ಅಸ್ಮಿತೆ ಕಳೆದುಕೊಂಡ ಸಂಘಟನೆಗಳು, ಉಡುಗಿದ ಸಂಘಟಕರ ಧ್ವನಿ
ಮಂಜುನಾಥ ಕೆ.ಎಂ.ಕನ್ನಡಪ್ರಭ ವಾರ್ತೆ ಬಳ್ಳಾರಿ
ಗಡಿನಾಡು ಬಳ್ಳಾರಿಯಲ್ಲಿ ಹತ್ತಾರು ಸಂಘಟನೆಗಳಿವೆ. ರಾಜ್ಯಮಟ್ಟದ ಸಂಘಟನೆಗಳಿಗೆ ಬಳ್ಳಾರಿಯವರೇ ಅಧ್ಯಕ್ಷರಿದ್ದಾರೆ. ಕೆಲವು ಸಂಸ್ಥೆಗಳು ನಾಡು-ನುಡಿ ಹೆಸರಿನಲ್ಲಿ ಅಸ್ಥಿತ್ವ ಪಡೆದುಕೊಂಡಿದ್ದರೆ, ಮತ್ತೆ ಕೆಲವು ಜನಸಾಮಾನ್ಯರ ಹಕ್ಕುಗಳ ರಕ್ಷಣೆ ಹೆಸರಿನಲ್ಲಿ ಬ್ಯಾನರ್ ಹೊಂದಿವೆ. ಆದರೆ, ಅಸ್ವಿತ್ವದಲ್ಲಿರುವ ಭಾಗಶಃ ಸಂಘಟನೆಗಳು ಅಸ್ಮಿತೆಯನ್ನೇ ಕಳೆದುಕೊಂಡಿವೆ!ಈ ಹಿಂದೆ ನಗರದಲ್ಲಿ ಯಾವುದೇ ಸಾಮಾಜಿಕ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸಂಘಟಕರು ಧ್ವನಿ ಎತ್ತುತ್ತಿದ್ದರು. ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಚಳವಳಿ ನಡೆದು, ಜಿಲ್ಲಾಡಳಿತ ಹಾಗೂ ಸರ್ಕಾರದ ಮೇಲೂ ಒತ್ತಡವಾಗುತ್ತಿತ್ತು. ಅಷ್ಟರಮಟ್ಟಿಗೆ ಹೋರಾಟಗಳು ಬಿರುಸು ಪಡೆದುಕೊಳ್ಳುತ್ತಿದ್ದವು.
ಕಳೆದ ಒಂದು ದಶಕದಿಂದೀಚೆ ನಗರ ಸೇರಿದಂತೆ ಜಿಲ್ಲೆಯಲ್ಲಿ ದಿನದಿನಕ್ಕೆ ಸಂಘಟನಾ ಶಕ್ತಿ ಸೊರಗಲಾರಂಭಿಸಿದ್ದು, ನಿರ್ದಿಷ್ಟ ಒಂದೆರೆಡು ಸಂಘಟನೆಗಳ ಒಂದಷ್ಟು ಜನರು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ, ಬೀದಿಗಿಳಿಯುವುದು ಬಿಟ್ಟರೆ ಉಳಿದ ಸಂಘಟನೆಗಳ ಶಕ್ತಿಗೆ ಸಂಪೂರ್ಣ ಗ್ರಹಣ ಹಿಡಿದಿದೆ. ವಿವಿಧ ಪಕ್ಷಗಳ ಸಂಯೋಜಿತ ವಿದ್ಯಾರ್ಥಿ, ಯುವಜನ, ಮಹಿಳಾ, ಕಾರ್ಮಿಕ ಸಂಘಟನೆಗಳ ಹೋರಾಟಗಳೂ ಕಣ್ಮರೆಯಾಗಲಾರಂಭಿಸಿವೆ.ಬಳ್ಳಾರಿಯಲ್ಲಿ ಹತ್ತಾರು ಸಮಸ್ಯೆಗಳು:
