ಶಿವಾನಂದ ಗೊಂಬಿ ಹುಬ್ಬಳ್ಳಿ
ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಮಿಶ್ರಣದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಪರಿಸರ ಸ್ನೇಹಿ, ಹೆಚ್ಚು ಬಾಳಕೆ ಬರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಹಾನಗರ ಪಾಲಿಕೆ ಪ್ರಾಯೋಗಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಇನ್ನು ಮುಂದೆ ಪಾಲಿಕೆಯಿಂದ ನಿರ್ಮಿಸುವ ಎಲ್ಲ ರಸ್ತೆಗಳಿಗೂ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ಪಾಲಿಕೆ ನಿರ್ಧರಿಸಿದೆ.ಕೇಂದ್ರ ಸರ್ಕಾರದ "ನ್ಯಾಷನಲ್ ಕ್ಲೀನ್ ಏರ್ " ಎಂಬ ಯೋಜನೆಯಿದೆ. ಇದರಡಿಯಲ್ಲಿ ಪರಿಸರ ರಕ್ಷಣೆಯ ಹಲವಾರು ಕೆಲಸಗಳನ್ನು ಮಾಡಲಾಗಿದೆ. ಅದರಲ್ಲೊಂದು ರಸ್ತೆ ನಿರ್ಮಾಣ. ಅದನ್ನು ಮಹಾನಗರ ಪಾಲಿಕೆ ಕೈಗೆತ್ತಿಕೊಂಡು ಪ್ರಾಯೋಗಿಕವಾಗಿ ಲಿಂಗರಾಜನಗರದಲ್ಲಿ 1.1 ಕಿಮೀ ರಸ್ತೆಯನ್ನು ಮಾಡಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರೆ ಬರೀ ಪ್ಲಾಸ್ಟಿಕ್ ಅಷ್ಟೇ ಬಳಸಲಾಗಿದೆ ಅಂತೇನೂ ಇಲ್ಲ. ಡಾಂಬರ್ ರಸ್ತೆಯಲ್ಲಿ ಡಾಂಬರ್‌ನೊಂದಿಗೆ ಶೇ. 8ರಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಿ ಬಳಸಲಾಗುತ್ತಿದೆ.
ಪ್ರತಿ ಮನೆಮನೆಯಿಂದ ದಿನನಿತ್ಯ ಕಸ ಸಂಗ್ರಹಿಸುವ ಪಾಲಿಕೆ, ಅದನ್ನು ಮೊದಲು ಕಾಂಪ್ಯಾಕ್ಟರಿ ಸ್ಟೇಷನ್‌ನಲ್ಲಿ ರಸ್ತೆಗೆ ಬಳಸಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ. ಡಾಂಬರ್ ರಸ್ತೆಯಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಅಂದರೆ ಎಲ್‌ಡಿಪಿಇ (Low-Density Polyethylene) ಅಂದರೆ ಕಡಿಮೆ ಸಾಂಧ್ರತೆಯ ಪಾಲಿಥಿಲೀನ್. ಶ್ರೆಡ್ಡಿಂಗ್ ಮೆಷಿನ್ ಸಹಾಯದಿಂದ ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ಡಾಂಬರ್ ಮಿಶ್ರಣ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಪ್ಲಾಸ್ಟಿಕ್ ತುಂಡುಗಳನ್ನು ಡಾಂಬಾರು ಮಿಶ್ರಣ ಘಟಕದಲ್ಲಿ ಜೆಲ್ಲಿ ಮತ್ತು ಟಾರಿನ ಮಿಶ್ರಣದ ಜತೆ ಸೇರಿಸಲಾಗುತ್ತದೆ. ಶೇ. 8ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ. ಅಂದರೆ 100 ಕೆಜಿ ಡಾಂಬರ್‌ಗೆ 8 ಕೆಜಿ ಪ್ಲಾಸ್ಟಿಕ್ ತ್ಯಾಜ್ಯದ ತುಂಡುಗಳನ್ನು ಬಳಸಬಹುದಾಗಿದೆ. ಇದಕ್ಕಿಂತ ಹೆಚ್ಚು ಬಳಸಬಾರದು. ಕಡಿಮೆನೂ ಬಳಸಬಾರದು. ಒಂದೆರಡು ಸಲ ಜೋರಾಗಿ ಮಳೆ ಸುರಿದರೆ, ದೊಡ್ಡ ದೊಡ್ಡ ವಾಹನಗಳು ಓಡಾಡಿದರೆ ಸಾಕು ತೆಗ್ಗು ದಿನ್ನೆಗಳು ಬೀಳುತ್ತವೆ. ಆದರೆ, ಪ್ಲಾಸ್ಟಿಕ್ ತ್ಯಾಜ್ಯದ ತುಂಡುಗಳನ್ನು ಬಳಸಿದ ರಸ್ತೆಗಳಲ್ಲಿ ಹಾಗೆ ಗುಂಡಿಗಳು