ಗಜೇಂದ್ರಗಡ: ಕಳೆದ ೮-೧೦ ದಿನಗಳಿಂದ ಸುರಿದ ಉತ್ತಮ ಮಳೆಯಿಂದ ಖುಷಿಗೊಂಡಿರುವ ತಾಲೂಕಿನ ರೈತ ಸಮೂಹ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದು ಬಿತ್ತನೆಬೀಜ ಹಾಗೂ ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ.
ತಾಲೂಕಿನ ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ೪೪ ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ ೬ ಸಾವಿರ ಹೆಕ್ಟೇರ್ ಕೆಂಪು ಭೂಮಿ ಹಾಗೂ ೩೮ ಸಾವಿರ ಹೆಕ್ಟೇರ್ ಕಪ್ಪು ಭೂಮಿಯಿದೆ. ರೋಹಿಣಿ ಮಳೆಗೆ ಬಿತ್ತನೆ ಮಾಡಿದರೆ ಕೀಟ ಬಾಧೆ ಕಡಿಮೆ ಎಂಬ ನಂಬಿಕೆ ಹೊಂದಿರುವ ರೈತರು ಕಪ್ಪು (ಎರಿ) ಹಾಗೂ ಕೆಂಪು (ಮಸಾರಿ) ಭೂಮಿಯಲ್ಲಿ ಹೆಸರು, ಹೈಬ್ರಿಡ್ ಜೋಳ ಬಿತ್ತನೆ ಮಾಡುತ್ತಾರೆ. ಅಲ್ಲದೆ ಕೆಂಪು (ಮಸಾರಿ) ಭೂಮಿಯಲ್ಲಿ ಗೋವಿನ ಜೋಳ, ಸಜ್ಜೆ, ತೊಗರಿ ತಡವಾಗಿ ಬಿತ್ತನೆ ಮಾಡುವುದು ಸಾಮಾನ್ಯವಾಗಿದೆ. ತಾಲೂಕಿನಾದ್ಯಂತ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದರಿಂದ ಭೂಮಿ ಸಂಪೂರ್ಣ ಹಸಿಯಾಗಿದ್ದು, ಮಳೆ ಬಿಡುವು ನೀಡಿ, ಬಿಸಿಲಿನ ಪ್ರಖರತೆ ಹೆಚ್ಚಿ ಭೂಮಿ ಸ್ವಲ್ಪ ಹದಕ್ಕೆ ಬಂದರೆ ಬಿತ್ತನೆ ಮಾಡಲು ರೈತರು ಈಗಾಗಲೇ ಮಾರುಕಟ್ಟೆಯಲ್ಲಿ ಬೀಜ, ರಸ ಗೊಬ್ಬರ ಖರಿದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರೋಹಿಣಿ ಮಳೆ ಆರಂಭವಾಗಿದ್ದು, ಹೆಸರು ಬಿತ್ತನೆ ಮಾಡುವ ರೈತರು ಮನೆಯಲ್ಲಿನ ಬೀಜಗಳಿಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೆಳೆಗೆ ಹಳದಿ ರೋಗ ಬರುವುದಿಲ್ಲ ಎಂಬುದು ವಾಡಿಕೆ. "ಪ್ರತಿ ವರ್ಷ ಸಕಾಲದಲ್ಲಿ ಕೃತಿಕಾ, ರೋಹಿಣಿ ಮಳೆ ಸುರಿದ ಕಾರಣ ರೋಹಿಣಿ ತತಿಗೆ ಬಿತ್ತನೆ ಮಾಡಲು ಆಗುತ್ತಿರಲಿಲ್ಲ. ಈ ಬಾರಿ ಸೈಕ್ಲೋನ್‌ನಿಂದಾಗಿ ಕೃತಿಕಾ ಮಳೆ ಉತ್ತಮವಾಗಿ ಸುರಿದಿದೆ. ಹೀಗಾಗಿ ಭೂಮಿ ಸ್ವಲ್ಪ ಹದಕ್ಕೆ ಬಂದರೆ ಬಿತ್ತನೆ ಮಾಡಲು ಈಗಾಗಲೇ ಬೀಜ, ಗೊಬ್ಬರ ತಂದಿಟ್ಟುಕೊಂಡಿದ್ದೇವೆ. ಈ ಬಾರಿ ಉತ್ತಮ ಮಳೆ, ಬೆಳೆ ನಿರೀಕ್ಷೆ ಹೊಂದಿದ್ದೇವೆ ಎಂದು ರೈತ ನರಸಿಂಗರಾವ್ ಘೋರ್ಪಡೆ ಹೇಳಿದರು. "ಗಜೇಂದ್ರಗಡ ರೈತ ಸಂಪರ್ಕ ಮಾರಾಟ ಮಳಿಗೆಯಲ್ಲಿ ಸದ್ಯಕ್ಕೆ ಹೆಸರು ೨೩ ಕ್ವಿಂಟಲ್, ಗೋವಿನ ಜೋಳ ೧೦೦ ಕ್ವಿಂಟಲ್ ಬೀಜಗಳ ದಾಸ್ತಾನಿದೆ. ಗೋವಿನ ಜೋಳದ ಬೆಳೆಗೆ ಗಂಧಕದ ಅವಶ್ಯಕತೆಯಿರುತ್ತದೆ. ಹೀಗಾಗಿ ಗೋವಿನ ಜೋಳ ಬಿತ್ತನೆ ಮಾಡುವ ರೈತರು ಕೇವಲ ಡಿಎಪಿಗೆ ದುಂಬಾಲು ಬೀಳದೆ ೨೦-೨೦-೦-೫ ಹಾಗೂ ೧೯-೧೯-೦-೫, ೧೨-೩೨-೧೬ ರಸಗೊಬ್ಬರಗಳನ್ನು ಬಳಕೆ ಮಾಡಿದರೆ ಉತ್ತಮ ಎಂದು ನರೇಗಲ್ಲ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸಿ.ಕೆ. ಕಮ್ಮಾರ ಹೇಳಿದರು.