ಹಿರಿಯೂರು: ಲೋಕಸಭೆ ಚುನಾವಣೆ ಜೊತೆಗೆ ಆಗ್ನೆಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಕಾವು ಚಿತ್ರದುರ್ಗ ಜಿಲ್ಲೆಯಲ್ಲಿ ನಿಧಾನವಾಗಿ ಏರುತ್ತಿದೆ. ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ಈ ಸಂಬಂಧ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಾಲ್ಗೊಂಡು ಡಿ.ಟಿ.ಶ್ರೀನಿವಾಸ್ ಪರ ಮತಯಾಚಿಸಿದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ಶತೃವಾಗಿದ್ದ ಶ್ರೀನಿವಾಸ್ ಈಗ ಮಿತ್ರರಾಗಿದ್ದಾರೆ.
ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, ರಾಜಕಾರಣದಲ್ಲಿ ಶತೃತ್ವ, ಮಿತೃತ್ವ ಯಾವುದೂ ಶಾಶ್ವತವಲ್ಲವೆಂದು ಚುನಾವಣೆ ರಾಜಕಾರಣದ ಹಳೆಯ ನೆನಪುಗಳ ನೆನಪು ಮಾಡಿಕೊಂಡರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಚಿವನಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಎಲ್ಲಾ ಶಾಸಕರಿಗೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸೂಚಿಸಲಾಗಿದೆ ಎಂದರು.ಒಪಿಎಸ್ ಜಾರಿಗೆ ಪಕ್ಷ ಬದ್ಧವಾಗಿದ್ದು, ಕಾಂಗ್ರೆಸ್ ಮಾತ್ರ ಎಲ್ಲಾ ವರ್ಗದ ಪರವಾಗಿ ನಿಲ್ಲಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 1200 ಕೋಟಿ ರು. ಮೀಸಲಿಟ್ಟಿದ್ದು, ಜಿಲ್ಲೆಯ ರೈತರ ಬೆನ್ನಿಗೆ ಸರ್ಕಾರ ಸದಾ ಇರಲಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯ ಜೊತೆಗೆ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಇಂದಿನಿಂದಲೇ ಕೆಲಸ ಶುರು ಮಾಡಿ ಎಂದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕಳೆದ 5 ವರ್ಷಗಳಲ್ಲಿ ನಾನು ಬೇರೆ ಪಕ್ಷದ ಶಾಸಕಿಯಾಗಿದ್ದೆ. ಮರಳಿ ಕಾಂಗ್ರೆಸ್‌ಗೆ ಬಂದಿದ್ದು, ಹಳ್ಳಿಗಳಲ್ಲಿ ಎರಡು ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ವಿಷಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರಬೇಕು. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೆನಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ. ಲೋಕಸಭಾ ಚುನಾವಣೆಯಲ್ಲಿಯೂ ಎಲ್ಲರೂ ಒಗ್ಗಟ್ಟಾಗಿ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಪ್ರಯತ್ನ ಮಾಡೋಣ. ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಎಲ್ಲರೂ ಪ್ರಚಾರ ಕಾರ್ಯ ಶುರು ಮಾಡಿ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಮಂದಿಯೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಶ್ರೀರಾಮನನ್ನು ನಾವು ಇವತ್ತು ಪೂಜೆ ಮಾಡ್ತಿಲ್ಲ. ತಲೆ ತಲಾತರದಿಂದ ಪೂಜೆ ಮಾಡುತ್ತಿದ್ದೇವೆ. ಹಿಂದುತ್ವ ಅನ್ನೋದು ಯಾವುದೋ ಒಂದು ಪಕ್ಷಕ್ಕೆ ಸೀಮಿತವಲ್ಲ. ಇದೀಗ ಬಾಂಡ್‌ನ ಹಣದ ಬಗೆಗಿನ ಸುದ್ದಿಗಳು ಹೊರಬರುತ್ತಿದ್ದು ಜನ ಅದನ್ನು ಗಮನಿಸುತ್ತಿದ್ದಾರೆ ಎಂದರು.ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ನಾವೀಗಾಗಲೇ ಶೇ.80ರಷ್ಟು ಶಿಕ್ಷಕರನ್ನು ಮಾತನಾಡಿಸಿದ್ದೇವೆ. ಕೆಲ ಸಮಸ್ಯೆಗಳನ್ನು ಆಲಿಸಿದ್ದೇವೆ. ಇದೀಗ 7ನೇ ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸ್ವೀಕಾರ ಮಾಡಿದ್ದು, ಅದರ ಜಾರಿ ಬರುವ ದಿನಗಳಲ್ಲಿ ಆಗುತ್ತದೆ. ಹಿಂದಿನ ಸರ್ಕಾರ ಆ ವರದಿಯನ್ನು ಸ್ವೀಕರಿಸಿರಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಕನಿಷ್ಟ 2 ಲಕ್ಷ ರು.ನಷ್ಟು ಆರೋಗ್ಯ ವಿಮೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಯುವಕರ ತಲೆಯಲ್ಲಿ ಏನೇನೋ ತುಂಬಿ ಲೋಕಸಭೆ ಚುನಾವಣೆಗಳನ್ನು ನಡೆಸಿ ಈಗಲೂ ಯುವಜನತೆಯ ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಚುನಾವಣೆ ಸಮಯದಲ್ಲಿ ಇಳಿದು ಚುನಾವಣೆ ಮುಗಿದ ನಂತರ ಏರಿಕೆಯಾಗುತ್ತೆ. ಪಾರ್ಲಿಮೆಂಟ್ ಚುನಾವಣೆ ಒಗ್ಗಟ್ಟಾಗಿ ಎದುರಿಸಿದರೆ ಗೆಲುವು ಶತ ಸಿದ್ಧ. ವಾಸ್ತವಿಕ ಕಟುಸತ್ಯಗಳನ್ನು ಯುವಕರಿಗೆ ತಿಳಿಸಿ ಅವರನ್ನು ಭ್ರಮೆಯಿಂದ ಹೊರತರಬೇಕಿದೆ. ಆದ್ದರಿಂದ ಎಲ್ಲರೂ ಒಂದಾಗಿ ಶಿಕ್ಷಕರ ಕ್ಷೇತ್ರ ಹಾಗೂ ಪಾರ್ಲಿಮೆಂಟ್ ಚುನಾವಣೆಯನ್ನು ಎದುರಿಸೋಣ ಎಂದರು.ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ನಂದಿನಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ಖಾದಿ ರಮೇಶ್, ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಡಾ.ಸುಜಾತಾ, ಚಿಗಳಿಕಟ್ಟೆ ಕಾಂತರಾಜ್, ಬ್ರಿಜೇಶ್ ಯಾದವ್, ಜಿ.ಎಲ್.ಮೂರ್ತಿ, ಚಂದ್ರನಾಯ್ಕ, ಅಮೃತೇಶ್ವರ ಸ್ವಾಮಿ, ರಜಿಯಾ ಸುಲ್ತಾನ್, ಶಿವಕುಮಾರ್, ಗುರುಪ್ರಸಾದ್, ಗಿರೀಶ್, ಜೆಜೆ ಹಳ್ಳಿ ಕೇಶವ, ಜ್ಞಾನೇಶ್ ಮುಂತಾದವರು ಹಾಜರಿದ್ದರು.