ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ನಮ್ಮ ಅಭಿಲಾಷೆ ರಾಜ್ಯದಲ್ಲಿ ಜನ ಸಮುದಾಯದ ಅಭಿವೃದ್ಧಿ, ಸಾರ್ವಜನಿಕ ಜೀವನದಲ್ಲಿ ಶಾಂತಿಯಿಂದ ಬಾಳುವ ಕಡೆಗೆ ಗಮನ ಹರಿಸುತ್ತೇವೆ. ಧರ್ಮ, ಜಾತಿಗಳ ಹೆಸರಿನಲ್ಲಿ ರಾಜಕಾರಣ ಆಗಬಾರದು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಭಾಗದಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನು ಸಂಪರ್ಕಿಸಿದ್ದೆ. ರಾಜಕೀಯದವರಲ್ಲದ ಅವರು ಬಹಳ ವಿಷಾದ ವ್ಯಕ್ತಪಡಿಸಿದ್ದರು.
ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಎಂದರು. ಮಕ್ಕಳೆಲ್ಲ ಈಗ ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಇಲ್ಲಿನ ಕಲುಷಿತ ವಾತಾವರಣದಿಂದ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ.
ಧರ್ಮ, ನಂಬಿಕೆಗಳನ್ನು ಅನುಸರಿಸೋವಾಗ ಶಾಂತಿಯಿಂದ ಇರಬೇಕು. ಇಡೀ ಸಮುದಾಯಕ್ಕೆ ವಿಷ ಬೀಜ ಬಿತ್ತುವ ಕೆಲಸ ಆಗಬಾರದು ಎಂದರು.
ಜೆರೋಸಾ ಶಾಲೆ ಪ್ರಕರಣ ಕೂಡ ಇದೇ ಹಿನ್ನೆಲೆಯಲ್ಲಿ ಆಗಿದೆ. ಶಿಕ್ಷಕಿ ತರಗತಿಯಲ್ಲಿ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ, ತನಿಖೆ ಆಗಲಿ, ಆ ಬಳಿಕ ಎಲ್ಲ ಗೊತ್ತಾಗುತ್ತದೆ.
ತನಿಖೆಗೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯನ್ನು ನೇಮಿಸಿದ್ದು, ತನಿಖೆ ನಡೆಯಲಿದೆ. ಪೊಲೀಸ್ ಇಲಾಖೆ ಕಾನೂನು ರಕ್ಷಣೆ ಮಾಡುವ ಕೆಲಸ ಮಾಡಲಿದೆ ಎಂದರು.
ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಬೇರೆ ಹಂತಕ್ಕೆ ಹೋಗಬಾರದು. ಪೊಲೀಸರು ಅನುಮತಿ ನೀಡಿದರೆ ಪ್ರತಿಭಟನೆ ಮಾಡಲಿ. ಯಾರಿಗೆ ಅಭಿವೃದ್ಧಿ ಅವಶ್ಯಕತೆ ಇದೆ ಅವರಿಗೆ ಅನುದಾನ ನೀಡಲಾಗುತ್ತದೆ.
ಎಸ್‌ಸಿ, ಎಸ್‌ಟಿ, ಹಿಂದುಳಿದವರಿಗೆ ಅನುದಾನ ಕೊಡುತ್ತೇವೆ. ಮುಸ್ಲಿಮರು ಹಿಂದುಳಿದ ಕಾರಣ ಸ್ವಲ್ಪ ಹೆಚ್ಚು ಕೊಟ್ಟರೆ ತಪ್ಪೇನು ಎಂದು ಬಜೆಟ್ ಅನುದಾನಕ್ಕೆ ಸಂಬಂಧಿಸಿ ವಿಪಕ್ಷಗಳ ಆಕ್ಷೇಪಕ್ಕೆ ಡಾ.ಪರಮೇಶ್ವರ್ ಪ್ರಶ್ನಿಸಿದರು.