ಗಲಾಟೆ, ಗದ್ದಲದಲ್ಲೇ ಮುಗಿದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ

KannadaprabhaNewsNetwork | Published : Nov 22, 2023 1:00 AM

ಸಾರಾಂಶ

ಈ ವೇಳೆ ಪರಿಸ್ಥಿತಿ ತಿಳಿಸಿಗೊಳಿಸಬೇಕಿದ್ದ ಮೇಯರ್‌ ಶಿವಕುಮಾರ್‌ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ಸರ್ಕಾರದಿಂದ ಅನುದಾನ ಬಂದ ನಂತರ ಪರಿಹಾರ ನೀಡಲಾಗುವುದು ಎಂದರು. ಇದನ್ನು ವಿರೋಧಿಸಿದ ವಿಪಕ್ಷದ ಸದಸ್ಯರು ಈ ಹಿಂದೆ ಮನೆಗೆ ಬೆಂಕಿಬಿದ್ದಾಗ, ಅಪಘಾತವಾದಾಗ ಅವರಿಗೆ ಸರ್ಕಾರದ ಅನುದಾನ ಕಾಯದೇ ಪಾಲಿಕೆಯಿಂದಲೇ ಕೊಡಲಾಗಿತ್ತು. ಈಗಲೂ ಅದೇ ರೀತಿ ಪಾಲಿಕೆಯಿಂದಲೇ ಪರಿಹಾರ ಕೊಡಬೇಕು. ಇಲ್ಲ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ, ಪರಿಹಾರ ಕೊಡಲು ಆಗಲ್ಲ ಎಂದು ಸಭೆಯಲ್ಲಿ ತೀರ್ಮಾನ ಮಾಡಿ ಎಂದು ಪಟ್ಟುಹಿಡಿದರು. ಆಗ ಗಲಾಟೆ ಇನ್ನಷ್ಟು ಹೆಚ್ಚಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸದಸ್ಯರ ಗದ್ದಲ, ಗಲಾಟೆ, ವಾಗ್ದಾದ ಮಾತಿನ ಚಕಮಕಿ ನಡುವೆಯೇ ಶಿವಮೊಗ್ಗ ಮಹಾನಗರ ಪಾಲಿಕೆಯ ಐದು ವರ್ಷದ ಆಡಳಿತದ ಕೊನೆಯ ಸಾಮಾನ್ಯ ಸಭೆ ನಡೆಯಿತು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆ ಕೇವಲ ಗಲಾಟೆ-ಗದ್ದಲಕ್ಕೆ ಬಲಿ ಆಯಿತು. ನಗರದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆಯಾಗಲಿಲ್ಲ. ಬದಲಿಗೆ ಸದಸ್ಯರ ಕಚ್ಚಾಟವೇ ಹೆಚ್ಚು ಮಾರ್ದನಿಸಿತು,

ಸಭೆ ಆರಂಭದಿಂದಲೇ ಸಭೆ ವ್ಯರ್ಥ ಪ್ರಲಾಪದಲ್ಲೇ ಮುಳುಗಿತು. ಸಭೆಯ ಉದ್ದಕ್ಕೂ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್‌ ಸದಸ್ಯರು ಪರಸ್ಪರ ಕಿಚ್ಚಾಯಿಸುವುದೇ ನಡೆಯಿತು.

ಈ ನಡುವೆ ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ದಿನ ನಡೆದ ಗಲಭೆಯಲ್ಲಿ ಆದ ಮನೆ ಹಾನಿ ಸಂತ್ರಸ್ತರಿಗೆ ಪಾಲಿಕೆಯಿಂದಲೇ ಪರಿಹಾರ ಕೊಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟುಹಿಡಿದರು. ಆಗ ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಪರಿಹಾರಕ್ಕೆ ಪಟ್ಟು:

