ಗ್ಯಾರಂಟಿ ಯೋಜನೆಯಿಂದ ಅರ್ಹರು ವಂಚಿತರಾಗದಿರಲಿ

KannadaprabhaNewsNetwork | Published : Jan 25, 2025 1:04 AM

ಸಾರಾಂಶ

ರಾಜ್ಯ ಸರ್ಕಾರ ಈ ಯೋಜನೆಗಾಗಿ 2023-24ನೇ ಸಾಲಿನಲ್ಲಿ ₹ 36 ಸಾವಿರ ಕೋಟಿ ಹಣ ಮೀಸಲಿಟ್ಟಿತ್ತು. 2024-25ರಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ₹58 ಸಾವಿರ ಕೋಟಿ ಬಜೆಟ್ ನಲ್ಲಿ ತೆಗೆದಿರಿಸಿದೆ

ಮುಂಡರಗಿ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಶೇ. 90 ಯಶಸ್ವಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.

ಅವರು ಶುಕ್ರವಾರ ಪಟ್ಟಣದ ತಾಪಂ ಸಮರ್ಥ್ಯ ಸೌಧದಲ್ಲಿ ಜರುಗಿದ ತಾಲೂಕು ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಈ ಯೋಜನೆಗಾಗಿ 2023-24ನೇ ಸಾಲಿನಲ್ಲಿ ₹ 36 ಸಾವಿರ ಕೋಟಿ ಹಣ ಮೀಸಲಿಟ್ಟಿತ್ತು. 2024-25ರಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ₹58 ಸಾವಿರ ಕೋಟಿ ಬಜೆಟ್ ನಲ್ಲಿ ತೆಗೆದಿರಿಸಿದೆ.ತಾಲೂಕಿನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ಡಂಬಳ ಹೋಬಳಿಯ ಡಂಬಳದಲ್ಲಿ ಮತ್ತು ಮುಂಡರಗಿ ಹೋಬಳಿಯ ಸಿಂಗಟಾಲೂರ ಗ್ರಾಮದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮಕ್ಷಮ ಶಾಸಕರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಸಮಿತಿಯ ಪ್ರಗತಿಪರಿಶೀಲನಾ ಸಭೆ ನಡೆಸೋಣ ಎಂದರು.

ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ಜೂನ್ 2024 ರಿಂದ ಡಿ.2024 ರವರೆಗೆ 1 ಕೋಟಿ 3 ಲಕ್ಷದ 49ಸಾವಿರ 421 ಮಹಿಳೆಯರು ಪ್ರಯಾಣಿಸಿದ್ದಾರೆ. ಇದರಿಂದ ಕೆಎಸ್ಆರ್‌ಟಿಸಿಗೆ ₹ 31.63 ಕೋಟಿ ಹಣ ಬಂದಿದೆ. ಮುಂಡರಗಿ ಕೆಎಸ್ಆರ್‌ಟಿಸಿ ಘಟಕದ ಅಧಿಕಾರಿ ಭೀಮಾ ನಾಯ್ಕ ಸಭೆಗೆ ವಿವರಿಸಿದರು.

ಯುವನಿಧಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ 432 ನಿರುದ್ಯೋಗಿ ಪದವೀಧರರು ಅರ್ಜಿ ಹಾಕಿದ್ದರು. ಆ ಪೈಕಿ ಸದ್ಯ 312 ಫಲಾನುಭವಿಗಳಿಗೆ ₹ ೯.೩೧ ಲಕ್ಷ ಯುವನಿಧಿ ಹಣ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್ ವಿವರಿಸಿದರು. ಇದರಲ್ಲಿ 120 ಅರ್ಜಿದಾರರು ಯಾವ ಕಾರಣಕ್ಕೆ ಯೋಜನೆಗೆ ಒಳಪಟ್ಟಿಲ್ಲ ಎಂದು ಅಧ್ಯಕ್ಷ ಡಿ.ಡಿ. ಮೋರನಾಳ ಹಾಗೂ ಸದಸ್ಯ ವಿಶ್ವನಾಥ ಪಾಟೀಲ ಪ್ರಶ್ನಿಸಿದರು.

ತಾಂತ್ರಿಕ ಸಮಸ್ಯೆ, ಸಂಪೂರ್ಣ ದಾಖಲಾತಿ ದೊರೆಯದ ಹಿನ್ನೆಲೆಯಲ್ಲಿ ತಡೆಹಿಡಿದಿದೆ ಎಂದು ಉತ್ತರಿಸಿದರು.

ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 31.008 ಬಿಪಿಎಲ್, ಎಐ ಪಡಿತರ ಕಾರ್ಡ್‌ದಾರರಿಗೆ ಸೆಪ್ಟಂಬರ್‌ವರೆಗೆ 1 ಕೋಟಿ 64ಲಕ್ಷ 67ಸಾವಿರ 900 ಗಳು ಜಮೆಯಾಗಿದೆ ಎಂದು ಆಹಾರ ನಿರೀಕ್ಷಕ ಜೆ.ಬಿ.ಅಮಾತಿ ಮಾಹಿತಿ ನೀಡಿದರು. ಓಟಿಪಿ ಮೂಲಕ ರೇಷನ್ ನೀಡುವ ವ್ಯವಸ್ಥೆಯನ್ನು ಕೊನೆಯ ಪಕ್ಷ ಶೇ.೧೦ರಷ್ಟು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ಗ್ಯಾರಂಟಿ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.

ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಣಿಯಾದ 34525 ಫಲಾನುಭವಿಗಳ ಪೈಕಿ 33824 ಮಹಿಳೆಯರಿಗೆ ಒಟ್ಟು ₹6.76 ಕೋಟಿ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿ ಶೇ. 98ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಿಡಿಪಿಓ ಮಹಾದೇವ ಇಸರನಾಳ ಸಭೆಗೆ ತಿಳಿಸಿದರು. ಅನೇಕ ತಾಂತ್ರಿಕ ತೊಂದರೆಗಳಿಂದ ಉಳಿದುಕೊಂಡಿರುವ ಎಲ್ಲ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗುವಂತೆ ಶ್ರಮಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ, ಸಮಿತಿ ಸದಸ್ಯ ರಾಮಪ್ಪ ಮೇಗಲಮನಿ, ವಿಶ್ವನಾಥ ಪಾಟೀಲ, ನಾಗರಾಜ ಸಜ್ಜನರ, ಭುವನೇಶ್ವರಿ ಕಲ್ಲಕುಟಗರ, ಉಮೇಶ ಕಲಾಲ, ಕಾಶಪ್ಪ ಹೊನ್ನೂರ, ಗಣೇಶ ರಾಠೋಡ, ಶರಣಪ್ಪ ಮಲ್ಲಾಪೂರ, ಮಹೇಶ ದ್ರಾಕ್ಷಿ ಸೇರಿದಂತೆ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

Share this article