ಬೀಳುವುದಿಲ್ಲ. ಡಾಂಬರ್‌ನಲ್ಲಿ ಮಿಶ್ರಣವಾಗಿರುವ ಪ್ಲಾಸ್ಟಿಕ್ ಅದನ್ನು ತಡೆಯುತ್ತದೆ. ಇದರಿಂದ ರಸ್ತೆಗಳ ದೃಢತೆ ಹೆಚ್ಚಾಗುತ್ತದೆ. ಹೆಚ್ಚೆಚ್ಚು ಬಾಳಕೆ ಬರುತ್ತದೆ. ಅಲ್ಲದೇ, ಸಾಮಾನ್ಯ ಡಾಂಬಾರ್ ರಸ್ತೆಗಿಂತ, ಪ್ಲಾಸ್ಟಿಕ್ ಮಿಶ್ರಿತ ರಸ್ತೆ ನಿರ್ಮಾಣಕ್ಕೆ ಪ್ರತಿ ಒಂದು ಕಿಲೋ ಮೀಟರ್ ರಸ್ತೆಗೆ ನಿಷ್ಠ ₹1.5 ಲಕ್ಷ ಹಣ ಉಳಿತಾಯವಾಗುತ್ತದೆ ಎಂದು ಪಾಲಿಕೆ ತಿಳಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆಯಾದಂತಾಗುತ್ತದೆ. ಪರಿಸರ ರಕ್ಷಣೆ ಹಾಗೂ ಪರಿಸರ ಸ್ನೇಹಿ ರಸ್ತೆ ನಿರ್ಮಾಣ ಮಾಡಿದಂತಾಗುತ್ತದೆ.ಸದ್ಯ ಲಿಂಗರಾಜನಗರದಲ್ಲಿ 1.1 ಕಿಮೀ ರಸ್ತೆಯನ್ನು ಮಾತ್ರ ಮಾಡಲಾಗಿದೆ. ಇದು ಪ್ರಯೋಗಾತ್ಮಕವಾಗಿ ಮಾಡಿರುವುದು. ಇನ್ನು ಮುಂದೆ ಪಾಲಿಕೆ ನಿರ್ಮಿಸುವ ಡಾಂಬರ್ ರಸ್ತೆಗಳಿಗೆಲ್ಲ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ನಿರ್ಧರಿಸಿದೆ. ಈ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಕೆ ಮಾಡಿದಂತಾಗುತ್ತದೆ. ರಸ್ತೆಗಳ ಗುಣಮಟ್ಟವನ್ನೂ ಹೆಚ್ಚಿಸಿದಂತಾಗುತ್ತದೆ ಎಂಬುದು ಪಾಲಿಕೆ ಅಧಿಕಾರಿಗಳ ಅಂಬೋಣ.
ಒಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ದಿಟ್ಟ ಹೆಜ್ಜೆಯನ್ನೇನೂ ಇಟ್ಟಿದೆ. ಆದರೆ, ಇದು ನಿರಂತರವಾಗಿ ಅನುಷ್ಠಾನಕ್ಕೆ ಬರಲಿ. ಎಲ್ಲ ರಸ್ತೆಗಳಲ್ಲೂ ಇದು ಬಳಕೆಯಾಗುವ ಮೂಲಕ ಪರಿಸರ ರಕ್ಷಣೆಗೆ ತನ್ನದೇ ಕೊಡುಗೆ ನೀಡಲಿ ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.ಪುಣೆಯಲ್ಲಿ ಬಳಕೆ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈಗಷ್ಟೇ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿ ರಸ್ತೆ ನಿರ್ಮಾಣ ಶುರುವಾಗಿದೆ. ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ ಹಲವು ವರ್ಷಗಳಿಂದಲೇ ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅಲ್ಲಿನ ಅರ್ಧದಷ್ಟು ರಸ್ತೆಗಳಿಗೆ ಪ್ಲಾಸ್ಟಿಕ್ ತ್ಯಾಜ್ಯವೇ ಬಳಕೆಯಾಗುತ್ತದೆ.
ಕೇಂದ್ರ ಸರ್ಕಾರದ ನ್ಯಾಷನಲ್ ಕ್ಲೀನ್ ಏರ್ ಯೋಜನೆಯಡಿ ಲಿಂಗರಾಜ್ ನಗರದಲ್ಲಿ 1.1 ಕಿಮೀ ರಸ್ತೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಣದಿಂದ ನಿರ್ಮಿಸಲಾಗಿದೆ. ಡಾಂಬರ್‌ನಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗಿದೆ. ಇದು ಮೊದಲ ಪ್ರಯೋಗ. ಇನ್ಮುಂದೆ ಪಾಲಿಕೆ ನಿರ್ಮಿಸುವ ಡಾಂಬರ್ ರಸ್ತೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗುವುದು ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.