ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿ ಮಹಿಳೆ: ಡಾ. ನೀಲಮ್ಮ ತಾಯಿ ಅಸುಂಡಿ

KannadaprabhaNewsNetwork | Published : Mar 19, 2024 12:49 AM

ಸಾರಾಂಶ

ಗದಗ ನಗರದ ಆದಿಶಕ್ತಿ ನಗರದ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ ಎಂದು ಡಾ. ನೀಲಮ್ಮ ತಾಯಿ ಅಸುಂಡಿ ಹೇಳಿದರು.

ಗದಗ: ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿ ಎಂದರೆ ಅದು ಮಹಿಳೆ. ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಮಹತ್ವದ ಸ್ಥಾನ ವಹಿಸುತ್ತಾಳೆ ಎಂದು ಡಾ. ನೀಲಮ್ಮ ತಾಯಿ ಅಸುಂಡಿ ಹೇಳಿದರು.ನಗರದ ಆದಿಶಕ್ತಿ ನಗರದ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ ಎಂದು ಹೇಳಿದರು. ಇಂದಿನ ಯುವ ಜನಾಂಗದ, ಒಂದು ಕುಟುಂಬದ, ಸಮಾಜದ ಬಹುದೊಡ್ಡ ಶಕ್ತಿಯಾಗಿ ಮಹಿಳೆಯ ಪಾತ್ರ ಹಿರಿದಾಗಿದೆ. ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ''ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವಾಗಿ'' ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿಯಾಗಿ, ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ತಾಯಿಯ ಜವಾಬ್ದಾರಿ ಮುಖ್ಯವಾಗುತ್ತದೆ ಎಂದು ಹೇಳಿದರು. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳೆ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಂಡು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸುವ ದಿಟ್ಟತನ ತೋರಬೇಕು. ಮಹಿಳೆ ಮತ್ತು ಪುರುಷ ಎರಡು ಭಿನ್ನ ಅಲ್ಲ. ಜೀವನದ ಎರಡು ಬಂಡಿಗಳಂತೆ. ಒಂದಕ್ಕೊಂದು ಸರಿ ಹೊಂದಿಕೊಂಡು ಬದುಕನ್ನು ಸುಂದರವಾಗಿ ನಿಭಾಯಿಸುವ ಕೌಶಲ ಕಲಿತಾಗ ಅದು ನಿಜವಾದ ಮಹಿಳಾ ಸಬಲೀಕರಣವಾಗುತ್ತದೆ ಎಂದರು. ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿ, ಮಹಿಳೆ ಇಂದು ಬಹು ಆಯಾಮಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಜತೆಗೆ ಮನೆ ಬೆಳಗುವ ನಂದಾದೀಪವಾಗಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಮಹಾ ಶಿಕ್ಷಕಿಯಾಗಿ, ಬದುಕಿಗೆ ಮಾರ್ಗ ತೋರುವ ಮಾರ್ಗದರ್ಶಿಯಾಗಿದ್ದಾಳೆ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ದೌರ್ಜನ್ಯಗಳು ಇಂದಿಗೂ ಮಹಿಳೆಯ ಮೇಲೆ ಆಗುತ್ತಿರುವುದು ಬೂದಿ ಮುಚ್ಚಿದ ಕೆಂಡದಂತೆ ಮುಂದುವರಿಯುತ್ತಲೇ ಸಾಗಿದೆ. ಇನ್ನೂ ಕೆಲವು ನಕಾರಾತ್ಮಕ ಮನಸ್ಥಿತಿಗಳು ಮಹಿಳೆಯನ್ನು ಎಲ್ಲೋ ಒಂದು ಕಡೆ ಕುಗ್ಗಿಸುವ ಕುತಂತ್ರವನ್ನು ಸಹ ನಡೆಸಿರುವುದು ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೆಲ್ಲವನ್ನು ಅರಿತು ಇಂದಿನ ಮಹಿಳಾ ಸಮುದಾಯ ಮನೋಧೈರ್ಯದಿಂದ ಪ್ರಜ್ಞಾವಂತಿಕೆಯ ದಿಟ್ಟತನದಿಂದ ಮುಂದುವರಿಯುವುದು ಎಲ್ಲ ಮಹಿಳೆಯರಿಗೆ ಇಂದು ಅತ್ಯವಶ್ಯಕವಾಗಿದೆ ಎಂದರು.

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ದಿನದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು, ಸುಸಂಸ್ಕೃತ ಸಮಾಜದ ಲಕ್ಷಣವಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದನ್ನು ಸದಾ ನಾವು ಗಮನಿಸಬೇಕು ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಆಶ್ರಮದ ಸಾಧಕಿ ಶರಣೆ ಮೈತ್ರಾದೇವಿ ಅಮ್ಮನವರು ನೈತಿಕ ಮೌಲ್ಯಗಳ ಕುರಿತು ಮಾತನಾಡಿದರು.

ಪ್ರಾಥಮಿಕ ಶಿಕ್ಷಕರ ಸಂಘದ ಗ್ರಾಮೀಣ ವಿಭಾಗದ ಅಧ್ಯಕ್ಷ ಎಸ್.ಆರ್. ಬಂಡಿ, ಕಾರ್ಯದರ್ಶಿ ಕೆ.ಬಿ. ಕೊಣ್ಣೂರ ಆಗಮಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಶಾರದಾ ಕಾತರಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಬಿ.ಬಿ. ಹರ್ತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರ ಬಳಗದಿಂದ ವಚನ ನೃತ್ಯ ಕಾರ್ಯಕ್ರಮ ನೆರವೇರಿತು. ಶೋಭಾ ಪಾಟೀಲ ಸ್ವಾಗತಿಸಿದರು. ಶೈಲಜಾ ಗುಂಜಳ ವಂದಿಸಿದರು. ಸಾಧಕ ಶಿಕ್ಷಕಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಎನ್.ಎಚ್. ಪಾಟೀಲ, ಎಸ್.ಎಸ್. ಲಕ್ಷಕೊಪ್ಪ, ಪಿ.ಬಿ. ಮುಧೋಳಮಠ, ಎಂ.ಬಿ. ಪರ್ವತಗೌಡ, ವಸಂತ ಕಲಕಂಬಿ, ಜಿ.ಎಸ್. ಗೌಡರ, ಎಸ್.ಜಿ. ಗೌಡ, ಶಿಲ್ಪಾ ಗುಡಗೇರಿ, ಎನ್.ಆರ್. ಹೂಗಾರ ಹಾಗೂ ತಾಲೂಕಿನ ಎಲ್ಲ ಶಿಕ್ಷಕರು, ಅಧ್ಯಾತ್ಮ ವಿದ್ಯಾಶ್ರಮದ ಆದಿಶಕ್ತಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

Share this article