ಬಳ್ಳಾರಿ ನಗರ ಹತ್ತಾರು ಸಮಸ್ಯೆಗಳ ಆಗರ ಎಂದರೆ ತಪ್ಪಾಗದು. ಓಡಾಡಲು ಗುಣಮಟ್ಟದ ರಸ್ತೆಯಿಲ್ಲ. ಕುಡಿಯುವ ಶುದ್ಧ ನೀರಿಲ್ಲ. ಸಾರ್ವಜನಿಕರ ಶೌಚಾಲಯಗಳಿಲ್ಲ. ಚರಂಡಿ ನಿರ್ವಹಣೆ ಕೇಳೋರಿಲ್ಲ. ಬೀದಿದೀಪಗಳ ಸಮಸ್ಯೆ ನಿವಾರಣೆಗೊಂಡಿಲ್ಲ. ಪ್ಲಾಸ್ಟಿಕ್ ಬ್ಯಾನ್ ಆಗಲಿಲ್ಲ. ಉದ್ಯಾನಗಳ ಗೋಳು ಕೇಳೋರಿಲ್ಲ. ಆಸ್ಪತ್ರೆಗಳ ಅವ್ಯವಸ್ಥೆಯನ್ನು ಗಮನಿಸೋರಿಲ್ಲ.ಹೀಗೆ ಇಲ್ಲ ಇಲ್ಲಗಳಿಂದಲೇ ಇಲ್ಲಿನ ಸಮಸ್ಯೆಗಳು ಶುರುಗೊಳ್ಳುತ್ತವೆ. ಆದರೆ, ಬಳ್ಳಾರಿ ನಾಗರಿಕರ ಸಮಸ್ಯೆಗಳಿಗೆ ಒತ್ತಾಯಿಸಿ ದೊಡ್ಡ ಚಳವಳಿಗಳು ನಡೆದಂತೂ ಕಂಡು ಬಂದಿಲ್ಲ.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಘಟಿಕೋತ್ಸವ ನಕಲಿ ಪ್ರಮಾಣಪತ್ರಗಳ ವಿತರಣೆಯ ಪ್ರಕರಣ ಹೊರಬಿತ್ತು. ಪ್ರಕರಣದಲ್ಲಿ ಸುಮಾರು 2 ಸಾವಿರ ಜನರಿಗೆ ನಕಲಿ ಪ್ರಮಾಣಪತ್ರ ನೀಡಿ, ಲಕ್ಷ ಲಕ್ಷ ಹಣ ಲಪಟಾಯಿಸಲಾಗಿದೆ ಎಂದು ವಿವಿ ನಡೆಸಿದ ತನಿಖೆಯಿಂದಲೇ ಗೊತ್ತಾಯಿತು. ವಿಪರ್ಯಾಸ ಎಂದರೆ ನಗರದ ಯಾವುದೇ ವಿದ್ಯಾರ್ಥಿ, ಯುವಜನ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿಲ್ಲ. ಉಳಿದ ಕನ್ನಡಪರ ಸಂಘಟನೆಗಳು ಸಹ ಎಲ್ಲೂ ಧ್ವನಿ ಎತ್ತಲಿಲ್ಲ.ಬಳ್ಳಾರಿ ಜಿಲ್ಲೆ ತುಂಬಾ ಕಾಂಗ್ರೆಸ್ ಶಾಸಕರಿದ್ದಾಗ್ಯೂ ಬಜೆಟ್‌ನಲ್ಲಿ ಬಳ್ಳಾರಿಗೆ ಅನ್ಯಾಯವಾಗುತ್ತಲೇ ಬರುತ್ತಿದೆ. ಜೀನ್ಸ್ ಅಪರೇಲ್ ಪಾರ್ಕ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಸೇರಿದಂತೆ ಕೆಲವು ಬೆರಳೆಣಿಕೆಯ ಬೇಡಿಕೆಗಳಿಗೂ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ. ಬಜೆಟ್‌ನಲ್ಲೂ ಎಲ್ಲೂ ಬಳ್ಳಾರಿಯನ್ನು ಪರಿಗಣಿಸಿರುವುದು ಕಂಡು ಬರಲಿಲ್ಲ. ಆದರೆ, ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಗಮನ ಸೆಳೆಯುವ ಸಣ್ಣ ಕಾಳಜಿಗಳು ಸಂಘಟನೆಗಳಿಂದ ಕಂಡು ಬರಲಿಲ್ಲ.
