ಮೊಬೈಲ್‌ ಬಳಕೆ ಮಿತಿಯಲ್ಲಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹಿತ

KannadaprabhaNewsNetwork | Updated : Mar 04 2024, 04:03 PM IST

ಸಾರಾಂಶ

ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ನುಡಿದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮೊಬೈಲ್ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತಮಿತವಾಗಿ ಬಳಸಿದರೆ ನಮ್ಮ ಜೀವನಕ್ಕೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ, ಪುಸ್ತಕದ ಮೊರೆಹೋಗಿ ಅದು ನಿಮ್ಮ ಭವಿಷ್ಯ ರೂಪಿಸುತ್ತದೆ ಎಂದರು.

ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯ. ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆಪಡದೇ, ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು ಎಂದರು.

ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೇ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳಿಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. ೧೦ ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ, ಅಲ್ಲಿಯವರೆಗೆ ಓದಿದ್ದನ್ನು ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿಗೆ ೮ ಗಂಟೆಗಳ ನಿದ್ರೆ ಅತ್ಯವಶ್ಯಕ. ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಸತೀಶ್ ಡಿ.ವಿ. ಶ್ರೀ ದಿಚುಂಚನಗಿರಿ ಟ್ರಸ್ಟ್ ಭದ್ರಾವತಿ ಶಾಖೆ ಆಡಳಿತಾಧಿಕಾರಿ ಬಿ.ಜಗದೀಶ್, ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರಾದ ಹೇಮಾ, ಗುರುಪುರ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಎಸ್‌.ಸುರೇಶ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರಮೇಶ್, ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ವೀಣಾ ಮತ್ತಿತರರು ಇದ್ದರು.

Share this article