ಪೋಡಿ ಮಾಡಲು ಲಕ್ಷ್ಮಿಸಾಗರ ಗ್ರಾಮಸ್ಥರ ಆಗ್ರಹ

KannadaprabhaNewsNetwork | Published : Feb 14, 2024 2:20 AM

ಸಾರಾಂಶ

ಹಾಸನದ ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಮೀಕ್ಷೆ ಮಾಡಿ, ಪೋಡಿ ಮಾಡಿಕೊಡುವಂತೆ ಕೆಪಿಆರ್‌ಎಸ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ನೊಂದ ಕುಟುಂಬದವರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ । ಸಮೀಕ್ಷೆಗೆ ಆಗ್ರಹಹಾಸನ: ತಾಲೂಕಿನ ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಮೀಕ್ಷೆ ಮಾಡಿ, ಪೋಡಿ ಮಾಡಿಕೊಡುವಂತೆ ಕೆಪಿಆರ್‌ಎಸ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ನೊಂದ ಕುಟುಂಬದವರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ೨೬ ಕುಟುಂಬಗಳಿಗೆ ತಲಾ ೦.೨೬ ಎಕರೆ ಭೂಮಿಯನ್ನು ೧೯೭೭ ರಲ್ಲಿ ಬಗರ್ ಹುಕುಂ ಸಾಗುವಳಿಯ ಅಧಾರದಲ್ಲಿ ಮಂಜೂರು ಮಾಡಿ ಹಂಗಾಮಿ ಸಾಗುವಳಿ ಚೀಟಿಯನ್ನು ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಅವರ ಸ್ವಾಧೀನದಲ್ಲಿರುತ್ತದೆ. ಪಹಣಿಗಳಲ್ಲೂ ಇವರ ಹೆಸರು ಬರುತ್ತಿವೆ. ೧೯೯೭ ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ನೀಡಿದ್ದಾರೆ. ಆದರೆ ೨೬ ಕುಟುಂಬಗಳಿಗೆ ಮಂಜೂರಾಗಿದ್ದ ತಲಾ ೨೬ ಗುಂಟೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರೈತರು ಈಗಲೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಪೋಡಿ ಮಾಡಿಕೊಡಬೇಕಾಗಿ ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಮನವಿ ಮಾಡಿಕೊಳ್ಳುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ವೈ, ಮುಖಂಡ ಎಂ.ಜಿ.ಪೃಥ್ವಿ, ಸಿಐಟಿಯು ಕಾರ್ಯದರ್ಶಿ ಅರವಿಂದ್, ಲಕ್ಷ್ಮೀಸಾಗರ್. ಗ್ರಾಮದ ಜಯಲಕ್ಷ್ಮಿ, ರಾಜೇಶ್, ಜಯಮ್ಮ, ಮೂರ್ತಿ, ಸ್ವಾಮಿ, ಶ್ರೀನಿವಾಸ್ ಇದ್ದರು.ಕೆಪಿಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಲಕ್ಷ್ಮಿಸಾಗರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Share this article