ಗಿರಿಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು

KannadaprabhaNewsNetwork | Published : Dec 16, 2024 12:46 AM

ಸಾರಾಂಶ

ತಲೆತಲಾಂತರದಿಂದ ಕಾಡಿನ ನಡುವೆ ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮದೇ ಸಂಸ್ಕ್ರತಿ, ಸಂಪ್ರದಾಯಗಳೊಂದಿಗೆ ಜೀವನ ನಿರ್ವಹಿಸಿಕೊಂಡು ಬರುತ್ತಿರುವ ಗಿರಿಜನರು ಈ ನಾಡಿನ ಪ್ರಜೆಗಳು. ಅವರಿಗೆ ಇಲ್ಲಿ ಎಲ್ಲಾ ರೀತಿಯ ಬದುಕುವ ಹಕ್ಕುಗಳಿವೆ. ಸರ್ಕಾರಗಳು ಗಿರಿಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ತಲೆತಲಾಂತರದಿಂದ ಕಾಡಿನ ನಡುವೆ ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮದೇ ಸಂಸ್ಕ್ರತಿ, ಸಂಪ್ರದಾಯಗಳೊಂದಿಗೆ ಜೀವನ ನಿರ್ವಹಿಸಿಕೊಂಡು ಬರುತ್ತಿರುವ ಗಿರಿಜನರು ಈ ನಾಡಿನ ಪ್ರಜೆಗಳು. ಅವರಿಗೆ ಇಲ್ಲಿ ಎಲ್ಲಾ ರೀತಿಯ ಬದುಕುವ ಹಕ್ಕುಗಳಿವೆ. ಸರ್ಕಾರಗಳು ಗಿರಿಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ಅವರು ತಾಲೂಕಿನ ಕೆರೆಪಂಚಾಯಿತಿ ಬಾಳಗೆರೆ ಗ್ರಾಮದ ಮುಂಡಗಾರುವಿನಲ್ಲಿ ಆಯೋಜಿಸಲಾಗಿದ್ದ ಗಿರಿಸಂಗಮ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾಡಿನಲ್ಲಿರುವ ನಮಗೆ ಹೇಗೆ ಸರ್ಕಾರಗಳು ಸೌಲಭ್ಯಗಳನ್ನು ನೀಡುತ್ತದೆಯೋ ಹಾಗೂ ನಾಡಿನಾಚೆಯಿರುವ ಗಿರಿಜನರಿಗೂ ನೀಡಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ನಮ್ಮ ಸಂವಿಧಾನದಲ್ಲಿ ಬದುಕುವ ಹಕ್ಕುಗಳನ್ನು ನೀಡಿದೆ. ಗುಡ್ಜಗಾಡು, ಅರಣ್ಯ ಪ್ರದೇಶಗಳಲ್ಲಿ ತಲೆತಲಾಂತರ ವರ್ಷಗಳಿಂದ ಬದುಕು ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರಗಳು ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಅವರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಬಯಸುವುದು ನೆಮ್ಮದಿಯನ್ನು.ಆಸ್ತಿ, ಹಣ, ಅಂತಸ್ತಿನಿಂದ ನೆಮ್ಮದಿ ಸಿಗುವುದಿಲ್ಲ. ಮನುಷ್ಯನಿಗೆ ಲೌಕಿಕತೆಯ ಜೊತೆ ಅಲೌಕಿಕತೆಯೂ ಬೇಕು. ನೆಮ್ಮದಿ ದೊರಕಲು ನಾವು ಭಗವಂತನ ಸ್ಮರಣೆ ಮಾಡಬೇಕು. ಭಗವಂತನಲ್ಲಿ ಶ್ರದ್ಧೆ, ಭಕ್ತಿ ಹೊಂದಬೇಕು. ಆಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತನ ಅನುಗ್ರಹದಿಂದ ಸುಖ ಶಾಂತಿ ಸಿಗುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಿದ ಶ್ರೀ ಕೃಷ್ಣನ ಅನುಗ್ರಹ ಮತ್ತು ನಮ್ಮ ಪ್ರಯತ್ನಗಳಿಂದ ನಾವು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಪ್ರತಿಯೊಬ್ಬರು ಧರ್ಮ ಪರಿಪಾಲನೆ ಮಾಡಬೇಕು. ಧರ್ಮ ಮಾರ್ಗದಲ್ಲಿ ಮುನ್ನೆಡೆಯಬೇಕು.

ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ದೇವಸ್ಥಾನಗಳನ್ನು ಕಟ್ಟವುದು, ಜೀರ್ಣೋದ್ಧಾರ ಮಾಡುವುದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮ ಧರ್ಮ, ಸಂಸ್ಕ್ರತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ಮಾತನಾಡಿ, ಗಿರಿಜನರೂ ನಮ್ಮಂತೆ ಬದುಕುವವರು. ಅವರಿಗೂ ಸಮಸ್ಯೆಗಳಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ಬದುಕುತ್ತಿರುವ ಅವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಉಪಟಳಗಳಿಂದ ಅವರಿಗೆ ಓಡಾಡಲು ರಸ್ತೆಯಿಲ್ಲ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ಕಾನೂನು ಕಾಯ್ದೆಗಳಿಂದ ಅವರಿಗೆ ಅಭಿವೃದ್ಧಿ ಮರಿಚೀಕೆಯಾಗಿದೆ. ಎಲ್ಲವನ್ನು ಕಾಯ್ದೆ ಕಾನೂನುಗಳ ವ್ಯಾಪ್ತಿಯಲ್ಲಿ ನೋಡುವುದಕ್ಕಿಂತ ಮಾನವೀಯತೆ, ಮನುಷತ್ವವನ್ನು ನೋಡಬೇಕು. ಬದುಕುವ ಹಕ್ಕನ್ನು ಕಸಿದುಕೊಳ್ಳಬಾರದು. ಗಿರಿಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಗಿರಿಜನರು ತಲೆ ತಲಾಂತರದಿಂದ ಸನಾತನ ಧರ್ಮದ ವಾರರಸುದಾರರಾಗಿದ್ದಾರೆ ಎಂದು ಶ್ಲಾಘಿಸಿದರು.

ಗಿರಿಜನ ಮುಖಂಡ ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿರಿಜನರಾದ ನಾವು ತಲೆತಲಾಂತರಿಂದ ಬದುಕಿಗಾಗಿ ಕೃಷಿ ಮಾಡಿಕೊಂಡಿದ್ದೇವೆ. ಅರಣ್ಯ ಇಲಾಖೆಯ ದೌರ್ಜನ್ಯ, ಕಿರುಕುಳ ನಿರಂತರವಾಗಿದೆ. 1 ಎಕರೆ ಜಮೀನಿಗೂ ಭೂಕಬಳಿಕೆ ಕೇಸು ದಾಖಲಿಸುತ್ತಿದ್ದಾರೆ. ಇತರತಂತೆ ನಮಗೂ ಬದುಕುವ ಹಕ್ಕು ಬೇಕು. ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಗಣಪಾತ್ರಿಗಳಾದ ಗಿಡ್ಡಮ್ಮ ಹಾಗೂ ಗೌರಮ್ಮರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಗಿರಿಜನ ಅಭಿವೃದ್ಧಿ ಅಧಿಕಾರಿ ಭಾಗೀರಥಿ, ತಾಪಂ ಇಒ ಸುದೀಪ್, ಶಿವರಾಜ್, ಚೇತನ್, ಗುರುದತ್ತ್ ಮತ್ತಿತರರುಇದ್ದರು.

Share this article