ಕನ್ನಡಪ್ರಭ ವಾರ್ತೆ ಸಿಂದಗಿ
ಗುರು, ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.ಸಿಂದಗಿ ಸಾರಂಗಮಠ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಯೋಗದೊಂದಿಗೆ ಶ್ರೀ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥ ಕರ್ತೃಗಳಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ಮರಣಾರ್ಥ ಸಿಂದಗಿಯ ಸಾರಂಗಮಠದ ಲಿಂ.ಚನ್ನವೀರ ಮಹಾಸ್ವಾಮೀಜಿಗಳ 132ನೇ ಜಯಂತ್ಯುತ್ಸವದ ನಿಮಿತ್ತ ಚೆನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನ ಕೊಡಮಾಡುವ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಮ್ಮುಖ ವಹಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಸುವರ್ಣಮಾಲೆ ಧರಿಸಿದವರಿಗಿಂತ ವರ್ಣಮಾಲೆ ಧರಿಸಿದವರು ಶ್ರೇಷ್ಠರು. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದೂ ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದುದು. ಜೀವಾತ್ಮರಲ್ಲಿ ಪರಮಾತ್ಮ ನೆಲೆಸಿದ್ದಾನೆ. ತನ್ನನ್ನು ತಾನು ದೇವರಿಗಾಗಿ, ಧರ್ಮಕ್ಕಾಗಿ ಅರ್ಪಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು ಎಂದರು.ಸನ್ಮಾನ ಸ್ವೀಕರಿಸಿ ಹ.ಮ.ಪೂಜಾರ ಮಾತನಾಡಿ, ಶಿಕ್ಷಕ ಮಗುವಿನ ವಿಕಸನಗೊಳಿಸಬೇಕು. ಶಿಕ್ಷಕ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ಸೃಜನ ಶೀಲತೆಯನ್ನು ಬೆಳೆಸಬೇಕು. ಒಬ್ಬ ಶಿಕ್ಷಕ ಪ್ರತಿನಿತ್ಯ ಓದುವ ಮೂಲಕ ಹೊಸ ವಿಚಾರಗಳನ್ನು ಮಕ್ಕಳಲ್ಲಿ ಬೆಳೆಯುವ ಹಾಗೆ ಪಾಠ ಬೋಧನೆ ಮಾಡಬೇಕು. ವಿಜ್ಞಾನ, ತಂತ್ರಜ್ಞಾನ ಚರ್ಚಾಕೂಟಗಳನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಕರು ಹೇಗೆ ಪಾಠ ಬೋಧನೆ ಮಾಡಬೇಕು ಎನ್ನುವ ಪುಸ್ತಕವನ್ನು ಬರೆಯುವ ಆಸೆಯನ್ನು ಹೊಂದಿದ್ದೇನೆ. ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ನನ್ನಲ್ಲಿ ಮೂಡಿಸಿದೆ ಎಂದರು.
ಕೆರೂರು ಚರಂತಿಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ರಚಿಸಿದ ವೀರಶೈವ ಪರಂಪರೆ ಗ್ರಂಥದ ಕುರಿತು ಮಾತನಾಡಿದ ಅವರು, ಮೊಬೈಲ್ ಬಂದ ಮೇಲೆ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವೀರಶೈವ ಪರಂಪರೆಯನ್ನು ಇಂದು ಎಲ್ಲರೂ ಮರೆಯುತ್ತಿದ್ದಾರೆ. ಅದನ್ನು ತಿಳಿದುಕೊಳ್ಳುವ ದಿಸೆಯಲ್ಲಿ ವೀರಶೈವ ಪರಂಪರೆಯ ಕುರಿತಾಗಿ ಕಿರು ಹೊತ್ತಿಗೆಯನ್ನು ಹೊರತರಲಾಗಿದೆ. ಇದರಲ್ಲಿ 12ನೆಯ ಶತಮಾನದಲ್ಲಿರುವ ಬಸವಾದಿ ಶರಣರ ಮತ್ತು ಪಂಚಾರ್ಯರಿಗೂ ಅವಿನಾಭಾವ ಸಂಬಂಧವಿರುವುದನ್ನು ತಿಳಿಸಲಾಗಿದೆ. ಎಲ್ಲರೂ ಇದನ್ನು ಓದಿ ತಿಳಿದುಕೊಳ್ಳಬೇಕು. ವೀರಶೈವ ಮತ್ತು ಲಿಂಗಾಯತ ಎಂಬುದು ಒಂದೆಯಾಗಿದೆ. ಲಿಂಗವನ್ನು ಧರಿಸಿದ ಪ್ರತಿಯೊಬ್ಬರು ಲಿಂಗಾಯತರು ಎಂದು ಹೇಳಿದರು.ಈ ವೇಳೆ ಹುಕ್ಕೇರಿ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶ್ರೀಗಳು, ಕೊಟ್ಟೂರು ಶ್ರೀಮಠ ಡಾ.ಸಿದ್ದಲಿಂಗ ಶ್ರೀಗಳು ಮಾತನಾಡಿದರು. ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಪುರಾಣಿಕರಾದ ಹರನಾಳದ ಸಂಗನಬಸವ ಮಹಾಸ್ವಾಮಿಗಳು, ಶಿವಕುಮಾರ ಶ್ರೀಗಳು, ಶಾಸಕ ಅಶೋಕ ಮನಗೂಳಿ, ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಅಶೋಕ ಮಸಳಿ, ವಿವೇಕಾನಂದ ಸಾಲಿಮಠ, ಅಶೋಕ ಬೂದಿಹಾಳ, ವಿ.ಡಿ. ವಸ್ತ್ರದ, ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಇದ್ದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಜ್ಯ ಸರಕಾರ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರಶಸ್ತಿ ಪುರಸ್ಕೃತರಾದ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಹಾಗೂ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ.ಎಂ. ಶಿವಕುಮಾರಸ್ವಾಮಿ ಅವರಿಗೆ ಶ್ರೀಮಠ, ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಕೆರೂರು ಚರಂತಿಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ರಚಿಸಿದ ವೀರಶೈವ ಪರಂಪರೆ ಗ್ರಂಥವನ್ನು ಹರಗುರು ಚರಮೂರ್ತಿಗಳ ಹಾಗೂ ಶಾಸಕ ಅಶೋಕ ಮನಗೂಳಿ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು. ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿಯು ರೂ.1ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಈ ಪ್ರಶಸ್ತಿಯನ್ನು ಲಿಂ.ಎನ್. ಚೆನ್ನಯ್ಯಸ್ವಾಮಿ ಮತ್ತು ಲಿಂ.ಶಾರದಾದೇವಿ ಜನಕಲ್ಯಾಣ ಫೌಂಡೇಶನ್ ದಾನಿಗಳಾಗಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಪಡಶೆಟ್ಟಿ. ಗದಗದ ವಿರೇಶ್ವರ ಪುಣ್ಯಾಶ್ರಮದ ಹುಚ್ಚಯ್ಯ ಹವಾಯಿಗಳು ಹಿರೇಮಠ, ತಬಲಾ ವಾದಕ ಸಿದ್ಧರಾಮ ಬ್ಯಾಕೋಡ ಸೇರಿದಂತೆ ಶ್ರೀಮಠದ ಭಕ್ತರು, ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಪೂಜಾ ಹಿರೇಮಠ ಪ್ರಾರ್ಥಿಸಿದರು. ಡಾ.ಶರಣಬಸವ ಜೋಗುರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರವಿ ಗೋಲಾ ನಿರೂಪಿಸಿ ವಂದಿಸಿದರು.