ಶಿವಕುಮಾರ ಕುಷ್ಟಗಿ
ಗದಗ: ಅತ್ಯುತ್ತಮವಾದ ಹೊಸ ಕಟ್ಟಡ ನಿರ್ಮಾಣ ಮಾಡುವ ನೆಪದಲ್ಲಿ ಗದಗ ತಾಲೂಕು ಪಂಚಾಯ್ತಿ ಕಟ್ಟಡವನ್ನು ಕೆಡವಿ ಹಾಕಿರುವ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮರಳಿ ಅತ್ತ ನೋಡದೇ ಇರುವ ಹಿನ್ನೆಲೆಯಲ್ಲಿ ಪಾಳು ಬಿದ್ದು ಹೋಗಿದ್ದು, ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ, ಅಧಿಕಾರಿಗಳ ಅಸಡ್ಡೆಗೆ ಉತ್ತಮ ನಿದರ್ಶನವಾಗಿದೆ.
7 ವರ್ಷಗಳ ಹಿಂದೆ ಆರಂಭವಾದ ಈ ಕಟ್ಟಡದ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತು ಪಾಳುಬಿದ್ದಿದೆ. ಅತ್ಯುತ್ತಮವಾಗಿಯೇ ಇದ್ದ ಮುಖ್ಯವಾಗಿ ಪುರಾತನ ಕಟ್ಟಡದಂತಿದ್ದ ಹಳೆಯ ಕಟ್ಟಡವನ್ನು ಯಾವ ಕಾರಣಕ್ಕಾಗಿ ಪುನರ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡರೋ ಯಾರಿಗೂ ಗೊತ್ತಿಲ್ಲ, ಆದರೆ ಪುನರ್ ನಿರ್ಮಾಣ ಮಾಡಿಲ್ಲ, ಹಳೆಯ ಕಟ್ಟಡವನ್ನು ಬಿಟ್ಟಿಲ್ಲ ಹಾಗಾಗಿ ತಾಪಂ ಕಟ್ಟಡವೀಗ ತ್ರಿಶಂಕು ಸ್ಥಿತಿಯಲ್ಲಿದೆ.
ನನೆಗುದಿಗೆ ಬಿದ್ದ ಕಾಮಗಾರಿ: ಅವಳಿ ನಗರದ ಹೃದಯ ಭಾಗವಾದ ಮಹಾತ್ಮಾ ಗಾಂಧಿ ವೃತ್ತದ ಸಮೀಪದಲ್ಲಿಯೇ ತಾಪಂ ಕಚೇರಿ ಇತ್ತು. ಆದರೆ ಮರು ನಿರ್ಮಾಣಕ್ಕಾಗಿ 2017-18ರಲ್ಲಿ ಸರ್ಕಾರ 3 ಕೋಟಿ ಅನುದಾನ ಘೋಷಿಸಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL)ಕ್ಕೆ ಗುತ್ತಿಗೆ ನೀಡಿ, ಆರಂಭಿಕವಾಗಿ 1 ಕೋಟಿ ಬಿಡುಗಡೆ ಮಾಡಿತ್ತು. ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅಡಿಪಾಯದವರೆಗೆ ಕಾಮಗಾರಿ ನಡೆದಿದ್ದೇ ಸಾಧನೆಯಾಗಿದೆ. ಆದರೆ, ಉಳಿದ 2 ಕೋಟಿ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪ್ರಸ್ತುತ ಸ್ಥಳದಲ್ಲಿ ಮುಳ್ಳು ಕಂಟಿಗಳು ಬೆಳೆದು ಪಾಳು ಬಿದ್ದು ಹೋಗಿದೆ.
ಇಚ್ಛಾಶಕ್ತಿ ಕೊರತೆ:2018-19ರಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅನುದಾನ ಬಿಡುಗಡೆಗೆ ಯಾವುದೇ ಪ್ರಯತ್ನ ಮಾಡಿಲ್ಲ. ಕೆಆರ್‌ಐಡಿಎಲ್ ಅಧಿಕಾರಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಸರ್ಕಾರ ಕೆಆರ್‌ಐಡಿಎಲ್‌ಗೆ ನೇರವಾಗಿ ಅನುದಾನ ನೀಡಿದ್ದರಿಂದ, ತಾಪಂ ಅಧಿಕಾರಿಗಳು ಈ ವಿಷಯದಲ್ಲಿ ಜಾಣ ಮೌನ ವಹಿಸುತ್ತಿದ್ದು, ಇದರಿಂದಾಗಿ ಏಳು ವರ್ಷಗಳಿಂದಲೂ ಕಟ್ಟಡ ಮೇಲೇಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಅಸ್ತವ್ಯಸ್ತಗೊಂಡ ಕಚೇರಿ ಕಾರ್ಯನಿರ್ವಹಣೆ: ನೂತನ ಕಟ್ಟಡ ಮಂಜೂರಾದ ನಂತರ ತಾಪಂ ಕಚೇರಿಯನ್ನು ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಗಳ ಮೇಲಿನ ಮಹಡಿಗೆ ಸ್ಥಳಾಂತರಿಸಲಾಯಿತು. ಆದರೆ, ಆ ಕಟ್ಟಡ ಚಿಕ್ಕದಾಗಿರುವುದರಿಂದ ಕೆಲವು ವಿಭಾಗಗಳು ಮತ್ತೊಂದು ಪಕ್ಕದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ತಾಪಂ ಸಭೆಗಳನ್ನು ಬೇರೆ ಬೇರೆ ಸಭಾಭವನದಲ್ಲಿ ನಡೆಸಲಾಗಿದೆ.
ವೆಚ್ಚ ಹೆಚ್ಚಳ: 2017-18ರಲ್ಲಿ 3 ಕೋಟಿ ಅಂದಾಜು ಮಾಡಿದ್ದ ಕೆಆರ್‌ಐಡಿಎಲ್, ಈಗ 4 ಕೋಟಿ ಬಿಡುಗಡೆ ಮಾಡುವಂತೆ ತಾಪಂ ಅಧಿಕಾರಿಗಳಿಗೆ ಪತ್ರ ಬರೆದಿದೆ. ಅನುದಾನ ವಿಳಂಬದಿಂದಾಗಿ ನಿರ್ಮಾಣ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಗದಗ ತಾಪಂ ಕಟ್ಟಡವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅನುದಾನ ಬಿಡುಗಡೆಯ ವಿಳಂಬದಿಂದಾಗಿ 7 ವರ್ಷದಿಂದ ಅರ್ಧಕ್ಕೆ ನಿಂತಿದೆ.
ಗದಗ ತಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಆರ್‌ಐಡಿಎಲ್ ಅಧಿಕಾರಿಗಳಿಂದ ಪರಿಷ್ಕೃತ ಅಂದಾಜು ವೆಚ್ಚ ಪಡೆದು, ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆಗೆ ಕೋರಲಾಗುವುದು ಎಂದು ತಾಪಂ ಇಒ ಮಲ್ಲಯ್ಯ ಕೊರವನವರ ಹೇಳಿದರು.