ಈ ವೇಳೆ ಪರಿಸ್ಥಿತಿ ತಿಳಿಸಿಗೊಳಿಸಬೇಕಿದ್ದ ಮೇಯರ್‌ ಶಿವಕುಮಾರ್‌ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ಸರ್ಕಾರದಿಂದ ಅನುದಾನ ಬಂದ ನಂತರ ಪರಿಹಾರ ನೀಡಲಾಗುವುದು ಎಂದರು. ಇದನ್ನು ವಿರೋಧಿಸಿದ ವಿಪಕ್ಷದ ಸದಸ್ಯರು ಈ ಹಿಂದೆ ಮನೆಗೆ ಬೆಂಕಿಬಿದ್ದಾಗ, ಅಪಘಾತವಾದಾಗ ಅವರಿಗೆ ಸರ್ಕಾರದ ಅನುದಾನ ಕಾಯದೇ ಪಾಲಿಕೆಯಿಂದಲೇ ಕೊಡಲಾಗಿತ್ತು. ಈಗಲೂ ಅದೇ ರೀತಿ ಪಾಲಿಕೆಯಿಂದಲೇ ಪರಿಹಾರ ಕೊಡಬೇಕು. ಇಲ್ಲ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ, ಪರಿಹಾರ ಕೊಡಲು ಆಗಲ್ಲ ಎಂದು ಸಭೆಯಲ್ಲಿ ತೀರ್ಮಾನ ಮಾಡಿ ಎಂದು ಪಟ್ಟುಹಿಡಿದರು. ಆಗ ಗಲಾಟೆ ಇನ್ನಷ್ಟು ಹೆಚ್ಚಾಯಿತು.

ಈ ವೇಳೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಯಾವುದೇ ಗಲಭೆ ಸಂದರ್ಭದಲ್ಲಿ ಆದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದರೆ ಕಾಯಿದೆ ಪ್ರಕಾರ ಪಾಲಿಕೆಗೆ ಅವಕಾಶವಿಲ್ಲ. ನಷ್ಟವನ್ನು ಅಂದಾಜಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕು. ಸರ್ಕಾರವೇ ಪರಿಹಾರ ನೀಡುತ್ತದೆ ಎಂದರು.

ಪಾಲಿಕೆ ದಿವಾಳಿಯಾಗಿದೆಯೇ?:

ಇದಕ್ಕೆ ಉತ್ತರ ನೀಡಿದ ಕಾಂಗ್ರೆಸ್ ಸದಸ್ಯರಾದ ಯೋಗೇಶ್ ಮತ್ತು ನಾಗರಾಜ ಕಂಕಾರಿ ಹಾಗೇನೂ ಇಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ಘಟನೆಗಳಾಗಿವೆ. ನಾವೇನೂ ಯಾವ ಸರ್ಕಾರಕ್ಕೂ ಕೇಳಿಲ್ಲ. ಪಾಲಿಕೆಯಿಂದಲೇ ಪರಿಹಾರ ನೀಡಿದ್ದೇವೆ. ಬೇಕಾದರೆ ಕಡತಗಳನ್ನು ಪರಿಶೀಲಿಸಿ. ಹಾಗಾಗಿ, ಸರ್ಕಾರಕ್ಕೆ ಕೇಳಬೇಕಾದ ಅವಶ್ಯಕತೆ ಇಲ್ಲ. ಅಷ್ಟೊಂದು ದಿವಾಳಿಯಾಗಿದೆಯೇ ಪಾಲಿಕೆ ಎಂದು ಪ್ರಶ್ನಿಸಿದರು.

ಶಾಸಕರ ಹೇಳಿಕೆ ಕೆಂಡಮಂಡಲ:

ಗಲಾಟೆ ನಡುವೆಯೇ ಸಭೆಗೆ ಆಗಮಿಸಿದ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಪರಿಹಾರ ಕೊಡಲು ಹಣವೇ ಇಲ್ಲ. ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ ಹಿಂದೂ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಅವರಿಗೆ ಮೊದಲು ಆದ್ಯತೆ ಕೊಟ್ಟು,ಪರಿಹಾರವನ್ನು ಪಾಲಿಕೆಯಿಂದಲೇ ನೀಡಿ ಎನ್ನುತ್ತಿದ್ದಂತೆ, ಶಾಸಕರ ಈ ಮಾತಿಗೆ ಕಾಂಗ್ರೆಸ್ ಸದಸ್ಯರು ಕೆಂಡಮಂಡಲವಾದರು. ಶಾಸಕರಿಗೆ ಸಂವಿಧಾನದ ಪ್ರಜ್ಞೆ ಇರಲಿ. ಕೇವಲ ಹಿಂದೂ ಮನೆಗಳಿಗೆ ಎಂಬ ಅವರ ಹೇಳಿಕೆ ಖಂಡನೀಯ. ಗಲಾಟೆಯಲ್ಲಿ ಹಾನಿಗೊಳಗಾದ ಎಲ್ಲ ಮನೆಗಳಿಗೂ ಪರಿಹಾರ ನೀಡಲಿ. ಆದರೆ ಶಾಸಕರು ಕೇವಲ ಹಿಂದೂ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ, ಒಬ್ಬ ಶಾಸಕರಾಗಿ ಇವರ ಹೇಳಿಕೆ ಸಂವಿಧಾನ ವಿರೋಧವಾದದ್ದು. ತಕ್ಷಣ ಇದನ್ನು ವಾಪಸ್‌ ತೆಗೆದುಕೊಳ್ಳಬೇಕು ಆಗ್ರಹಿಸಿದರು.

