ಹಂಪಿ ಮಾದರಿಯಲ್ಲಿ ಉಳಿದ ಸ್ಮಾರಕಗಳ ಅಭಿವೃದ್ಧಿ ಪಣ: ಸಚಿವ ಎಚ್‌.ಕೆ. ಪಾಟೀಲ್‌

KannadaprabhaNewsNetwork |  
Published : Mar 02, 2025, 01:18 AM IST
1ಎಚ್‌ಪಿಟಿ24-ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ಎರಡನೇ ದಿನದ ಕಾರ್ಯಕ್ರಮಗಳಿಗೆ ಸಚಿವ ಎಚ್‌.ಕೆ. ಪಾಟೀಲ್ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಮಾದರಿಯಲ್ಲಿ ಉತ್ತರ ಕರ್ನಾಟಕದ ಉಳಿದ ಸ್ಮಾರಕಗಳ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದೇವೆ. ಜನರು ಕೂಡ ಈ ಭಾಗದ ಸ್ಮಾರಕಗಳನ್ನು ವೀಕ್ಷಿಸಿ ಪರಂಪರೆ ಉಳಿಸಬೇಕು.

ಕನ್ನಡಪ್ರಭ ವಾರ್ತೆ ಹಂಪಿ (ಎಂ.ಪಿ. ಪ್ರಕಾಶ ಪ್ರಧಾನ ವೇದಿಕೆ)

ವಿಶ್ವ ವಿಖ್ಯಾತ ಹಂಪಿ ಮಾದರಿಯಲ್ಲಿ ಉತ್ತರ ಕರ್ನಾಟಕದ ಉಳಿದ ಸ್ಮಾರಕಗಳ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದೇವೆ. ಜನರು ಕೂಡ ಈ ಭಾಗದ ಸ್ಮಾರಕಗಳನ್ನು ವೀಕ್ಷಿಸಿ ಪರಂಪರೆ ಉಳಿಸಬೇಕು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್ ಹೇಳಿದರು.

ಹಂಪಿ ಉತ್ಸವದ ಎಂಪಿ ಪ್ರಕಾಶ ವೇದಿಕೆಯಲ್ಲಿ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಂಪಿ ಮಾದರಿಯಲ್ಲಿ ರಾಜ್ಯದ 25 ಸಾವಿರ ಸ್ಮಾರಕ ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೀಡು. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಹಲವು ಮೊದಲುಗಳಿಗೆ ಹಂಪಿ ಉತ್ಸವ ಸಾಕ್ಷಿಯಾಗಿದೆ. ಎಂ.ಪಿ. ಪ್ರಕಾಶ ಅವರು ಉತ್ಸವಗಳ ಆಚರಣೆಗೆ ಅಡಿಪಾಯ ಹಾಕಿದ್ದಾರೆ. ಅವರ ಮಾರ್ಗದಲ್ಲಿ ರಾಜ್ಯದೆಲ್ಲಡೆ ಇರುವ ಪ್ರವಾಸಿ ತಾಣಗಳಲ್ಲಿ ಉತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವದ ಆಯೋಜನೆಗೆ ಪ್ರೇರಣೆ ಆಗಿದ್ದಾರೆ. ಈಗಾಗಲೇ ಗತ ವೈಭವ ಸಾರುವ ಉತ್ಸವದ ವೀಕ್ಷಣೆಗೆ 3ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಇನ್ನೂ ಕೊನೇ ದಿನ 3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಆರು ಲಕ್ಷ ಜನ ಉತ್ಸವ ನೋಡಲಿದ್ದಾರೆ. ಉತ್ಸವಕ್ಕೆ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ ಎಂದರು.

