ಸಂಡೂರು: ಸಿದ್ದರಾಮಯ್ಯ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಜಿಲ್ಲೆಯ ಜನರ ಪ್ರೀತಿಯಿಂದ ದೂರ ಮಾಡಿದ್ದರು. ಈಗ ನಾನು ಅನುಭವಿಸಿದ ನೋವನ್ನು ಅವರು ಅನುಭವಿಸುವ ಕಾಲ ಬಂದಿದೆ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನ ಹತ್ತಿರದಲ್ಲಿದೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಬಳ್ಳಾರಿ ಜಿಲ್ಲೆಯನ್ನು ರಾಜ್ಯ, ದೇಶದಲ್ಲಿ ಅಷ್ಟೇ ಅಲ್ಲ, ಪ್ರಪಂಚದಲ್ಲೇ ಪ್ರಸಿದ್ಧ ಕೇಂದ್ರವನ್ನಾಗಿ ಮಾಡುವುದು, ಇಲ್ಲಿ ಜಿಂದಾಲ್‌ನಂತಹ ಹಲವು ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಜಿಲ್ಲೆಯ ಜನತೆಗೆ ಉದ್ಯೋಗಾವಕಾಶಗಳು ದೊರೆತು ಅಭಿವೃದ್ಧಿ ಕಾಣುವಂತಾಗಬೇಕು ಎಂಬ ಕನಸನ್ನು ಹೊಂದಿದ್ದೆ. ಆದರೆ, ನನ್ನ ಕನಸಿಗೆ ತಣ್ಣೀರನ್ನು ಎರಚಲಾಯಿತು. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮನೆ ಮನೆಗೆ ಬಂದು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚಿಸುವೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದರು.
ಬಿಜೆಪಿ ಮುಖಂಡ ಕೆ.ಎಸ್. ದಿವಾಕರ್ ಮಾತನಾಡಿ, ಈ.ತುಕಾರಾಂ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಸಂಡೂರಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಕೊಡಲಾಗಿಲ್ಲ. ನಾರಿಹಳ್ಳಕ್ಕೆ ಸಂಡೂರಿನ ಚರಂಡಿ ನೀರು ಹೋಗಿ ಸೇರುತ್ತಿದೆ. ಸಂಡೂರಿನ ಜನತೆ ಅದೇ ನೀರನ್ನೇ ಕುಡಿಯುವಂತಾಗಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಹಾಗೂ ಜನಾರ್ದನ ರೆಡ್ಡಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ₹೨೦೦ ಕೋಟಿ ವೆಚ್ಚದಲ್ಲಿ ಸಂಡೂರು-ಹೊಸಪೇಟೆ, ಕೂಡ್ಲಿಗಿ, ತೋರಣಗಲ್ಲು, ಶ್ರೀಕುಮಾರಸ್ವಾಮಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.ಸಭೆಗೂ ಮುಂಚೆ ಸಂಡೂರಿಗೆ ಆಗಮಿಸಿದ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಕಲಾ ತಂಡಗಳೊಂದಿಗೆ ಹೂಮಳೆ ಸುರಿಸಿ ಭವ್ಯವಾಗಿ ಸ್ವಾಗತಿಸಲಾಯಿತು. ಗಾಲಿ ಜನಾರ್ಧನ ರೆಡ್ಡಿ ಪಟ್ಟಣದಲ್ಲಿಯ ಪ್ರಭುದೇವರ ಸಂಸ್ಥಾನ ವಿರಕ್ತಮಠಕ್ಕೆ ತೆರಳಿ, ಶ್ರೀಮಠದ ಪ್ರಭುಸ್ವಾಮೀಜಿಯವರ ಆಶೀರ್ವಾದ ಪಡೆದರು. ಸಾರ್ವಜನಿಕ ಸಭೆಯ ನಂತರ ಅವರು ಸಂಡೂರಿನ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿ, ಶ್ರೀಹರಿಶಂಕರ ಹಾಗೂ ಶ್ರೀಉಡಚಲಾಪರಮೇಶ್ವರಿ ದೇವಸ್ಥಾನಗಳಿಗೆ ತೆರಳಿ, ದರ್ಶನ ಪಡೆದರು.