ಸರ್ಕಾರ ಸತ್ತಿಲ್ಲ, ಪಾಲಿಕೆ ಸತ್ತಿದೆ:

ಆದರೆ, ಇದನ್ನು ಒಪ್ಪದ ಶಾಸಕರು ಅಲ್ಲಿ ಕೇವಲ ಹಿಂದೂ ಮನೆಗಳಿಗೆ ಮಾತ್ರ ಹಾನಿಯಾಗಿದೆ. ಹಿಂದೂಗಳನ್ನು ಗುರಿಯಾಗಿಟ್ಟುಕೊಂಡೇ ಈ ಗಲಾಟೆ ಎಬ್ಬಿಸಲಾಗಿದೆ. ಇದಕ್ಕೆ ಪರಿಹಾರವನ್ನು ಪಾಲಿಕೆಯೇ ನೀಡಲಿ. ಏಕೆಂದರೆ ಸರ್ಕಾರ ಸತ್ತುಹೋಗಿದೆ ಎಂದು ಟೀಕಿಸಿದರು. ಇದರಿಂದ ಮತ್ತಷ್ಟು ಕೆರಳಿದ ಕಾಂಗ್ರೆಸ್ ಸದಸ್ಯರು ಸರ್ಕಾರ ಸತ್ತಿಲ್ಲ. ಪಾಲಿಕೆ ಸತ್ತಿದೆ. ಸರ್ಕಾರದ ಎಲ್ಲ ಭಾಗ್ಯಗಳು ಜನರನ್ನು ತಲುಪುತ್ತಿವೆ. ಸದೃಢವಾಗಿದೆ. ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ₹50ರ ನಾಲ್ಕು ನೋಟುಗಳನ್ನು ಕೂಡ ಸಭೆಗೆ ಪ್ರದರ್ಶಿಸಿ, ₹2 ಸಾವಿರ ಬಂತಾ ಎಂದು ಘೋಷಣೆ ಕೂಗಿದರು.

18 ಮನೆಗಳಿಗೆ ಹಾನಿ- ಧೀರರಾಜ್‌:

ಬಳಿಕ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಸುಮಾರು ₹3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪಾಲಿಕೆ ವತಿಯಿಂದ ಸಂತ್ರಸ್ತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ ಸದಸ್ಯರು ಸಹಮತ ವ್ಯಕ್ತಪಡಿಸಿ ಪರಿಹಾರ ನೀಡುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ನಿಮ್ಮದೇ ಸರ್ಕಾರವಿದೆ. ಸರ್ಕಾರಕ್ಕೆ ಮನವಿ ಮಾಡಿ ಅನುದಾನ ಕೊಡಿಸಿ ಎಂದು ಹರಿಹಾಯ್ದರು.

ಕಾಂಗ್ರೆಸ್ ಸದಸ್ಯರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ನಾಗರಾಜ್ ಕಂಕಾರಿ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಸೇರಿದಂತೆ ಕಾಂಗ್ರೆಸ್ ಸದಸ್ಯರು ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ. ಅನುದಾನ ನೀಡುವಲ್ಲಿ, ಕಾಮಗಾರಿ ಪೂರ್ಣ ಮಾಡುವಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್‍ಗಳಲ್ಲಿ ಕಾಮಗಾರಿಗಳೇ ಆಗಿಲ್ಲ. ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.

