ಜಾನಪದ ಪೂರ್ವಜರು ನಮಗೆ ಕೊಟ್ಟ ಸಂಸ್ಕೃತಿ

KannadaprabhaNewsNetwork | Published : Apr 27, 2025 1:30 AM

ಸಾರಾಂಶ

ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮದ ಅಂಗವಾಗಿ ಅಲಂಕೃತ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ಕರೆದುಕೊಂಡು ಬಂದು, ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಆಧುನಿಕ ಜೀವನಶೈಲಿಯ ಭರಾಟೆಯಲ್ಲಿ, ನಮ್ಮ ಜಾನಪದ ಹೃದಯವಂತಿಕೆ ಸಂಸ್ಕೃತಿ ಅವಿತುಕೊಳ್ಳುತ್ತಿದ್ದು ಅದನ್ನು ಹುಡುಕಿ ತೆಗೆದು ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ನಂಜುಂಡಯ್ಯ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಧಾನ್ಯ ಸುರಿಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಾನಪದ ನಮ್ಮ ಪೂರ್ವಜರು ನಮಗೆ ಬಿಟ್ಟಿರುವ ಶ್ರೀಮಂತಿಕೆಯ ಹೃದಯವಂತಿಕೆಯ ಸಂಸ್ಕೃತಿ, ಜಾನಪದದ ಮೂಲ ನೆಲೆ ನಮ್ಮ ಹಳ್ಳಿಗಳು, ಈ ಜಾನಪದ ಹಿರಿಯರ ಗೌರವಿಸುವುದು, ಪರಸ್ಪರ ಸಹಕಾರದಿಂದ ಒಗ್ಗೂಡುವುದು, ಸಮಾನತೆಯನ್ನು ಕಲಿಸುತ್ತದೆ, ಇಂತಹ ಕಲೆ-ಸಂಸ್ಕೃತಿಯ ಪರಿಚಯವನ್ನೂ ವಿದ್ಯಾರ್ಥಿನಿಯರಿಗೆ ಮಾಡಿಕೊಡುವ ಈ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ ಎಂದರು.

ಮುಖ್ಯ ಅತಿಥಿಯಾಗಿದ್ದ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ನಮ್ಮ ಎಲ್ಲ ಕಲೆಗಳ ತಾಯಿಬೇರು ಜಾನಪದ, ಯುವಜನರು ಮೊಬೈಲ್ ದಾಳಿಗೆ ಸಿಕ್ಕಿ ಪಾಶ್ಚಾತ್ಯ ಸಂಸ್ಕೃತಿಯ ಹಾವಳಿಗೆ ಒಳಗಾಗಿ ಇದನ್ನು ಮರೆಯುತ್ತಿದ್ದಾರೆ ಎಂದರು. ನಮ್ಮ ಹಿರಿಯರು ಹೇಳುತ್ತಿದ್ದ ಜಾನಪದ ಕಥೆ, ಒಗಟು, ಲಾವಣಿ ಹಾಗೂ ಇನ್ನಿತರೆ ಜಾನಪದ ಹಾಡುಗಳು ಮರೆಯಾಗುತ್ತಿವೆ, ಜಾನಪದ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂಸ್ಕೃತಿಯಾಗಿದೆ. ಸಮಾನತೆ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಸಂಚಾಲಕಿ ಜಮುನಾ ಮಾತನಾಡಿ, ನಮ್ಮ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಇಂದಿನ ಪಾಶ್ಚಾತ್ಯ ಪರಂಪರೆಯ ಹೊಡೆತದಿಂದ ನಮ್ಮ ಜಾನಪದ ಸಂಸ್ಕೃತಿ ಮತ್ತು ಮೌಲ್ಯಗಳು ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರಾದೇಶಿಕ ಜಾನಪದ ಸೊಗಡನ್ನು ಮುಂದಿನ ಪೀಳಿಗೆಗೆ ಹಾಗೂ ವಿದ್ಯಾರ್ಥಿನಿಯರಿಗೆ ತಿಳಿಸುವುದೇ. ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜಮೂರ್ತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯುವಜನರ ಮನಸ್ಸನ್ನು ಬಡಿದೆಬ್ಬಿಸುವ ಕಾರ್ಯಕ್ರಮಯುವಜನರ ಮನಸ್ಸನ್ನು ಬಡಿದೆಬ್ಬಿಸುವ ವಿಶೇಷ ಕಾರ್ಯಕ್ರಮಕ್ಕೆ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಶನಿವಾರ ಸಾಕ್ಷಿಯಾಯಿತು. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದಲೇ ಕೂಡಿರುವ ಕಾಲೇಜು, ತನ್ನ ವಿದ್ಯಾರ್ಥಿ ವೃಂದದಲ್ಲಿ ನಾಡಿನ ಭವ್ಯ ಸಂಸ್ಕೃತಿ ಬಗೆಗೆ ಒಲವು ಮೂಡಿಸುವ ಯತ್ನವನ್ನು ವಿಭಿನ್ನವಾಗಿ ಆಚರಿಸಿತು. ಸದಾ ಜೀನ್ಸ್-ಟೀ ಶರ್ಟ್ ಮತ್ತು ಚೂಡಿಧಾರ್‌ಗಳಲ್ಲಿ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲಂಗ-ದಾವಣಿಗಳಲ್ಲಿ ಕಂಗೊಳಿಸುತ್ತಿದ್ದರು. ಕೆಲವರು ರೇಷ್ಮೆ ಸೀರೆಗಳು ಹಾಗೂ ಚಿನ್ನಾಭರಣಗಳೊಂದಿಗೆ ಮಿರಿಮಿರಿ ಮಿಂಚುತ್ತಿದ್ದರು. ಅಲಂಕೃತ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ಕರೆದುಕೊಂಡು ಬಂದು, ಆರತಿ ಎತ್ತಿ, ಬರಮಾಡಿಕೊಂಡರು,

ಕಾಲೇಜಿನ ಆಡಳಿತ ಮಂಡಳಿ ಆಯೋಜಿಸಿದ್ದ ’ಜಾನಪದ ಜಾತ್ರೆ’ ಕಾರ್‍ಯಕ್ರಮ ಸಾಂಪ್ರದಾಯಿಕ ಪೂಜೆಯ ಮೂಲಕವೇ ಆರಂಭಗೊಂಡಿತು. ನಾಡಿನ ಕಲೆ-ಸಂಸ್ಕೃತಿಯ ಪರಿಚಯವನ್ನೂ ವಿದ್ಯಾರ್ಥಿನಿಯರಿಗೆ ಮಾಡಿಕೊಡುವ ಪ್ರಯತ್ನ ನಡೆಯಿತು. ವಿದ್ಯಾರ್ಥಿನಿಯರು ಮಾತ್ರವಲ್ಲ, ಪ್ರಾಂಶುಪಾಲರಾದಿಯಾಗಿ ಕಾಲೇಜಿನ ಸರ್ವ ಸಿಬ್ಬಂದಿ ಸಾಂಪ್ರದಾಯಿಕ ವಸ್ತ್ರಗಳಲ್ಲಿ ಕಂಗೊಳಿಸಿದರು. ಮಹಿಳಾ ಸಿಬ್ಬಂದಿ ಸೀರೆಯುಟ್ಟಿದ್ದರೆ, ಪುರುಷರು ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ಬಂದಿದ್ದರು.

Share this article