ಕನ್ನಡಪ್ರಭ ವಾರ್ತೆ ನಂಜನಗೂಡು
ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದ ಶ್ರೀ ಕಂಠೇಶ್ವರಸ್ವಾಮಿಯ ವೈಭವಯುತ ಪಂಚಮಹಾ ರಥೋತ್ಸವವು (ದೊಡ್ಡ ಜಾತ್ರೆಯು) ಏ. 9 ರಂದು ಬುಧವಾರ ಜರುಗಲಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.ಈಗಾಗಲೇ ರಥದ ಚಕ್ರ ಬದಲಿಸುವ ಕಾರ್ಯ, ರಥವನ್ನು ಜಾತ್ರೆಗೆ ಸನ್ನದ್ಧಗೊಳಿಸುವ ಕೆಲಸ ಭರದಿಂದ ಸಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಮೂಲಸೌಕರ್ಯ ಸೇರಿದಂತೆ ಸಿದ್ಧತೆ ನಡೆಸಲಾಗಿದ್ದು, ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗಿದೆ. ದೇವಾಲಯದ ಆಸು ಪಾಸಿನಲ್ಲಿ ಮತ್ತು ಕಪಿಲಾ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.
ಇನ್ನು ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಹೆಚ್ಚುವರಿ ರೈಲುಗಳನ್ನು ಮತ್ತು ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ.ಪೊಲೀಸರ ಕಣ್ಗಾವಲು
ಭಕ್ತಾಧಿಗಳ ಸುರಕ್ಷತೆಯ ದೃಷ್ಟಿಯಿಂದ ನಗರದ ಆಯಕಟ್ಟಿನ ಸ್ಥಳಗಳಲ್ಲಿ ವಾಚ್ ಟವರ್ ಗಳ ನಿರ್ಮಾಣ, ಸಿಸಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ನಡೆಸಲಾಗಿದೆ. ಜೊತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲದೆ ನಗರದ ಪ್ರಮುಖ ಸ್ಥಳಗಳಲ್ಲಿ ಹೊರ ಊರಿನಿಂದ ಬರುವ ಭಕ್ತಾಧಿಗಳಿಗೆ ಮಾಹಿತಿ ನೀಡುವ ಸಲುವಾಗಿ ಮಾಹಿತಿ ಕೇಂದ್ರ ತೆರೆಯಲಾಗಿದೆ.ವಿದ್ಯುತ್ ದೀಪ ಅಲಂಕಾರ : ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯದ ಆವರಣದ ಸುತ್ತಲೂ ಕೂಡ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಪ್ರಸಾದ ವಿತರಣೆಯ ಬಗ್ಗೆ ಕಟ್ಟೆಚ್ಚರಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದ್ದು ಜಾತ್ರಾ ಮಹೋತ್ಸವದಂದು ವಿವಿಧ ಸಂಘ ಸಂಸ್ಥೆಗಳವರು ನೀಡುವ ಪ್ರಸಾದ ವಿತರಣೆಯಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
5 ರಥಗಳು ಒಮ್ಮೆಲೇ ಚಲಿಸುವ ಏಕೈಕ ಸ್ಥಳಇಡೀ ದಕ್ಷಿಣ ಭಾರತದಲ್ಲೇ ಒಂದೇ ಬಾರಿಗೆ 5 ರಥಗಳನ್ನು ಏಕ ಕಾಲದಲ್ಲಿ ಎಳೆಯುವ ಏಕೈಕ ಕ್ಷೇತ್ರವೆಂದು ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯು ಪ್ರಸಿದ್ದಿಯಾಗಿದೆ. ಮೊದಲು ಗಣಪತಿ, ಪಾರ್ವತಿ ಸಮೇತ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಮಣ್ಯಸ್ವಾಮಿ, ಚಂಡಿಕೇಶ್ವರ ಸ್ವಾಮಿಯ ರಥಗಳು ರಥ ಬೀದಿಯಲ್ಲಿ ಚಲಿಸಲಿವೆ.
ಶ್ರೀ ಗೌತಮ ಮಹಾರಥವು 92 ಅಡಿ ಎತ್ತರವಿದ್ದು, 250 ಟನ್ ಗಳಷ್ಟು ತೂಕವಿದ್ದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಈಗಾಗಲೇ ರಥೋತ್ಸವದ ಅಂಗವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ರಥಗಳ ಚಕ್ರವನ್ನು ಸರಿಪಡಿಸಿ ಹೊಸ ಹಗ್ಗ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಬಣ್ಣ ಬಣ್ಣದ ಬಾವುಟಗಳನ್ನು ಕಟ್ಟಿ, ರಥವನ್ನು ವಿಶೇಷವಾಗಿ ಕಂಗೊಳಿಸುವಂತೆ ಮಾಡುವ ಸಲುವಾಗಿ ಕಾರ್ಮಿಕರು ಕಳೆದ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದಾರೆ.ಅಲ್ಲದೆ ಪಾರ್ವತಿ ರಥ, ಗಣಪತಿ, ಸುಭ್ರಮಣ್ಯೇಶ್ವರ, ಚಂಡಿಕೇಶ್ವರ ರಥಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇವಾಲಯದ ಸುತ್ತಲೂ ಕೂಡ ತಳಿರು ತೋರಣ ಕಟ್ಟುವ ಮೂಲಕ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ.
