ಶ್ರಾವಣದ ಮೊದಲ ಹಬ್ಬ ನಾಗರಪಂಚಮಿ ಸಂಭ್ರಮ

KannadaprabhaNewsNetwork | Published : Aug 9, 2024 12:45 AM

ಸಾರಾಂಶ

ಗ್ರಾಮೀಣ ಭಾಗದಲ್ಲಂತೂ ಈ ಹಬ್ಬದ ಗಮ್ಮತ್ತೇ ಬೇರೆ. ನಾಗದೇವತಾ ಮೂರ್ತಿಗಳಿಗೆ ಹಾಲೆರೆದು ಭಕ್ತಿ ಸಮರ್ಪಿಸುವುದು ಹಬ್ಬದ ವಿಶೇಷ.

ಸಂತೋಷ ದೈವಜ್ಞ

ಮುಂಡಗೋಡ: ಶ್ರಾವಣ ಮಾಸದ ಮೊದಲನೇ ಹಬ್ಬ ನಾಗರಪಂಚಮಿ ಹಿನ್ನೆಲೆ ತಾಲೂಕಿನ ಎಲ್ಲೆಡೆ ಸಡಗರ ಮನೆಮಾಡಿದೆ.

ನಾಗರಪಂಚಮಿ ಎಂದಾಕ್ಷಣ ಬಗೆ ಬಗೆಯ ಉಂಡೆ(ಲಾಡು) ನೆನಪಿಗೆ ಬರುವುದು ಸಾಮಾನ್ಯ. ಶ್ರಾವಣ ಮಾಸದಲ್ಲಿ ಬಹುತೇಕರು ಧಾರ್ಮಿಕ ಪೂಜೆ ಪುನಸ್ಕಾರದಲ್ಲಿ ತೊಡಗುತ್ತಾರೆ. ಹಬ್ಬದ ಪ್ರಯುಕ್ತ ಪುಟಾಣಿ, ಶೇಂಗಾ, ರವೆ, ಎಳ್ಳು ಸೇರಿದಂತೆ ವಿವಿಧ ಧಾನ್ಯಗಳ ಉಂಡಿ (ಲಾಡು) ಹಾಗೂ ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಂತೂ ಈ ಹಬ್ಬದ ಗಮ್ಮತ್ತೇ ಬೇರೆ. ನಾಗದೇವತಾ ಮೂರ್ತಿಗಳಿಗೆ ಹಾಲೆರೆದು ಭಕ್ತಿ ಸಮರ್ಪಿಸುವುದು ಹಬ್ಬದ ವಿಶೇಷ. ನಾಗದೋಷ ಮುಕ್ತಿಗಾಗಿ ನಾಗರ ಕಲ್ಲುಗಳಿಗೆ ಹಾಲುಣಿಸಲಾಗುತ್ತದೆ. ಕೆಲವರು ಮಣ್ಣಿನ ನಾಗರಕ್ಕೆ ಹಾಲೆರೆದರೆ, ಇನ್ನು ಕೆಲವರು ಚಿನ್ನ ಹಾಗೂ ಬೆಳ್ಳಿ ನಾಗರ ಮೂರ್ತಿಗಳಿಗೆ ಹಾಲೆರೆದು ಪೂಜೆ ಸಮರ್ಪಿಸುತ್ತಾರೆ.ಜನರು ಈಗ ಬೆಳ್ಳಿ ಬಂಗಾರ ನಾಗರಮೂರ್ತಿ ಖರೀದಿಯಲ್ಲಿ ತೊಡಗಿದ್ದು, ಬಹುತೇಕ ಚಿನ್ನ- ಬೆಳ್ಳಿ ಅಂಗಡಿಗಳಲ್ಲಿ ಬೆಳ್ಳಿ ನಾಗರ ಮೂರ್ತಿಗಳಿಗೆ ತೀವ್ರ ಬೇಡಿಕೆ ಬಂದಿದ್ದು, ಮಾರಾಟ ಕೂಡ ಜೋರಾಗಿದೆ. ಇದು ವೈಯಕ್ತಿಕ ಮನೆಗಳಲ್ಲಿ ನಡೆಯುವ ಪೂಜೆಯಾದರೆ, ಬಹುತೇಕ ನಾಗ ದೇವಾಲಯಗಳಲ್ಲಿ ಸಾಮೂಹಿಕವಾಗಿ ಕೂಡ ದಿನವಿಡೀ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ನಾಗದೇವತಾ ದೇವಾಲಯಗಳು ಸುಣ್ಣ ಬಣ್ಣ ಹಚ್ಚಿಕೊಂಡು ಶೃಂಗರಿಸಿಕೊಂಡಿದ್ದು, ಬಹುತೇಕ ಕಡೆ ಹುತ್ತಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ನಿಂಬೆಹಣ್ಣಿನ ಆಟದ ಸಡಗರ: ನಾಗರಪಂಚಮಿ ಬರುತ್ತಿದ್ದಂತೆ ನಿಂಬೆಹಣ್ಣಿನ ಆಟದ ಭರಾಟೆ ಕೂಡ ಜೋರಾಗಿದೆ. ತಾಲೂಕಿನಾದ್ಯಂತ ನಿಂಬೆಹಣ್ಣು ಎಸೆಯುವ ಆಟ ಪ್ರಾರಂಭವಾಗಿದೆ. ಗ್ರಾಮೀಣ ಭಾಗದಲ್ಲಿ ಈ ಆಟ ಅತಿ ಪ್ರಾಮುಖ್ಯತೆ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ನಾಗರಪಂಚಮಿ ವೇಳೆ ಸುಮಾರು ಒಂದು ವಾರದವರೆಗೆ ಈ ಆಟದ್ದೇ ಪಾರುಪತ್ಯ.ನಿಂಬೆಹಣ್ಣನ್ನು ಸುಮಾರು ದೂರವಿರುವ ಕಂಬ ಅಥವಾ ಗಡಿ ದಾಟಿಸುವ ಬಾಜಿ ಕಟ್ಟಲಾಗುತ್ತದೆ. ಬಾಜಿಯಲ್ಲಿ ನಿಂಬೆಹಣ್ಣು ಹೊಡೆಯುವರು ಒಬ್ಬರಾದರೆ ಬಾಜಿ ಕಟ್ಟುವವರು ಹತ್ತಾರು ಜನ ಇರುತ್ತಾರೆ. ಆಟ ಆಡುವವರೊಂದಿಗೆ ನೋಡುವವರ ಸಂಖ್ಯೆಗೇನೂ ಕಡಿಮೆ ಇರುವುದಿಲ್ಲ. ಏಕೆಂದರೆ ನೋಡುವವರಿಗೂ ಈ ಆಟ ಅಷ್ಟೇ ಮುದ ನೀಡುತ್ತದೆ. ಪಂಚಮಿ ಹಬ್ಬದ ಪ್ರಯುಕ್ತ ಈ ಆಟಗಳಿಗೆ ಜೀವ ಬಂದಿದೆ.ನಶಿಸಿದ ಜೋಕಾಲಿ ಆಟ: ಈ ಹಿಂದೆ ವಿವಿಧ ಬಡಾವಣೆಯ ಮರ ಹಾಗೂ ಮನೆಗಳ ಮಾಳಿಗೆ ಸೇರಿದಂತೆ ಎಲ್ಲೆಂದರಲ್ಲಿ ಜೋಕಾಲಿ ಕಟ್ಟಿ ಚಿಕ್ಕಮಕ್ಕಳು, ಹೆಣ್ಣುಮಕ್ಕಳು, ಪುರುಷರು ಹೀಗೆ ಯಾವುದೇ ಭೇದಭಾವವಿಲ್ಲದೆ ಜೋಕಾಲಿ ಜೀಕುವ ದೃಶ್ಯಗಳು ಕಾಣಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಗೆ ಜೋಕಾಲಿ ನಶಿಸುತ್ತಿದ್ದು, ಕೆಲವೆಡೆ ಮಾತ್ರ ಜೋಕಾಲಿಗಳು ಕಾಣಸಿಗುತ್ತಿವೆ.

Share this article