ಜಾತ್ರೆಯಿಂದ ಧರ್ಮ-ಸಮಾಜದ ನಡುವಿನ ಬಹುಮುಖಿ ಸಂಬಂಧ ವೃದ್ಧಿ: ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ಯಾವುದೇ ಒಂದು ಧಾರ್ಮಿಕ ಆಚರಣೆಯೇ ಹಿಂದೆ ಅದರದ್ದೇ ಇತಿಹಾಸವಿರಲಿದೆ. ಇದಕ್ಕೆ ಜಾತ್ರೆಗಳು ಕೂಡ ಹೊರತಾಗಿಲ್ಲ. ಜಾತ್ರೆಗಳು ಧರ್ಮ ಮತ್ತು ಸಮಾಜದ ನಡುವಿನ ಬಹುಮುಖಿ ಸಂಬಂಧವನ್ನು ವೃದ್ಧಿಸಲಿದೆಯಲ್ಲದೇ, ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವಿನ ಸಾಮೂಹಿಕ ಅಸ್ತಿತ್ವವನ್ನು ಪರಿಶೀಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬ್ಯಾಡಗಿ: ಇತಿಹಾಸದ ಆರಂಭದಿಂದಲೂ ಧರ್ಮ ಮತ್ತು ಸಂಸ್ಕೃತಿಗಳು ನಾಗರಿಕತೆಯ ಅವಿಭಾಜ್ಯ ಅಂಗವಾಗಿವೆ. ಇವುಗಳು ಸಹಸ್ರಾರು ವರ್ಷಗಳಿಂದ ಸಮಾಜದಲ್ಲಿ ವ್ಯಕ್ತಿಗಳನ್ನು ಹಾಗೂ ವ್ಯಕ್ತಿತ್ವವನ್ನು ರೂಪಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು, ಯಾವುದೇ ಒಂದು ಧಾರ್ಮಿಕ ಆಚರಣೆಯೇ ಹಿಂದೆ ಅದರದ್ದೇ ಇತಿಹಾಸವಿರಲಿದೆ. ಇದಕ್ಕೆ ಜಾತ್ರೆಗಳು ಕೂಡ ಹೊರತಾಗಿಲ್ಲ. ಜಾತ್ರೆಗಳು ಧರ್ಮ ಮತ್ತು ಸಮಾಜದ ನಡುವಿನ ಬಹುಮುಖಿ ಸಂಬಂಧವನ್ನು ವೃದ್ಧಿಸಲಿದೆಯಲ್ಲದೇ, ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವಿನ ಸಾಮೂಹಿಕ ಅಸ್ತಿತ್ವವನ್ನು ಪರಿಶೀಲಿಸಲಿದ್ದು, ಯಾವುದೇ ಸಮುದಾಯಗಳು ಮತ್ತೆ ಒಂದಾಗಬೇಕಾದಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗಳು ಕಾರಣವಾಗಲಿವೆ ಎಂದರು.

ಬಡತನ, ಅಸಮಾನತೆ, ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳಲ್ಲಿ ಧರ್ಮ ಮತ್ತು ರಾಜಕೀಯ ಮುಂಚೂಣಿಯಲ್ಲಿರಬೇಕು. ಆದರೆ ರಾಜಕೀಯದಲ್ಲಿ ಧರ್ಮ-ಧರ್ಮದಲ್ಲಿ ರಾಜಕೀಯ ಸೇರ್ಪಡೆಯಾಗುತ್ತಿರುವ ಇಂದಿನ ದಿನಗಳಲ್ಲಿ ಧಾರ್ಮಿಕ ನಂಬಿಕೆಗಳೊಂದಿಗೆ ನಡೆಯುವ ಜಾತ್ರೆಗಳ ಸಂಖ್ಯೆ ಕುಂಠಿತಗೊಂಡಿದ್ದು, ಇವೆರಡೂ ಕಾರಣಕ್ಕೆ ಅದೆಷ್ಟೋ ಜಾತ್ರೆಗಳು ಸ್ಥಗಿತಗೊಂಡ ಉದಾಹರಣೆಗಳಿವೆ ಎಂದರು.

ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ಸಮಾಜವನ್ನು ಒಗ್ಗೂಡಿಸಲು ಕಾರಣವಾಗುತ್ತಿದ್ದ ಜಾತ್ರೆಗಳು ಇತ್ತೀಚೆಗೆ ಮಾಯವಾಗುತ್ತಿವೆ. ಸಾಮಾಜಿಕ ಕ್ರಿಯಾಶೀಲತೆಗೆ ನೈತಿಕ ಚೌಕಟ್ಟು ಮತ್ತು ಸಾಮೂಹಿಕ ಉದ್ದೇಶದ ಪ್ರಜ್ಞೆ ನಮಗಿರಬೇಕು, ಧಾರ್ಮಿಕ ಕಾರ್ಯಕ್ರಮಗಳು ಸಂಘರ್ಷದ ಮೂಲವೆಂಬಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ. ರಾಜಕೀಯ ಮತ್ತು ಸಾಮಾಜಿಕ ಲಾಭಕ್ಕಾಗಿ ಧರ್ಮ ಬಳಸಿಕೊಳ್ಳಲಾಗುತ್ತಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಹೀಗಾಗಿ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಲ್ಲಿನ ವ್ಯತ್ಯಾಸಗಳು ಪ್ರಪಂಚದ ವಿವಿಧೆಡೆಗಳಲ್ಲಿ ಅಸಹಿಷ್ಣುತೆ, ತಾರತಮ್ಯ, ಹಿಂಸೆಗೆ ಕಾರಣವಾಗುತ್ತಿದ್ದು, ಯಾವುದೇ ಕಾರಣಕ್ಕೂ ಧರ್ಮ ಎಂಬುದನ್ನು ಕ್ರಿಮಿನಲ್ ಪದವಾಗಿ ಬಳಕೆಗೆ ಬಿಡಬಾರದು ಎಂದರು.

ನೈತಿಕ ಮಾರ್ಗದರ್ಶನ ಬೇಕು: ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಫಕ್ಕೀರೇಶ್ವರ ಶ್ರೀಗಳು ಮಾತನಾಡಿ, ಧರ್ಮ ಆಧಾರದ ಮೇಲೆ ಜಗತ್ತಿನ ವಿವಿಧ ದೇಶಗಳು ಈಗಾಗಲೇ ವಿಭಜನೆ ಆಗಿದ್ದನ್ನು ಒಪ್ಪಿಕೊಳ್ಳೋಣ. ಆದರೆ ಪ್ರತಿಯೊಬ್ಬ ಪ್ರಜೆ ದೇಶ ಸೂಚಿಸಿದ ಧರ್ಮವನ್ನೇ ಅನುಕರಣೆ ಮಾಡಬೇಕೆಂಬುದು ಕಷ್ಟದ ಕೆಲಸ. ಇದಕ್ಕೆ ಭಾರತೀಯ ಇತಿಹಾಸದಲ್ಲಿ ಅವಕಾಶವಿಲ್ಲ. ಅದಾಗ್ಯೂ ದೇವಾಲಯಗಳು ಧರ್ಮದ ಸ್ಫೂರ್ತಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿಯೂ ಊರ ಜಾತ್ರೆಗಳು ಸಮುದಾಯಗಳ ಒಗ್ಗಟ್ಟಿಗೆ ಮಾರ್ಗದರ್ಶನ ಮಾಡಲಿವೆ ಎಂದರು.

ಇದೇ ವೇಳೆ ಕಳೆದ 7 ದಿನಗಳ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ದಾನಿಗಳಿಗೆ, ಸಾಧಕರಿಗೆ, ಅರ್ಚಕರಿಗೆ ವಿವಿಧ ಸಮಿತಿಗಳ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಪುಟ್ಟಪ್ಪ ಛತ್ರದ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ವರ್ತಕರಾದ ಜಯದೇವ ಶಿರೂರು, ಬಸವರಾಜ ಸುಂಕಾಪುರ, ನಾಗರಾಜ ದೇಸೂರ, ಶಂಭು ಮಠದ, ರೈತ ಮುಖಂಡರಾದ ಮುರಿಗೆಪ್ಪ ಶೆಟ್ಟರ, ಗಂಗಣ್ಣ ಎಲಿ, ಗಂಗಾಂಬಿಕಾ ಪಾಟೀಲ ಇದ್ದರು. ಶಿಕ್ಷಕ ಎ.ಟಿ. ಪೀಠದ ಕಾರ್ಯಕ್ರಮ ನಿರ್ವಹಿಸಿದರು.

Share this article