ಸಮರ್ಥರಿಗೆ ಶಕ್ತಿ ತುಂಬಲು ಕುಂಚಿಟಿಗ ಮುಖಂಡರ ನಿರ್ಧಾರ

KannadaprabhaNewsNetwork |  
Published : Mar 06, 2024, 02:19 AM IST
ಸಭೆ............. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕುಂಚಿಟಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯತೆ ಪಡೆಯಲು, ಸಮರ್ಥ ನಾಯಕರಿಗೆ ಒಗ್ಗಟ್ಟಿನಿಂದ ಬೆಂಬಲ ನೀಡಿ ಶಕ್ತಿ ತುಂಬುವ ಬಗ್ಗೆ ಜಿಲ್ಲೆಯ ಕುಂಚಿಟಿಗ ಸಮುದಾಯದ ಮುಖಂಡರು ತೀರ್ಮಾನ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ಕುಂಚಿಟಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯತೆ ಪಡೆಯಲು, ಸಮರ್ಥ ನಾಯಕರಿಗೆ ಒಗ್ಗಟ್ಟಿನಿಂದ ಬೆಂಬಲ ನೀಡಿ ಶಕ್ತಿ ತುಂಬುವ ಬಗ್ಗೆ ಜಿಲ್ಲೆಯ ಕುಂಚಿಟಿಗ ಸಮುದಾಯದ ಮುಖಂಡರು ತೀರ್ಮಾನ ತೆಗೆದುಕೊಂಡರು.

ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಸಮುದಾಯದ ರಾಜಕೀಯ ನಾಯಕತ್ವ ಕುರಿತು ಚರ್ಚೆ ನಡೆಯಿತು. ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮಟ್ಟದ ಕುಂಚಿಟಿಗ ಮುಖಂಡರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಿ ಸಮುದಾಯದ ನಾಯಕರಿಗೆ ಬೆಂಬಲ ನೀಡಿ ರಾಜಕೀಯ ಪ್ರಾತಿನಿಧ್ಯ ಕಾಪಾಡಿಕೊಳ್ಳಲು ತೀರ್ಮಾನಿಸಲಾಯಿತು.

ಕುಂಚಿಟಿಗ ಸಮುದಾಯದ ಬಿಎಲ್ ಗೌಡ, ಕೆ.ಮಲ್ಲಣ್ಣ, ಸಿ ಪಿ ಮೂಡಲಗಿರಿಯಪ್ಪ, ಟಿ ಬಿ ಜಯಚಂದ್ರ, ಬಿ.ಸತ್ಯನಾರಾಯಣ, ಎಂ.ವಿ ವೀರಭದ್ರಯ್ಯ ಮತ್ತಿತರರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ನಾಯಕರಾಗಿದ್ದರು. ಅವರ ತರುವಾಯ ಕುಂಚಿಟಿಗರಲ್ಲಿ ನಾಯಕತ್ವದ ಕೊರತೆಯಾಗದಂತೆ ಸಮರ್ಥ ನಾಯಕರನ್ನು ರೂಪಿಸುವ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆಯಾಗಬೇಕು ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. ಮುರಳೀಧರ ಹಾಲಪ್ಪ ಮಾತನಾಡಿ, ಕುಂಚಿಟಿಗ ಸಮುದಾಯದ ಧ್ವನಿಯಾಗಿ ಮುಖಂಡರು ಸ್ಪಂದಿಸಬೇಕು. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆಅಗತ್ಯ ನೆರವು, ಮಾರ್ಗದರ್ಶನ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.ಉನ್ನತ ಹುದ್ದೆಯಲ್ಲಿರುವ ಕುಂಚಿಟಿಗ ಅಧಿಕಾರಿಗಳು ಸಮುದಾಯದ ಬಡ, ಆಸಕ್ತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಮಾರ್ಗದರ್ಶನ ನೀಡಿ, ಉತ್ತಮ ಬದುಕು ರೂಪಿಸಿಕೊಳ್ಳಲು ನೆರವಾಗಬೇಕು ಎಂದರು.

ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಸಂಘದ ಮಾಜಿ ಅಧ್ಯಕ್ಷ ಲಿಂಗಣ್ಣ, ದೊಡ್ಡಲಿಂಗಪ್ಪ, ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಮುರಳೀಧರ ಹಾಲಪ್ಪನವರು ಸಮರ್ಥ ನಾಯಕರಾಗಿ ರೂಪುಗೊಳ್ಳಲು ಸಮುದಾಯ ಶಕ್ತಿ ತುಂಬಬೇಕು ಎಂಬ ನಿರ್ಧಾರ ಕೈಗೊಂಡರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...