ಹಂಪಿ ಎಂದ್ರೆ ಕರ್ನಾಟಕ. ಇಲ್ಲಿ ಪ್ರತಿ ಕಲ್ಲು-ಕಲ್ಲುಗಳು ಕಥೆ ಹೇಳುತ್ತವೆ. ಹಲವು ಜನರಿಗೆ ಇಲ್ಲಿನ ಸ್ಮಾರಕಗಳು ಬರೀ ಕಲ್ಲು, ಬಂಡೆ ಎನಿಸುತ್ತದೆ. ಆದರೆ ಇದರ ಇತಿಹಾಸ ಬಲು ರೋಚಕ. ಕರ್ನಾಟಕ ನಾಮಕರಣ ಆಗಿ 50 ವರ್ಷ ಆಗಿದ್ದರಿಂದ ಸುವರ್ಣ ಕರ್ನಾಟಕ ಆಚರಣೆ ಮಾಡಲಾಗಿದೆ. ಕರ್ನಾಟಕದ ಮೊದಲ ಜ್ಯೋತಿ ಹಂಪಿ ವಿರೂಪಾಕ್ಷೇಶ್ವರನ ಬಳಿ ಬಂದಿತ್ತು. ಇದು ಮಂತ್ರ ಕಣ, ಶಕ್ತಿ ಕಣ, ದೇವಿ ಕಣ ಅಂತಾ ಹೇಳುವ ಕವಿ ಕುವೆಂಪು ಅವರ ವಾಣಿಯಂತೆ. ನಾವು ಈ ನಾಡಿನಲ್ಲಿ ಜನಿಸಿದ್ದೇ ಧನ್ಯ. ಇಂತಹ ಕರ್ನಾಟಕದ ವಾರಸುದಾರರು ನಾವೆಲ್ಲ ಎನ್ನುವುದೇ ಹೆಮ್ಮೆ. ಹಂಪಿಯನ್ನು ಜಗತ್ತಿನೊಳಗೆ ಇತಿಹಾಸಕಾರರು ಹೊಗಳ್ತಿದ್ದಾರೆ. ಇದೇ ಕಾರಣಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ಈ ಹಂಪಿಯನ್ನು ಕಟ್ಟುವಲ್ಲಿ ವಿಜಯನಗರ ಅರಸರ ಶ್ರಮ ಅಪಾರ ಇದೆ. ವಿಜಯನಗರ ಸಾಮ್ರಾಜ್ಯ ಸರ್ವ ಜನಾಂಗದ ತೋಟ. ಇಲ್ಲಿ ಎಲ್ಲ ಜಾತಿಯ ಜನರು ಇದ್ದಾರೆ. ಎಲ್ಲ ಬಗೆಯ ಕಲೆ, ಸಾಹಿತ್ಯ, ನಾಟಕ, ವ್ಯಾಪಾರ ಎಲ್ಲದಕ್ಕೂ ಇದು ವೇದಿಕೆಯಾಗಿತ್ತು. ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿ ಆಗಿರುವ ಹಂಪಿಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಇಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದೀರಿ, ಉತ್ಸವಕ್ಕೆ ಇಷ್ಟೊಂದು ಜನ ಹರಿದು ಬಂದಿರುವುದು ಖುಷಿ ನೀಡಿದೆ. ಇಲ್ಲಿಗೆ ಬರೋ ಜನ ಲಕ್ಕುಂಡಿ, ಬದಾಮಿ, ವಿಜಯಪುರ ಸೇರಿದಂತೆ ಎಲ್ಲಾ ಕಡೆ ಹೋಗಬೇಕು. ಅಭಿಮಾನದ ಇತಿಹಾಸವನ್ನ, ನಮ್ಮತನವನ್ನ ಮೆರೆಯಬೇಕು. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನ ಉಳಿಸಬೇಕು ಎಂದರು.

ಶಾಸಕ ಎಚ್.ಆರ್. ಗವಿಯಪ್ಪ, ಡಾ. ಎನ್‌.ಟಿ. ಶ್ರೀನಿವಾಸ, ದೇವೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ನಗರಸಭೆ ಅಧ್ಯಕ್ಷ ರೂಪೇಶಕುಮಾರ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಂ ಷಾ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