ಸತ್ಪುರುಷ ದಾಂಡೇಲಪ್ಪ ದೇವರ ಜಾತ್ರೆ ಸಂಪನ್ನ

KannadaprabhaNewsNetwork | Published : Oct 13, 2024 1:01 AM

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸತ್ಪುರುಷ ಪುರಮಾರ ದಾಂಡೇಲಪ್ಪ ಜಾತ್ರೆ ಸಂಭ್ರಮ, ಸಡಗರದಿಂದ ಶನಿವಾರ ಸಂಪನ್ನಗೊಂಡಿತು. ದಾಂಡೇಲಪ್ಪ ದೇವರ ದರ್ಶನಕ್ಕಾಗಿ ದೂರದವರೆಗೂ ಭಕ್ತರು ಸರತಿಯಲ್ಲಿ ನಿಂತಿದ್ದರು.

ದಾಂಡೇಲಿ: ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸತ್ಪುರುಷ ಪುರಮಾರ ದಾಂಡೇಲಪ್ಪ ಜಾತ್ರೆ ಸಂಭ್ರಮ, ಸಡಗರದಿಂದ ಶನಿವಾರ ಸಂಪನ್ನಗೊಂಡಿತು.

ದಾಂಡೇಲಿಯ ಮಿರಾಶಿ ಗಲ್ಲಿಯಲ್ಲಿ ಇರುವ ದಾಂಡೇಲಿಪ್ಪನ ದೇವಸ್ಥಾನದಿಂದ ಪಲ್ಲಕ್ಕಿ ಕೇರವಾಡ ಗ್ರಾಮದ ಹಾಳಮಡ್ಡಿ ಹತ್ತಿರ ಇರುವ ದಾಂಡೇಲಪ್ಪನ ಗದ್ದುಗೆಗೆ ಬರುತ್ತಿದ್ದಂತೆ ಜಾತ್ರೆಗೆ ಸಾಂಪ್ರದಾಯಿಕ ಚಾಲನೆ ದೊರೆಯಿತು. ಅ. ೧೨ರ ಬೆಳಗಿನ ೪ ಗಂಟೆಯಿಂದಲೇ ಜಾತ್ರೆ ಪ್ರಾರಂಭವಾಯಿತು. ದಾಂಡೇಲಪ್ಪ ದೇವರ ದರ್ಶನಕ್ಕಾಗಿ ದೂರದವರೆಗೂ ಭಕ್ತರು ಸರತಿಯಲ್ಲಿ ನಿಂತಿದ್ದರು.

ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಗಣ್ಯರನೇಕರು ಪಾಲ್ಗೊಂಡು ದಾಂಡೇಲಪ್ಪನ ದರ್ಶನ ಪಡೆದರು. ಮಿರಾಶಿ ಬಂಧುಗಳು ಹಾಗೂ ಶ್ರೀ ದಾಂಡೇಲಪ್ಪ ಜಾತ್ರಾ ಮಹೋತ್ಸವ ಸಮಿತಿಯವರು ಜಾತ್ರೆಗೆ ಆಗಮಿಸಿದ ಗಣ್ಯರನ್ನು ಗೌರವಿಸಿದರು. ಪ್ರತಿವರ್ಷದಂತೆ ದಾಂಡೇಲಪ್ಪನ ಜಾತ್ರೆಗೆ ಬರುವ ಭಕ್ತರಿಗೆ ರಾಜಸ್ಥಾನಿ ಗಾಯತ್ರಿ ಮಂಡಳದವರು ಉಪಾಹಾರ ವ್ಯವಸ್ಥೆ ಮಾಡಿದ್ದರು. ದಾಂಡೇಲಿ ಗೆಳೆಯರ ಬಳಗದವರು ಮಜ್ಜಿಗೆ ವಿತರಿಸಿದರು. ಹಳಿಯಾಳ ರಸ್ತೆಯ ಗಜಾನನ ಯುವಕ ಮಂಡಳದವರು ಅನ್ನದಾನ ಮಾಡಿದರು.

ದಾಂಡೇಲಿ ತಾಲೂಕಿನ ಆಲೂರು ಗ್ರಾಪಂನವರು ವಿಶೇಷವಾಗಿ ಶ್ರೀ ದಾಂಡೇಲಪ್ಪನ ಜಾತ್ರೆ ನಡೆಸುವ ಜವಾಬ್ದಾರಿ ಹೊಂದಿದ್ದು, ಮಿರಾಶಿ ಕುಟುಂಬದ ಹಿರಿಯರು, ಕುಟುಂಬಸ್ಥರು ಹಾಗೂ ಜಿಪಂ ಮಾಜಿ ಸದಸ್ಯರಾದ ವಾಮನ ಮಿರಾಶಿ, ದಾಂಡೇಲಪ್ಪ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಕೃಷ್ಣ ಪೂಜಾರಿ, ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಜಾತೆಯ ಯಶಸ್ಸಿಗೆ ಶ್ರಮಿಸಿದರು.

ಡಿವೈಎಸ್‌ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಭೀಮಣ್ಣ ಸೂರಿ ನೇತೃತ್ವದಲ್ಲಿ ದಾಂಡೇಲಿ ಪಿಎಸ್‌ಐಗಳಾದ ಐ.ಆರ್. ಗಡ್ಡೇಕರ, ಯಲ್ಲಪ್ಪ ಎಸ್., ಕೃಷ್ಣ ಎ. ಗೌಡ, ಮಂಜುಳಾ ನಾಯಕವಾಡಿ ಹಾಗೂ ಪೊಲೀಸ್‌ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದರು.

Share this article