ಏ. 9ರಂದು ಬುಧವಾರ ಉದಯಾತ್ಪೂರ್ವ 5 ರಿಂದ 5.40 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣ ಜರುಗಲಿದ್ದು ಇದನ್ನೇ ಲಕ್ಷಾಂತರ ಭಕ್ತಾಧಿಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.ರಥದಲ್ಲಿ ವಜ್ರ ವೈಡುರ್ಯ ಖಚಿತ ಶ್ರೀಕಂಠೇಶ್ವರಸ್ವಾಮಿಯವರ ಮೂರ್ತಿಯನ್ನು ಇರಿಸಿ ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ನಿಗದಿತ ಸಮಯದಲ್ಲಿ ಅರ್ಚಕ ವೃಂದ ಧಾರ್ಮಿಕ ವಿಧಿವಿಧಾನ, ವೇದ ಘೋಷ ಮೊಳಗಿಸಿದ ನಂತರ ಮಹಾಮಂಗಳಾರತಿ, ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಗುವುದು.
ಈ ಅಮೃತಘಳಿಗೆಯನ್ನೇ ಲಕ್ಷಾಂತರ ಭಕ್ತರು ಪುಳಕಿತಗೊಂಡು ಬಾರೀ ಗಾತ್ರದ ಹಗ್ಗವನ್ನು ಹಿಡಿದು ಜೈ ಶ್ರೀಕಂಠ. ಜೈ ನಂಜುಡ, ಜೈ ಪಾರ್ವತಿದೇವಿ ಎಂಬ ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೊಗುತ್ತಾ ರಥವನ್ನು ಎಳೆಯುತ್ತಾರೆ. ರಥವು ರಾಜಗಾಂಭೀರ್ಯದಿಂದ ಚಲಿಸುವುದನ್ನು ನೋಡಿ ಭಕ್ತರು ಭಾವಪರವಶರಾಗಿ ಪುಳಕಿತರಾಗುತ್ತಾರೆ.ನಂತರ ಏ. 11ರ ಶುಕ್ರವಾರ ಉತ್ತರ ನಕ್ಷತ್ರದ ದಿನ ಅವಭೃತ ತೀರ್ಥಸ್ನಾನ ಮಾಡಿದರೆ, ಮಾಡಿದ ಪಾಪಗಳೆಲ್ಲವೂ ನಶಿಸಿ ಹೋಗುತ್ತದೆ ಎಂಬ ನಂಬಿಕೆ ಇದ್ದು ಭಕ್ತರು ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುವರು. ಅಲ್ಲದೆ ಅದೇ ದಿನ ಸಂಜೆ 7 ಗಂಟೆಗೆ ಕಪಿಲಾ ನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳುಜಾತ್ರಾ ಮಹೋತ್ಸವ ಅಂಗವಾಗಿ ಈಗಾಗಲೇ ದೇವಾಲಯದಲ್ಲಿ ಏ. 2 ರಿಂದಲೇ ವಿವಿಧ ರೀತಿಯ ಧಾರ್ಮಿಕ ಕೈಂಕಾರ್ಯ ಆರಂಭಿಸಲಾಗಿದೆ. ಜಾತ್ರಾ ಮಹೋತ್ಸದಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ಅಂದು ಸಂಜೆ ಹಂಸಾರೋಹಣ ನಂತರ ನಟೇಶೋತ್ಸವ, ಏ. 10ರಂದು ಮೃಗಯಾತ್ರಾಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣೋತ್ಸವ, ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏ. 11ರಂದು ಚೂಣೋತ್ಸವ, ಅವಭೃತ ತೀರ್ಥಸ್ನಾನ, ರಾತ್ರಿ 7 ಗಂಟೆಗೆ ತೆಪ್ಪೋತ್ಸವ ನಂತರ ನರಾಂಧೂಳಿಕಾರೋಹಣೋತ್ಸವ, ಧ್ವಜಾವರೋಹಣ, ಏ. 12 ರಂದು ಪೌರ್ಣಿಮೆ ಅಂಗವಾಗಿ ಪುಷ್ಪಯಾಗ ಪೂರ್ವಕ ಪಂಚೋಪರಾಪೂರ್ವಕ ಕೈಲಾಸಯಾನಾ ರೋಹಣೋತ್ಸವ, ಏ. 13 ರಂದು ಮಹಾಸಂಪ್ರೋಕ್ಷಣೆ ಪೂರ್ವಕ ನಂದಿವಾಹನೋತ್ಸವ, ಶಯನೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಜಾತ್ರಾ ಮಹೋತ್ಸವನ್ನು ಹಾಗೂ ರಥೋತ್ಸವವನ್ನು ರಾಜ್ಯದ ವಿವಿಧ ಭಾಗಗಳ ಭಕ್ತಾಧಿಗಳು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.