ಆಡಳಿತ ಪಕ್ಷದ ಸದಸ್ಯರು ಎಲ್ಲಾ ವಾರ್ಡುಗಳಲ್ಲಿ ಕೆಲಸವಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಅನುದಾನ ಸಿಕ್ಕಿದೆ. ಈಗ ಕಾಂಗ್ರೆಸ್ ಸರ್ಕಾರವೇ ಇದೆ. ಆದರು ಅನುದಾನ ಬರಲಿಲ್ಲ. ಪಾಲಿಕೆ ದಿವಾಳಿಯಾಗಿಲ್ಲ. ಸರ್ಕಾರವೇ ದಿವಾಳಿಯಾಗಿದೆ ಎಂದು ಆರೋಪಿಸಿದರು.

ಸದಸ್ಯರಾದ ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಇ.ವಿಶ್ವಾಸ್, ಶಂಕರ್ ಗನ್ನಿ ಸೇರಿದಂತೆ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದರು. ಎರಡೂ ಪಕ್ಷಗಳ ನಡುವೆ ಮೇಯರ್ ಉತ್ತರ ಹೇಳಲು ಸಾಧ್ಯವಾಗಲೇ ಇಲ್ಲ. ಆಯುಕ್ತರು ಕೂಡ ಮೌನಕ್ಕೆ ಜಾರಿದ್ದರು.

ಸಭೆಯಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್ ಹಾಗೂ ಅಧಿಕಾರಿಗಳು ಇದ್ದರು.

- - - ಬಾಕ್ಸ್‌ ಶ್ರೀರಾಮನ ಹೆಸರಿಗೆ ಮಸಿ: ಸದಸ್ಯೆ ಆರೋಪ

ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯೆ ಮೇಹಕ್ ಷರೀಫ್‌ ಮಾತನಾಡಿ, ನಾನು ಶ್ರೀರಾಮ ನಗರದ ಸದಸ್ಯೆ. ಆದರೆ, ಇಲ್ಲಿ ಶ್ರೀರಾಮನನ್ನೇ ಮರೆಯಲಾಗಿದೆ. ರಾಮನ ಹೆಸರಿಗೆ ಮಸಿ ಬಳಿಯಲಾಗಿದೆ ಎಂದರು. ಈ ಮಾತನ್ನ ಸ್ವಾಗತಿಸಿದ ಕಾಂಗ್ರೆಸ್ ಸದಸ್ಯರು ಹೌದು, ರಾಮನಿಗೆ ಅನ್ಯಾಯವಾಗಿದೆ. ಶ್ರೀರಾಮ, ಲವ-ಕುಶ, ಆಂಜನೇಯ ಅವರ ಹೆಸರಿನಲ್ಲಿದ್ದ ಪಾಲಿಕೆಯ ಎಲ್ಲ ಯೋಜನೆಗಳು ವಿಫಲವಾಗಿವೆ ಎಂದು ಧ್ವನಿಗೂಡಿಸಿದರು.

ಸದಸ್ಯೆ ರೇಖಾ ರಂಗನಾಥ್ ಮಾತನಾಡಿ, ಪ್ರಧಾನಿ ಯೋಜನೆಯಡಿಯಲ್ಲಿ ಯಾವ ಮನೆಗಳೂ ನಿರ್ಮಾಣವಾಗಿಲ್ಲ. ಕೇವಲ 300 ಮನೆಗಳು ಮಾತ್ರ ಅಭಿವೃದ್ಧಿಯಲ್ಲಿವೆ ಎನ್ನುತ್ತಿದ್ದಂತೆಯೇ, ಮೇಯರ್ ಶಿವಕುಮಾರ್ ಅವರು 1300 ಮನೆಗಳು ರೆಡಿಯಾಗಿವೆ ಎಂದರು. ರಮೇಶ್ ಹೆಗ್ಡೆ ಮಾತನಾಡಿ, 1300 ಮನೆಗಳು ಅಲ್ಲ, ದಾಖಲೆ ತೋರಿಸಲಿ. ಮೋದಿ ಹೆಸರಿನ ಯೋಜನೆಯು ವಿಫಲವಾಗಿದೆ ಎಂದು ಹರಿಹಾಯ್ದರು, ಗಲಾಟೆ ಮಧ್ಯೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕೂಡ ಸಭೆಯಲ್ಲಿ ಹೆಚ್ಚು ಹೊತ್ತು ಇರದೇ ಸಭೆಯಿಂದ ತೆರಳಿದರು.

- - - -21ಎಸ್‌ಎಂಜಿಕೆಪಿ02:

ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿದರು.

Share this article