ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ಹೈನುಗಾರಿಕೆಗೆ ಸವಾಲಾಗಿ ಪರಿಣಮಿಸಿದೆ. ರಾಸುಗಳಲ್ಲಿ ಅನಾರೋಗ್ಯದ ಸಮಸ್ಯೆ ಎದುರಾಗುವುದರ ಜೊತೆಗೆ ಹಾಲಿನ ಪ್ರಮಾಣ ಸಹ ಕುಂಠಿತಗೊಳ್ಳುತ್ತಿದ್ದು, ಹಸುಗಳನ್ನು ಪೋಷಣೆ ಮಾಡುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಕೋಲಾರ ಜಿಲ್ಲೆಯ ರೈತರಿಗೆ ಕೃಷಿಯ ಜೊತೆಗೆ ಹೈನೋದ್ಯಮವು ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಈ ಬಾರಿಯ ಬೇಸಿಗೆಯು ಹೈಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಬಿಸಿಲಿನ ಝಳವನ್ನು ಎದುರಿಸಲು ನಾನಾ ಕಸರತ್ತು ನಡೆಸಿದ್ದಾರೆ.ಬತ್ತಿದ ಕೆರೆಕುಂಟೆ:
ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಕೆರೆಕುಂಟೆಗಳು ಬತ್ತಿಹೋಗಿರುವ ಕಾರಣ ಬೇಸಿಗೆ ಆರಂಭವಾಗುತ್ತಿದ್ದಂತೆ ತಾಪಮಾನ ಹೆಚ್ಚಳವಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿರುವ ಕಾರಣ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಹಾಲು ಉತ್ಪಾದನೆಗೆ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.ಕೊಟ್ಟಿಗೆಯಲ್ಲೇ ಮೇವು ಪೂರೈಕೆ
ತಾಪಮಾನ ಹೆಚ್ಚಳದಿಂದ ಈಗಾಗಲೇ ಹಾಲಿನ ಉತ್ಪಾದನೆ ಕುಂಠಿತಗೊಳ್ಳುತ್ತಿದ್ದು, ಆದಾಯದ ಮೂಲಕ್ಕೆ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ರೈತರು ಹಲವು ಮಾರ್ಗೋಪಾಯಗಳತ್ತ ಗಮನ ಹರಿಸಿದ್ದಾರೆ. ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮಾತ್ರ ಹೊರಗಡೆ ಮೇಯಿಸಲು ಬಿಡುತ್ತಿದ್ದು, ಹೆಚ್ಚಿನ ಸಮಯ ಶೆಡ್‌ಗಳಲ್ಲಿ ಕೂಡಿ ಹಾಕಿ ಹಸಿರು ಮೇವನ್ನು ಪೂರೈಸಲು ಮುಂದಾಗಿದ್ದಾರೆ.ಜೊತೆಗೆ ೨ ರಿಂದ ೩ ಬಾರಿ ನೀರನ್ನು ಕುಡಿಸುತ್ತಾ, ೧ ರಿಂದ ೨ ಬಾರಿ ರಾಸುಗಳ ಮೈಯನ್ನು ತೊಳೆದು ತಂಪು ಮಾಡುತ್ತಿದ್ದಾರೆ. ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ರಾಸುಗಳ ಮೇಲೆ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹಾಕಿ ಆರೈಕೆ ಮಾಡುತ್ತಿದ್ದಾರೆ. ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ, ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿ ಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.ರಾಸುಗಳ ಆರೈಕೆಗೆ ಆದ್ಯತೆ
ಬೇಸಿಗೆಯಲ್ಲಿ ರಾಸುಗಳಿಗೆ ಹೆಚ್ಚಿನ ಆರೈಕೆ ಮಾಡಿದರೆ ಮಾತ್ರ ಉತ್ತಮ ಹಾಲು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ಕೊಡಬೇಕು. ಕೊಟ್ಟಿಗೆಯ ಸುತ್ತಮುತ್ತ ತೋಟ ಮತ್ತು ಹೊಲದ ಬದುವುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಲಭ್ಯವಾಗುತ್ತದೆ.ಜಾನುವಾರುಗಳಿಗೆ ಲಸಿಕೆ
ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸಬೇಕು. ಜಂತು ನಾಶಕ ಔಷಧಿಯನ್ನು ವರ್ಷದಲ್ಲಿ ೨ ರಿಂದ ೩ ಸಾರಿ ಕುಡಿಸಬೇಕು. ಯಾವುದೇ ಕಾಯಿಲೆಯಿಂದ ಬಳಲುವ ಜಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಿ ಅವುಗಳನ್ನು ರಕ್ಷಣೆ ಮಾಡಲು ಮುಂದಾಗಬೇಕು ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮು ಮಾಹಿತಿಯನ್ನು ನೀಡಿದ್ದಾರೆ.