ಇನ್ನು ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ನ ಬಾಣಂತಿಯರ ಸಾವು ಪ್ರಕರಣಗಳು ಇಡೀ ರಾಜ್ಯದ ಗಮನ ಸೆಳೆದವು. ಬಳ್ಳಾರಿಯಲ್ಲಾದ ಸಾವು ಪ್ರಕರಣಗಳ ಖಂಡಿಸಿ ಹೊರ ಜಿಲ್ಲೆಗಳಲ್ಲಿ ದೊಡ್ಡ ಚಳವಳಿಗಳು ನಡೆದವು. ಬಳ್ಳಾರಿಯಲ್ಲಿ ಮಾತ್ರ ಹೋರಾಟದ ದರ್ಶನವಾಗಲಿಲ್ಲ.ವಿಜಯನಗರ ಜಿಲ್ಲೆ ಪ್ರತ್ಯೇಕಗೊಂಡ ಬಳಿಕ ಬಳ್ಳಾರಿ ಉತ್ಸವ ಆರಂಭಿಸಲಾಯಿತು. ಹಂಪಿ ಉತ್ಸವ ಕೈ ತಪ್ಪಿತು ಎಂಬ ಕಾರಣಕ್ಕಾಗಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸಲು ಬಳ್ಳಾರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಆದರೆ, ಸರ್ಕಾರ ಹಾಗೂ ಜಿಲ್ಲಾಡಳಿತದ ಉತ್ಸಾಹದ ಉತ್ಸವ ಒಂದೇ ವರ್ಷಕ್ಕೆ ಸೀಮಿತಗೊಂಡಿತು. 2023ರ ಬಳಿಕ ಉತ್ಸವಕ್ಕೆ ತಿಲಾಂಜಲಿ ಇಟ್ಟರೂ ಯಾವೊಬ್ಬ ಕಲಾವಿದರು ಉತ್ಸವ ನಡೆಸಿ ಎಂದು ಕೂಗು ಹಾಕಲಿಲ್ಲ.
ಸ್ಥಳೀಯ ಸಮಸ್ಯೆಗಳಿಗೆ ಹೋರಾಟಗಳನ್ನು ಕಟ್ಟುವ ಜವಾಬ್ದಾರಿ ಪ್ರತಿಪಕ್ಷಗಳಿಗೆ ಹೆಚ್ಚು ಇರುತ್ತದೆ. ಬೀದಿಗೊಂದು ಉದ್ಭವಗೊಂಡಿರುವ ಸಂಘಟನೆಗಳು ಮೈ ಮರೆತರೂ ಪ್ರತಿಪಕ್ಷವಾದ ಬಿಜೆಪಿ ಜನ ಸಮಸ್ಯೆಗಳ ಆಧರಿಸಿ ಹೋರಾಟಕ್ಕೆ ಧುಮುಕಬೇಕಿತ್ತು. ಆದರೆ, ಈ ಪಕ್ಷದ ಜನಪರ ಹೋರಾಟದ ಕಾಳಜಿ ಕಂಡು ಬಂದಿಲ್ಲ. ರಾಜ್ಯ ಮಟ್ಟದ ಕರೆಗಳಿಗೆ ಸ್ಪಂದಿಸಿ ಒಂದಷ್ಟು ಜನರು ಸೇರಿ ಧ್ವನಿ ಎತ್ತುವುದು ಬಿಟ್ಟರೆ, ಸ್ಥಳೀಯ ಸಮಸ್ಯೆಗಳಿಗೆ ಹೋರಾಟ ನಡೆಸಿದ್ದು ತೀರಾ ಅಪರೂಪ. ಏಕೀಕರಣ ಹೋರಾಟದಲ್ಲಿ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದ ಬಳ್ಳಾರಿಗೆ ಹೋರಾಟದ ಗ್ರಹಣ ಹಿಡಿದಿರುವುದು ನಿಜಕ್ಕೂ ವಿಪರ್ಯಾಸ.