ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭ್ರಷ್ಟಾಚಾರದ ಕಾರಣಕ್ಕಾಗಿ ಅಧಿಕಾರ ಕಳೆದುಕೊಂಡ ಬಿಜೆಪಿ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಲು ಈಗಿನ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದು ಸೋಗಲಾಡಿತನ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಹಗರಣ ಮಾಡಿದವರು ಬಿಜೆಪಿಯವರು. ಅವರ ಕಾಲದಲ್ಲಿಯೇ ಮಂಜೂರಾತಿ ನೀಡಿದ್ದರು. ಈಗ ಅದರ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಈ ಬಿಜೆಪಿಗರು ಭ್ರಷ್ಟಾಚಾರ ಮಾಡಿದವರೇ. ಶಿವಮೊಗ್ಗದಲ್ಲಿ ವಾಜಪೇಯಿ ಹೆಸರಿನಲ್ಲಿ ಮಾಡಿರುವ ಬಡಾವಣೆಯಲ್ಲಿ ಭ್ರಷ್ಟಾಚಾರವಾಗಿದೆ. ಅರ್ಜಿ ಹಾಕಿದವರಿಗೆ ನಿವೇಶನ ನೀಡದೇ ವಂಚಿಸಲಾಗಿದೆ. ಈ ಸಂಬಂಧ ಲೋಕಾಯುಕ್ತ ವರದಿ ನೀಡಿದ್ದರೂ ಕೂಡ ಅದನ್ನು ಜಾರಿ ಮಾಡಿಲ್ಲ ಎಂದು ಆರೋಪಿಸಿದರು.ಸಜ್ಜನರಂತೆ ಹೋರಾಟ ಮಾಡಲು ಹೊರಟಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು. 40 ಪರ್ಸೆಂಟ್ ಭ್ರಷ್ಟಾಚಾರಕ್ಕಾಗಿ ಅಧಿಕಾರ ಕಳೆದುಕೊಂಡವರು ಬಿಜೆಪಿಯವರು ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ಹಗರಣವಾಗಿದೆ ಎಂದು ಅವರದೇ ಪಕ್ಷದವರಾದ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಮೊದಲು ಈ ವಿಜಯೇಂದ್ರ ಹೋರಾಡಲಿ ಎಂದು ಕಟುಕಿದರು.
ಈ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷದವರ ಲೈಂಗಿಕ ಹಗರಣಗಳು ಮಹಿಳೆಯರ ಮೇಲಿನ ಅತ್ಯಾಚಾರ ಒತ್ತಡಕ್ಕಿರಲಿ, ಪುರುಷರ ಮೇಲಿಯೂ ಅತ್ಯಾಚಾರ ಮಾಡಿದ ಭೂಪರ ವಿರುದ್ಧ ಈ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲ. ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಫೋಕ್ಸ್ ಕಾಯ್ದೆ ದಾಖಲಾಗಿದೆ. ಅವರು ತಪ್ಪು ಮಾಡಿದ್ದರು, ಬಿಟ್ಟಿದ್ದಾರೋ ಒಂದು ಕಡೆ ಇರಲಿ, ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದರು.