ದೇಶದ ಭವಿಷ್ಯ ವರ್ಗಕೋಣೆಯಲ್ಲಿ ಅಡಗಿದೆ-ಡಿಡಿಪಿಐ ರಡ್ಡೇರ

KannadaprabhaNewsNetwork | Published : Jan 28, 2024 1:15 AM

ಸಾರಾಂಶ

ಭಾವಿ ಶಿಕ್ಷಕರು ಸದ್ಗುಣ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಅಧ್ಯಯನ ಪ್ರವೃತ್ತಿಯನ್ನು ಬೆಳೆಸಿಕೊಂಡು ಮಕ್ಕಳ ಕಲಿಕೆಗೆ ತಕ್ಕಂತೆ ಬೋಧನೆ ಮಾಡುವುದನ್ನು ಕರಗತಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಮ್.ಎ. ರಡ್ಡೇರ ಕರೆ ನೀಡಿದರು.

ಶಿರಹಟ್ಟಿ: ದೇಶದ ಭವಿಷ್ಯ ವರ್ಗಕೋಣೆಯಲ್ಲಿ ಅಡಗಿದೆ. ಹೀಗಾಗಿ ಭಾವಿ ಶಿಕ್ಷಕರು ಸದ್ಗುಣ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಅಧ್ಯಯನ ಪ್ರವೃತ್ತಿಯನ್ನು ಬೆಳೆಸಿಕೊಂಡು ಮಕ್ಕಳ ಕಲಿಕೆಗೆ ತಕ್ಕಂತೆ ಬೋಧನೆ ಮಾಡುವುದನ್ನು ಕರಗತಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಮ್.ಎ. ರಡ್ಡೇರ ಕರೆ ನೀಡಿದರು.

ಶುಕ್ರವಾರ ಸಂಜೆ ಪಟ್ಟಣದ ಫಕೀರ ಚನ್ನವೀರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ೨೧ನೇ ವರ್ಷದ ವಾರ್ಷಿಕೋತ್ಸವ, ಮಕ್ಕಳ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಸಂಸ್ಕಾರಯುತ ಶಿಕ್ಷಣ ಅವಶ್ಯವಾಗಿದೆ. ಈ ದೃಷ್ಟಿಯಿಂದ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಮುಖ್ಯ ಎಂದರು.

ವಿದ್ಯಾರ್ಥಿಗಳು ಪುಸ್ತಕದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಯನ್ನು ಇಚ್ಛಾಶಕ್ತಿಯಿಂದ ಕಲಿಯಬೇಕು. ಗ್ರಂಥಾಲಯ, ಸೃಜನಾತ್ಮಕ ಕಲೆ ಅಭಿವ್ಯಕ್ತಗೊಳಿಸುವ ಕೆಲಸ ಮಕ್ಕಳಿಂದ ಆಗಬೇಕು. ಈ ಶಾಲೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಮಕ್ಕಳಲ್ಲಿ ಸಾಧನೆ ತುಡಿತ, ಆತ್ಮವಿಶ್ವಾಸ ಹೆಚ್ಚಬೇಕು. ಮನುಷ್ಯನ ಮೆದುಳಿನ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ. ಅದು ಎಷ್ಟು ವಿಷಯ, ಮಾಹಿತಿ ಬೇಕಾದರೂ ಗ್ರಹಿಸಬಲ್ಲದು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಆಹಾರ ನೀಡಬೇಕು. ಘನತವೆತ್ತ ಬದುಕಿಗೆ ಶಿಕ್ಷಣ ಒಂದೇ ಮಾರ್ಗವಾಗಿದ್ದು, ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿರುವುದು ಮಕ್ಕಳ ಸಾಧನೆಯಿಂದ ತಿಳಿಯುತ್ತಿದೆ ಎಂದರು.

ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಟೀವಿ, ಮೊಬೈಲ್‌ನಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಟೀವಿ, ಮೊಬೈಲ್‌ನಿಂದ ದೂರವಿರಿಸಿ ಶಿಕ್ಷಣದ ಕಡೆ ಆಸಕ್ತಿ ವಹಿಸುವಂತೆ ಮಾಡಬೇಕು. ಕಲಿತ ಜ್ಞಾನ ಸದ್ಬಳಕೆ ಮಾಡಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ಮಕ್ಕಳು ಬೇರೆ ಕಡೆ ಆಕರ್ಷಣೆಗೆ ಒಳಗಾಗದಂತೆ ಬೆಳೆಸಬೇಕು ಎಂದು ಹೇಳಿದರು.

ಆಧುನಿಕ ಶಿಕ್ಷಣದಲ್ಲಿ ನೈತಿಕ ಮೌಲ್ಯ ಕಡಿಮೆಯಾಗುತ್ತಿದೆ. ಗರಿಷ್ಠ ಅಂಕಗಳಿಗಷ್ಟೇ ಶಿಕ್ಷಣ ಎಂಬ ಸ್ಥಿತಿಗೆ ತಲುಪಿದ್ದೇವೆ. ಮಕ್ಕಳಿಗೆ ಇದನ್ನೇ ಓದಬೇಕು, ಇಷ್ಟೇ ಅಂಕ ಗಳಿಸಬೇಕು ಎಂಬ ಒತ್ತಡ ಹಾಕಬಾರದು. ಮಕ್ಕಳಲ್ಲಿ ಭಗವಂತ ನೆಲೆ ನಿಂತಿರುತ್ತಾನೆ. ಮಕ್ಕಳ ಬುದ್ಧಿಮಟ್ಟ ಅತ್ಯುನ್ನತವಾಗಿದ್ದು, ಎಲ್ಲವನ್ನೂ ತಿಳಿದುಕೊಳ್ಳುವ ಹುಮ್ಮಸ್ಸು ಇರುತ್ತದೆ. ಇಂಥ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸುವುದು, ಕಲಿಕೆಗೆ ಪ್ರೋತ್ಸಾಹ ನೀಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ, ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸಮಯಕ್ಕೆ ಮಹತ್ವ ನೀಡಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಕಲಿತ ಶಾಲೆಗೆ, ಸಂಸ್ಥೆಗೆ, ಹೆತ್ತವರಿಗೆ ಕೀರ್ತಿ ತರಬೇಕು. ಮುಖ್ಯವಾಗಿ ಸಾಧಿಸಬೇಕೆಂಬ ಛಲ ವಿದ್ಯಾರ್ಥಿಗಳಲ್ಲಿದ್ದರೆ ಸಾಧನೆ ಮಾಡಬಹುದು ಎಂದರು.

ಸಿಸಿಎನ್ ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಮಾತನಾಡಿ, ದೃಢ ನಿರ್ಧಾರ ಮತ್ತು ಓದಿನಲ್ಲಿ ಏಕಾಗ್ರತೆ ಇದ್ದರೆ ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ತಪಸ್ಸಿಗೆ ಕುಳಿತವನಂತೆ ಏಕಾಗ್ರತೆಯಿಂದ ಓದುವ ಆಸಕ್ತಿ ಇರಬೇಕು ಎಂದು ಹೇಳಿದರು. ಗದಗ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಡಾ. ಸುನೀಲ ಎಂ. ಬುರಬುರೆ, ಅಶೋಕ ಸಂಕದಾಳ, ಜಯಶ್ರೀ ಚ. ನೂರಶೆಟ್ಟರ, ಮುಖ್ಯೋಪಾಧ್ಯಾಯ ಶಿವಕುಮಾರ ಎಸ್. ಶೆಟ್ಟರ, ಸುನಿತಾ ಎಂ. ಅಂಗಡಿ ಇತರರು ಇದ್ದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Share this article