ಮತ ಎಣಿಗೆಕೆ ಜಿಲ್ಲಾಡಳಿತ ಸಕಲ ಸಿದ್ಧತೆ

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ಜೂ.4ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೂ.4ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ. ಬಹುತೇಕ ಮಧ್ಯಾಹ್ನ 12 ಗಂಟೆಯವರೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಅಭ್ಯರ್ಥಿಗಳು, ಚುನಾವಣೆ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಅಂದು ಬೆಳಗ್ಗೆ 7 ಗಂಟೆಗೆ ಹಾಜರಿರಲು ತಿಳಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ತಲಾ ಒಂದು ಭದ್ರತಾ ಕೊಠಡಿ ಹಾಗೂ ಒಂದು ಮತ ಎಣಿಕೆ ಕೊಠಡಿ ಮಾಡಲಾಗಿದೆ.

ಮತ ಎಣಿಕೆಗೆ 14 ಟೇಬಲ್‌ ವ್ಯವಸ್ಥೆ:ಪ್ರತಿ ಮತಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 22ರ ಕೊಠಡಿಯಲ್ಲಿ 14 ಟೇಬಲ್ ಹಾಗೂ 20ಎ ಕೊಠಡಿಯಲ್ಲಿ 10 ಟೇಬಲ್‌ ಗಳು ಮತ್ತು ಇಟಿಪಿಬಿಎಸ್ ಸ್ಕ್ಯಾನಿಂಗ್‌ಗಾಗಿ ಕೊಠಡಿ ಸಂ.20ಎ ರಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ನೆಲಮಹಡಿಯಲ್ಲಿ ರೂ.ನಂ.3ರಲ್ಲಿ ಮುಧೋಳ ಮತ ಕ್ಷೇತ್ರ, ರೂ.ನಂ.11ರಲ್ಲಿ ಬೀಳಗಿ ಮತಕ್ಷೇತ್ರ, ರೂ.ನಂ.24ರಲ್ಲಿ ಬಾದಾಮಿ ಮತಕ್ಷೇತ್ರ, ರೂ.ನಂ.15ರಲ್ಲಿ ನರಗುಂದ ಮತಕ್ಷೇತ್ರ ಹಾಗೂ ಮೊದಲನೇ ಮಹಡಿಯಲ್ಲಿ ರೂನಂ.110ರಲ್ಲಿ ತೇರದಾಳ, ರೂ.ನಂ.115ರಲ್ಲಿ ಜಮಖಂಡಿ, ರೂ.ನಂ.102ರಲ್ಲಿ ಬಾಗಲಕೋಟೆ ಹಾಗೂ ರೂ.ನಂ.123ರಲ್ಲಿ ಹುನಗುಂದ ಮತಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ.

ಪ್ರತಿ ಟೇಬಲ್‌ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರ್ವರ್‌ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಓರ್ವ ಸಹಾಯಕ ಚುನಾವಣಾಧಿಕಾರಿ ಇರುತ್ತಾರೆ. ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಸಲುವಾರಿ 14 ಟೇಬಲ್‌ಗಳನ್ನು ಮಾಡಲಾಗಿದ್ದು, 14 ಸ್ಕ್ಯಾನಿಂಗ್ ಮೇಲ್ವಿಚಾರಕರು, 14 ಅಸಿಸ್ಟಂಟ್ ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕಾಯ್ದಿಟ್ಟ ಸಿಬ್ಬಂದಿಸೇರಿದಂತೆ ಎಣಿಕೆ ಕಾರ್ಯಕ್ಕೆ 645 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಭದ್ರತೆಗಾಗಿ 600 ಪೊಲೀಸರು:ಸುಗಮ ಮತ ಎಣಿಕೆ ಕಾರ್ಯಕ್ಕೆ ಓರ್ವ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 4 ಜನ ಡಿಎಸ್ಪಿ, 10 ಸಿಪಿಐ, 27 ಪಿಎಸ್ಐ, 57 ಎ.ಎಸ್.ಐ, 126 ಹೆಡ್ ಕಾನ್ಸಟೇಬಲ್, 273 ಪೊಲೀಸ್, 25 ಡಬ್ಲುಪಿಸಿ, ಇಬ್ಬರು ಕೆ.ಎಸ್.ಆರ್.ಪಿ ಹಾಗೂ 6 ಜನ ಡಿಎಆರ್ ಸಿಬ್ಬಂದಿ ನೇಮಿಸಲಾಗಿದೆ.

ನಿಷೇಧಾಜ್ಞೆ ಜಾರಿ: ಜೂ.4ರ ಬೆಳಗ್ಗೆ 6 ರಿಂದ ಜೂನ್ 7ರ ಬೆಳಗ್ಗೆ 6 ಗಂಟೆವರೆಗೆ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ಅನ್ನು ಜಾರಿ ಮಾಡಲಾಗಿ ಆದೇಶಿಸಲಾಗಿದೆ. ಅಲ್ಲದೆ, ಜೂ.3ರ ಮಧ್ಯರಾತ್ರಿ 12 ಗಂಟೆಯಿಂದ ಜೂ.4ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಹಾಗೂ ವಹಿವಾಟು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಬದಲಾಗಲಿದೆ ರಸ್ತೆ ಮಾರ್ಗ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯುವುದರಿಂದ ಆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸೀಮಿಕೇರಿ-ಹುಬ್ಬಳ್ಳಿ ಬೈಪಾಸ್ ರಸ್ತೆಯ ತೇಜಸ್ ಸ್ಕೂಲ್‌ನಿಂದ ಸಿಮಿಕೇರಿ ಬೈಪಾಸ್ ರಸ್ತೆಯವರೆಗೆ ಸಾರ್ವಜನಿಕ ವಾಹನ ಓಡಾಡುವುದನ್ನು ಜೂ.4ರಂದು ಬೆಳಗ್ಗೆ 5 ರಿಂದ ಮತ ಎಣಿಕೆ ಮುಗಿಯುವವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಬೆಳಗಾವಿ ಮತ್ತು ವಿಜಯಪುರಕ್ಕೆ ಹೋಗುವ ಸಾರ್ವಜನಿಕರು ಉತ್ತರಾಧಿಮಠ, ನ್ಯೂ ಐಬಿ, ಗದ್ದನಕೇರಿ ಗ್ರಾಮ ಮತ್ತು ಗದ್ದನಕೇರಿ ಕ್ರಾಸ್ ಮೂಲಕ ಹೋಗುವುದು ಮತ್ತು ಹುಬ್ಬಳ್ಳಿ ಕಡೆಗೆ ಹೋಗುವ ಸಾರ್ವಜನಿಕರು ಸೆಕ್ಟರ್‌ ನಂ.57ರ ಮೂಲಕ ಸಬ್ ಜೈಲ್‌ ಕ್ರಾಸ್, ಗದ್ದನಕೇರಿ ತಾಂಡಾ ಮತ್ತು ಕಂಠಿ ರೆಸಾರ್ಟ್‌ ಮೂಲಕ ಸಂಚರಿಸಬಹುದಾಗಿದೆ.

Share this article