ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರುಹಲವು ದಶಕಗಳ ಕಾಲ ಅಡಕೆ ಬೆಳೆಯನ್ನು ಕಂಗೆಡಿಸಿದ ಹಳದಿ ಎಲೆರೋಗಕ್ಕೆ ಕೊನೆಗೂ ಪರಿಣಾಮಕಾರಿ ನಿಯಂತ್ರಣ ವಿಧಾನವನ್ನು ಕಂಡುಕೊಳ್ಳುವಲ್ಲಿ ಸುಳ್ಯ ತಾಲೂಕಿನ ಸಂಪಾಜೆ ಕೃಷಿಕರು ಯಶಸ್ವಿಯಾಗಿದ್ದಾರೆ. ಇದು ಭವಿಷ್ಯದಲ್ಲಿ ಹಳದಿ ಎಲೆರೋಗಕ್ಕೆ ಶಾಶ್ವತ ಪರಿಹಾರದ ಸುಲಭ ವಿಧಾನವೊಂದು ಮುನ್ನುಡಿ ಬರೆದಂತಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಂಪಾಜೆಯ ಅಡಕೆ ತೋಟಗಳಲ್ಲಿ ಹಳದಿ ಎಲೆರೋಗ(ಅಡಕೆ ಮರದ ಗರಿ ಹಳದಿ ಬಣ್ಣಕ್ಕೆ ತಿರುಗಿ ಒಣಗುವುದು) ಕಾಣಿಸಿತ್ತು. ಬಳಿಕ ಅದು ವ್ಯಾಪಕವಾಗಿ ಈಗ ಕರಾವಳಿ, ಮಲೆನಾಡು ಪ್ರದೇಶಗಳಿಗೂ ಹಬ್ಬಿತ್ತು. ಇದು ಸಾಕಷ್ಟು ಪ್ರಮಾಣದಲ್ಲಿ ಫಸಲು ನಷ್ಟಕ್ಕೆ ಕಾರಣವಾಗಿತ್ತು. ಇದರ ನಿಯಂತ್ರಣಕ್ಕೆ ತೋಟಗಾರಿಕೆ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ಸೇರಿದಂತೆ ಕೃಷಿಕರ ಸಂಘಟನೆಗಳೂ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ನೀಡಲು ಸಾಧ್ಯವಾಗಿರಲಿಲ್ಲ. ಪ್ರಾಯೋಗಿಕ ಅನುಷ್ಠಾನ: ಹಳದಿ ಎಲೆರೋಗದ ಕಾರಣವನ್ನು ಪತ್ತೆಹಚ್ಚಲು ಇಂದೋರ್‌ನಲ್ಲಿ ಸ್ವಂತ ರಾಸಾಯನಿಕ ಗೊಬ್ಬರದ ಘಟಕ ನಿರ್ವಹಿಸುತ್ತಿರುವ ದ.ಕ. ಮೂಲಕ ಪಿ.ಎನ್.ಭಟ್ ಪೆರುವೊಡಿ ಎಂಬವರು ಸ್ವತಃ ಪ್ರಯೋಗಕ್ಕೆ ಇಳಿದಿದ್ದಾರೆ. ತಮ್ಮ ಸಹೋದರ ಪೆರುವೊಡಿ ಸತ್ಯನಾರಾಯಣ ಭಟ್ ಹಾಗೂ ಜೇಡ್ಲ ಶ್ರೀಧರ ಭಟ್ ಎಂಬವರ ಹಳದಿ ಎಲೆರೋಗ ಪೀಡಿತ ಅಡಕೆ ತೋಟಗಳಿಂದ ಮಣ್ಣು ಸ್ಯಾಂಪಲ್ ಪಡೆದು ಇಂದೋರ್‌ನ ತನ್ನ ಘಟಕದಲ್ಲಿ ಪರೀಕ್ಷೆ ನಡೆಸಿದ್ದಾರೆ. ಈ ಪರೀಕ್ಷೆ ವೇಳೆ ಹಳದಿ ಎಲೆರೋಗ ಪೀಡಿತ ಅಡಕೆ ತೋಟಗಳ ಮಣ್ಣಿನಲ್ಲಿ ಮೆಗ್ನೇಶಿಯಂ, ಕ್ಯಾಲ್ಸಿಯಂ ಹಾಗೂ ಪೊಟಾಷ್ ಅಂಶ ಬಹಳಷ್ಟು ಕೊರತೆ ಇರುವುದು ಕಂಡುಬಂದಿತ್ತು. ಇದನ್ನು ಸರಿಪಡಿಸಲು ತಾವೇ ತಯಾರಿಸಿದ ರಾಸಾಯನಿಕ ಔಷಧವನ್ನು ಸಿಂಪರಣೆ ಮಾಡುವಂತೆ ಸಲಹೆ ಮಾಡಿದ್ದಾರೆ. ಅವರ ಸಲಹೆಯಂತೆ ಆರಂಭದಲ್ಲಿ ಕಳೆದ ಡಿಸೆಂಬರ್‌ನಿಂದ ಪ್ರತಿ ತಿಂಗಳು ಈ ಔಷಧ ಸಿಂಪರಣೆ ಮಾಡಿ ಹಳದಿ ಎಲೆರೋಗದಿಂದ ಶ್ರೀಧರ ಭಟ್ ಹಾಗೂ ಸತ್ಯನಾರಾಯಣ ಭಟ್ ಮುಕ್ತಿಪಡೆದಿದ್ದಾರೆ. ಇವರ ತೋಟಗಳು ಈಗ ನಳನಳಿಸುತ್ತಿದ್ದು, ಹಳದಿ ಎಲೆರೋಗ ಇದ್ದ ಪ್ರದೇಶದಲ್ಲಿ ಫಸಲು ನಳನಳಿಸುತ್ತಿದೆ. ಹೊಸ ತೋಟಕ್ಕೂ ಬಾಧಿಸಿತ್ತು ರೋಗ: 2015ರಲ್ಲಿ ಹಳದಿ ಎಲೆರೋಗ ವ್ಯಾಪಕವಾಗಿ ಹಬ್ಬಿದ ಕಾರಣ ಶ್ರೀಧರ ಭಟ್ ಅವರು ತನ್ನಲ್ಲಿದ್ದ 400 ಅಡಕೆ ಮರಗಳನ್ನು ಕಡಿದು ಹಾಕಿದ್ದರು. ಮತ್ತೆ ಹೊಸದಾಗಿ ಅಷ್ಟೇ ಪ್ರಮಾಣದಲ್ಲಿ ಅಡಕೆ ಸಸಿ ನೆಟ್ಟಿದ್ದರು. ಅದು ಬೆಳೆದು ಮರವಾಗಿ ಫಸಲು ನೀಡುತ್ತಿದ್ದು, ಅದರಲ್ಲೂ ಅಲ್ಲಲ್ಲಿ ಹಳದಿ ಎಲೆರೋಗ ಕಾಣಿಸಿತ್ತು. ಇದರಿಂದ ಕಂಗೆಟ್ಟ ಶ್ರೀಧರ ಭಟ್ ಅವರು ಸಿಪಿಸಿಆರ್‌ಐ, ತೋಟಗಾರಿಕಾ ಇಲಾಖೆಯ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪಿ.ಎನ್.ಭಟ್ ಅವರ ಪರಿಚಯವಾಗಿ, ಅವರಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿಗೆ ಪೋಷಕಾಂಶಯುಕ್ತ ಗೊಬ್ಬರ ನೀಡುವ ಮೂಲಕ ಹಳದಿ ಎಲೆರೋಗ ನಿಯಂತ್ರಣ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದಾರೆ. ಪೋಷಕಾಂಶ ನೀಡುವುದು ಮಣ್ಣು ಪರೀಕ್ಷೆಯ ಫಲಿತಾಂಶವನ್ನು ಅವಲಂಬಿಸಿ ಬೇರೆ ಬೇರೆ ಪ್ರದೇಶಕ್ಕೆ ಪ್ರತ್ಯೇಕವಾಗಿರುತ್ತದೆ.
ಸಂಪೂರ್ಣ ಫಲಿತಾಂಶಕ್ಕೆ ಇನ್ನೂ 2 ವರ್ಷ ಬಳಸಬೇಕುಹಳದಿ ಎಲೆರೋಗಕ್ಕೆ ಇಂದೋರ್‌ನ ರಸಗೊಬ್ಬರ ಕಂಪನಿ ಬೇರೆ ಕಡೆಗಳಲ್ಲಿ ಟೊಮೆಟೋ, ಖರ್ಜೂರ ಮುಂತಾದ ಬೆಳೆಗಳಿಗೆ ಔಷಧ ಸಿಂಪರಣೆ ಪ್ರಯೋಗ ಮಾಡಿ ಯಶಸ್ವಿ ಫಲಿತಾಂಶ ಕಂಡುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಡಕೆ ಮರಕ್ಕೆ ಹಳದಿ ಎಲೆ ರೋಗಕ್ಕೂ ಪ್ರಾಯೋಗ ನಡೆಸಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಒಮ್ಮೆ ಈ ಔಷಧ ಪ್ರಯೋಗ ಮಾಡಿ ಸಫಲವಾದರೂ ಅದನ್ನು ಮತ್ತೆ ಎರಡು ವರ್ಷಗಳ ವರೆಗೆ ಮುಂದುವರಿಸಿ ನೋಡಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಬೇಕು. ಪ್ರಸಕ್ತ ಈ ಪ್ರಯೋಗವನ್ನು ಇತರೆ ರೋಗಪೀಡಿತ ತೋಟಗಳಿಗೂ ವಿಸ್ತರಿಸಲಾಗಿದೆ.