ಅವರು ಹೋರಾಡಲಿ ನಾವು ಕೂಡ ಬಿಜೆಪಿ ಕಾಲದಲ್ಲಿ ನಡೆದ ಎಲ್ಲಾ ಹಗರಣಗಳನ್ನು ದಾಖಲೆ ಸಮೇತ ಹೊರಗಿಡುತ್ತೇವೆ. ಶಿವಮೊಗ್ಗದ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಹಿಡಿದು ಎಲ್ಲಾ ಹಗರಣಗಳನ್ನು ತನಿಖೆಗೆ ಒತ್ತಾಯಿಸುತ್ತೇವೆ ಎಂದು ಅವರು, ಬಿಜೆಪಿ ನಾಯಕರು ಸೋಗಲಾಡಿತನ ಹೋರಾಟವನ್ನು ಕೈಬಿಟ್ಟು ಜನರ ಕ್ಷಮೆಯನ್ನು ಕೇಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಮೂಡ ವಿಚಾರದಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವ ಬಿಜೆಪಿ ನಾಯಕರಿಗೆ ನೈತಿಕ ಹಕ್ಕು ಇಲ್ಲ. ಆ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಕುಟುಂಬದವರು ನೀಡಿದ್ದರು. ಇದಕ್ಕಾಗಿ ಹಣ ಕೂಡ ಕೇಳಿದ್ದರು. ಸುಮಾರು 65 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಕುಟುಂಬಕ್ಕೆ ನೀಡಬೇಕಿತ್ತು. ಆದರೆ ಹಣ ನೀಡದೇ ಅವರು ನಿವೇಶನ ನೀಡಿದ್ದಾರೆ ಅಷ್ಟೇ. ಇದರಲ್ಲಿ ರಾಜೀನಾಮೆ ಕೊಡುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ ಎಂದರು.ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲಾ ನಿಗಮದಲ್ಲೂ ಬಿಜೆಪಿ ಸರ್ಕಾರದಲ್ಲಿ ಭಾರೀ ಭ್ರಷ್ಟಚಾರ ನಡೆದಿದೆ. ಈ ಭ್ರಷ್ಟಚಾರವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನ ಮಾಡುತ್ತಾ ಪ್ರತಿದಿನ ಹೋರಾಟವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ವೈ.ಹೆಚ್.ನಾಗರಾಜ್, ಎಸ್.ಟಿ.ಹಾಲಪ್ಪ, ರಮೇಶ್ ಹೆಗ್ಡೆ, ಅನಿತಾಕುಮಾರಿ, ಈಕ್ಕೇರಿ ರಮೇಶ್, ಯು.ಶಿವಾನಂದ್, ಅಡ್ಡು, ದೀನರಾಜ್ ಹೊನ್ನಾವಿಲೆ, ಹಿರಣ್ಣಯ್ಯ, ವಿಜಯಲಕ್ಷ್ಮೀ ಪಾಟೀಲ್, ಶಿವಣ್ಣ, ಎಚ್.ಎಂ.ಮಧು ಇನ್ನಿತರರು ಉಪಸ್ಥಿತರಿದ್ದರು.ಮಾಧ್ಯಮಗಳಲ್ಲಿ ಪ್ರಸಾರಕ್ಕೆ ತಡೆಯಾಜ್ಞೆ ಯಾಕೆ ತಂದಿರಿ?ಬೆಂಗಳೂರು ಬಿಡಿಎಗೆ ಸಂಬಂಧಿಸಿದಂತೆ ಕಡತಗಳಿಗೆ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಮಗನೇ ಪೋರ್ಜರಿ ಸಹಿ ಮಾಡಿದ್ದರು. ಈ ಬಗ್ಗೆ ದಾಖಲೆಯೂ ಇದೆ. ಇದರ ವಿರುದ್ಧ ವಿಜಯೇಂದ್ರ ಹೋರಾಡಬೇಕಲ್ಲವೆ ಎಂದು ಪ್ರಶ್ನಿಸಿದರು.ಈಗಿನ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ಅಂದು ಈ ಡಿನೋಟಿಪೀಕೇಷನ್ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಈಗೇಕೆ ಅವರ ಮೌನ. ಆರ್.ಅಶೋಕ್ ಶಾಸಕರಾಗಿದ್ದಾಗ ಕೆಂಗೇರಿ ಹೋಬಳಿಯ 2500 ಎಕರೆ ಭೂಮಿಗೆ ಮಂಜೂರಾತಿ ನೀಡಿದ್ದರು. ಇದು ಮಾಧ್ಯಮಗಳಲ್ಲಿ ಭಾರದಂತೆ ತಡೆಯಾಜ್ಞೆ ತಂದಿದ್ದಾರೆ. ಈಗ ಇವರು ಆ ಪಕ್ಷದ ಪ್ರಾಮಾಣಿಕ ವಿರೋಧ ಪಕ್ಷದ ನಾಯಕ. ಇವರು ಈಗ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.