲ್ಲಿ ಆರಂಭಗೊಂಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.
ಎಸ್.ಪ್ರಭಾಕರನ್, ಡಿಸಿಎಫ್, ಬಂಡೀಪುರ ಟೈಗರ್ ರಿಸರ್ವ್.