ಲಕ್ಷ್ಮೇಶ್ವರ: ಕಲಿತ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಕೂಡಿ ಶಾಲಾ ಅಭಿವೃದ್ಧಿಗೆ ಮುಂದಾಗಬೇಕು ಹಾಗೂ ಅಕ್ಷರ ಕಲಿಸಿದ ಗುರುವನ್ನು ಜೀವನದಲ್ಲಿ ಎಂದೂ ಮರೆಯಬಾರದು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಮಹಾಸ್ವಾಮಿಗಳು ಹೇಳಿದರು.
ಶನಿವಾರ ಪಟ್ಟಣದ ವರ್ತಕರ ಸಭಾ ಭವನದಲ್ಲಿ ಹಳ್ಳದಕೇರಿ ಓಣಿಯ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಯೋಗದಲ್ಲಿ ನಿವೃತ್ತ ಯೋಧರಿಗೆ ಹಾಗೂ ಪ್ರಗತಿಪರ ರೈತರಿಗೆ ಹಾಗೂ 2024-25 ಸಾಲಿನ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ನಮಗೆ ಅಕ್ಷರ ಅರಿವು ನೀಡಿದ ಗುರುಗಳಿಗೆ, ಸೈನಿಕರಿಗೆ ಮತ್ತು ರೈತರಿಗೆ ನಾವು ಯಾವತ್ತೂ ಚಿರಋುಣಿಯಾಗಿರಬೇಕು. ಊಟ ಕೊಡುವ ಅನ್ನದಾತನನ್ನು ಪ್ರತಿಯೊಬ್ಬರು ನೆನೆಯಬೇಕು. ಅದೇ ರೀತಿ ದೇಶ ರಕ್ಷಣೆಗಾಗಿ ಲಕ್ಷಾಂತರ ಯೋಧರು ಗಡಿ ಕಾಯುತ್ತಿದ್ದಾರೆ ಅವರ ಸೇವೆ ತ್ಯಾಗ ಯುವಕರು ನೆನೆಯಬೇಕು. ಪ್ರತಿಯೊಬ್ಬರಲ್ಲಿಯು ದೇಶ ಪ್ರೇಮ ಬೆಳೆಯಬೇಕು. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದರಿಂದ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಸಿ. ರಟಗೇರಿ ವಹಿಸಿದ್ದರು. ಈ ವೇಳೆ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಹವಳದ, ನಿವೃತ್ತ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಎನ್. ಪಂಚಬಾವಿ, ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೆದ, ಎ.ಎಸ್. ತೋರಾತ, ಸಿ.ಎಸ್. ನದಾಫ, ಸಿ.ಎಸ್. ನದಾಪ, ಎ.ಎಸ್. ಪಾಟೀಲ್, ಎಲ್.ವಿ. ಮುದೆನೂರ, ಐ.ಸಿ. ಕಣವಿ, ವಿ.ಜಿ. ಜಾಧವ, ಎಂ.ಆರ್.ಹಿರೇಮಠ ಸೇರಿದಂತೆ ಶಾಲೆ ಶಿಕ್ಷಕರ ಸಿಬ್ಬಂದಿಗಳು ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಇದ್ದರು. ಈ ವೇಳೆ ಮುದಗಲ್ಲ ನಿರೂಪಿಸಿದರು, ಚಂದ್ರು ಮಾಗಡಿ ವಂದಿಸಿದರು.