ಹಡೆದವ್ವ, ವೃಕ್ಷದಿಂದ ಪ್ರತಿಯೊಬ್ಬರ ಉಸಿರು: ಸಂತೋಷ ಬಿರಾದಾರ

KannadaprabhaNewsNetwork | Published : Aug 24, 2024 1:26 AM

ಸಾರಾಂಶ

ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕುಕನೂರು ತಾಲೂಕಿನ ಭಾನಾಪುರ ಕ್ರಾಸ್‌ನಿಂದ ಬೆಣಕಲ್ ಗ್ರಾಮದ ವರೆಗೆ ರಸ್ತೆ ಬದಿಯ ಎರಡೂ ಕಡೆ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕುಕನೂರು: ಹಡೆದವ್ವ ಹಾಗೂ ವೃಕ್ಷದಿಂದ ಪ್ರತಿಯೊಬ್ಬರ ಉಸಿರು. ತಾಯಿ ಹಾಗೂ ವೃಕ್ಷದ ಋಣ ತೀರಿಸಲು ಆಗದು ಎಂದು ತಾಪಂ ಇಒ ಸಂತೋಷ ಬಿರಾದಾರ ಹೇಳಿದರು.

ತಾಲೂಕಿನ ಬೆಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ತಾಲೂಕಿನ ಭಾನಾಪುರ ಕ್ರಾಸ್‌ನಿಂದ ಬೆಣಕಲ್ ಗ್ರಾಮದ ವರೆಗೆ ರಸ್ತೆ ಬದಿಯ ಎರಡೂ ಕಡೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನದಲ್ಲಿ ನೆಡುತೋಪು ನಿರ್ಮಾಣ ಹಾಗೂ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರಗಳು ನಮ್ಮನ್ನು ರಕ್ಷಿಸುವ ತಾಯಿ ಇದ್ದ ಹಾಗೆ. ಸಸಿಗಳು ಬೆಳೆದು ಮರವಾಗಬೇಕಾದರೆ ಅವುಗಳಿಗೆ ಪೋಷಣೆ ಅವಶ್ಯಕ. ಅದಕ್ಕಾಗಿ ತಾಯಿ ಯಾವ ರೀತಿ ಮಕ್ಕಳನ್ನು ನೋಡಿಕೊಳ್ಳುತ್ತಾಳೆಯೋ ಅದೇ ರೀತಿ ಸಸಿಗಳನ್ನು ಶಾಲಾ ವಿದ್ಯಾರ್ಥಿಗಳು ಒಂದೊಂದು ಗಿಡ ದತ್ತು ತೆಗೆದುಕೊಂಡು ಪೋಷಣೆ ಮಾಡಬೇಕು. ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ನೆಡಿಸುತ್ತಾರೆ. ಆದರೆ ಸರಿಯಾದ ಪೋಷಣೆ ಇಲ್ಲದೇ ಸಸಿಗಳು ಬೆಳೆದು ಮರವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಗಿಡ ಬೆಳೆಸಬೇಕು ಎನ್ನುವ ಉದ್ದೇಶದಿಂದ ತಾಯಿಯ ಹೆಸರಿನಲ್ಲಿ ಮರ ನೆಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಸೂಚಿಸಿದೆ. ಅದರಂತೆ ಮಾ. 31ರ ಒಳಗಾಗಿ ದೇಶಾದ್ಯಂತ ₹140 ಕೋಟಿ ಮರಗಳನ್ನು ನೆಡಬೇಕು.ಅವುಗಳನ್ನು ಪೋಷಿಸಬೇಕು ಎಂದರು.

ಅರಳಿ ಮರ, ಬಸರಿ ಗಿಡ, ಹೊಂಗೆ, ರೇನ್ ಟ್ರೀ, ಸಿಹಿ ಹುಣಸಿ, ಬೇವು, ಸೇರಿದಂತೆ ವಿಶೇಷ ತಳಿಯ ಗಿಡಗಳನ್ನು ನೆಡಲಾಯಿತು. ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಶಾಲಾ ಮಕ್ಕಳಿಗೆ ನೀಡಿ, ಅವುಗಳನ್ನು ಪೋಷಣೆ ಮಾಡುವ ಪ್ರತಿಜ್ಞೆ ಬೋಧಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಜಂಬಣ್ಣ ನಡುಲಮನಿ, ತಾಪಂ ಗ್ರಾಮೀಣ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಯಲಬುರ್ಗಾ ಸಾಮಾಜಿಕ ಅರಣ್ಯ ವಲಯದ ಬಸವರಾಜ ಗೋಗೆರಿ, ಪಿಡಿಒ ಕೃಷ್ಣರಡ್ಡಿ ಬಿ., ವಿದ್ಯಾರ್ಥಿಗಳು, ಶಿಕ್ಷಕರಿದ್ದರು.

Share this article