ಕಾಂಗ್ರೆಸ್‌ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿ ನಿಲ್ಲಲ್ಲ: ಡಾ.ಜಿ.ಪರಮೇಶ್ವರ್‌

KannadaprabhaNewsNetwork | Published : Mar 14, 2024 2:04 AM

ಸಾರಾಂಶ

ಸಂಸತ್‌ ಚುನಾವಣೆ ಮುಗಿದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಸುದ್ದಿ ಸುಳ್ಳು. ಯಾರು ಏನೇ ಹೇಳಿದರೂ ಕೇಳಬೇಡಿ. ಯಾವುದೇ ಕಾರಣಕ್ಕೂ ನಾವು ಅಧಿಕಾರದಲ್ಲಿರುವವರೆಗೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಹಿಳೆಯರ ಸಬಲೀಕರಣ ವಿಚಾರದಲ್ಲಿ ಭಾರತ ವಿಶ್ವಕ್ಕೆ ಮಾದರಿ. ಮಹಿಳೆಯರಿಗೆ ಶೇ.33 ಮೀಸಲು ರಾಜ್ಯಸಭೆಯಲ್ಲಿ ಬಿಲ್‌ ಪಾಸಾಗಿದ್ದು, ಇಚ್ಛಾಶಕ್ತಿ ಇದ್ದರೆ ಬಿಜೆಪಿ ಮೀಸಲು ಕೊಡಬೇಕಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಬಿಲ್‌ ಪಾಸ್‌ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಬುಧವಾರ ಪಟ್ಟಣದ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಪಂ, ಮಧುಗಿರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಕಾಂಗ್ರೆಸ್‌ ಘಟಕ ಹಾಗೂ ಸ್ತ್ರೀಶಕ್ತಿ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿಗಳ ನಿಲುಗಡೆ ಎಂಬ ಹೇಳಿಕೆ ಸುಳ್ಳು: ಸಂಸತ್‌ ಚುನಾವಣೆ ಮುಗಿದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಸುದ್ದಿ ಸುಳ್ಳು. ಯಾರು ಏನೇ ಹೇಳಿದರೂ ಕೇಳಬೇಡಿ. ಯಾವುದೇ ಕಾರಣಕ್ಕೂ ನಾವು ಅಧಿಕಾರದಲ್ಲಿರುವವರೆಗೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿರುವ ಈ ಯೋಜನೆಗಳು ನಿಲ್ಲುವುದಿಲ್ಲ. ಈಗಾಗಲೇ ನಮ್ಮ ತಾಯಂದಿರಿಗೆ 36 ಸಾವಿರ ಕೋಟಿ ರು. ನೀಡಿದ್ದು, ಮುಂದಿನ ವರ್ಷಕ್ಕೆ 58 ಸಾವಿರ ಕೋಟಿ ರು. ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಂದ ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಸ್ವಾಲಂಭಿ ಜೀವನ ನಡೆಸಲು ಗ್ಯಾರಂಟಿ ಯೋಜನೆಗಳು ದಾರಿದೀಪ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.ಕಾಂಗ್ರೆಸ್‌ ಪಕ್ಷ ಸ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಶೀಘ್ರದಲ್ಲೇ ಲೋಕಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡರ ಗೆಲುವಿಗೆ ಮತ ನೀಡಿವಂತೆ ಪರಮೇಶ್ವರ್‌ ಮನವಿ ಮಾಡಿದರು. ಸಚಿವ ಕೆ.ಎನ್‌. ರಾಜಣ್ಣ ಮಾತನಾಡಿ, 5 ಗ್ಯಾರಂಟಿ ಯೋಜನೆಗಳು ಶೇ.90ರಷ್ಟು ಜನರಿಗೆ ತಲುಪಿವೆ. ರಾಜ್ಯದಲ್ಲಿ ಯಾರು ಹಸಿವಿನಿಂದ ಬಳಲ ಬಾರದು ಎಂಬ ಉದ್ದೇಶದಿಂದ ಜಾರೊಉಆದ ಅನ್ನಭಾಗ್ಯ ಯೋಜನೆ ಹಾಗೂ ಸೇರಿ ಐದು ಗ್ಯಾರಂಟಿಗಳು ಬಡವರ ಪಾಲಿಗೆ ವರದಾನ. 68 ಕೋಟಿ 65 ಲಕ್ಷ 86 ಸಾವಿರ ರು. ನಮ್ಮ ತಾಲೂಕಿನ ಗೃಹಲಕ್ಷೀ ಯೋಜನೆ ಹಣ ಬಂದಿದೆ. ತಾಂತ್ರಿಕ ದೋಷದಿಂದ ಬಾರದಿರುವ ಫಲಾನುಭವಿಗಳ ಪಟ್ಟಿ ಮಾಡಿ ಅವರಿಗೂ ತಲುಪಿಸುವ ಕೆಲಸ ಮಾಡುತ್ತೇವೆ. ಆಧಾರ್‌ ಕಾರ್ಡ್‌ ತೋರಿಸಿದರೆ ಸಾಕು ಬಸ್‌ ಪ್ರೀ, ಬರಗಾಲವಿದ್ದರೂ ಸಹ ನಾವು ನಿಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತೇವೆ. ನಿಮಗೆ ಅನ್ಯಾಯವಾದರೆ ರಕ್ಷಣೆ ಕೊಡುತ್ತೇವೆ. ಉಪಕಾರ ಸ್ಮರಣೆ ಇರಲಿ ನಮ್ಮ ಪಕ್ಷದ ಅಭ್ಯರ್ಥಿ ಮುದ್ದ ಹನುಮೇಗೌಡರಿಗೆ ಮತ ನೀಡಿ ಗೆಲ್ಲಿಸಿ ಎಂದರು. ತುಮಕೂರು ಲೋಕಸಭಾ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಮಾತನಾಡಿ, ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿ ಬರಬೇಕು. 5 ಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿ ತುಂಬುವ ಯೋಜನೆಗಳು ಇವುಗಳ ಸದುಪಯೋಗ ಪಡಿಸಿ ಕೊಂಡು ಮುಂದೆ ಬನ್ನಿ. ಬರುವ ಚುನಾವಣೆಯಲ್ಲಿ ನನಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ, ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ರಶ್ಮಿ, ಪಾವಗಡ ಶಾಸಕ ವೆಂಕಟೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮಾಜಿ ಶಾಸಕ ಗಂಗಹನುಮಯ್ಯ, ಎಸ್‌ಪಿ ಅಶೋಕ್‌, ತಾಲೂಕು ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಚಂದ್ರಮ್ಮ, ಜಿ.ಜ.ರಾಜಣ್ಣ, ಸುವರ್ಣಮ್ಮ, ಇದಿರಮ್ಮ ಇತರರಿದ್ದರು.

Share this article