ಕತ್ತಲೆ ಎಂಬ ಅಜ್ಞಾನ ತೆಗೆದು ಹಾಕುವವ ಗುರು: ಕಾಖಂಡಿಕಿ

KannadaprabhaNewsNetwork |  
Published : Jul 07, 2025, 11:48 PM IST
7ಡಿಡಬ್ಲೂಡಿ1ಬೇಂದ್ರೆ ಭವನದಲ್ಲಿ ಸ್ವರ ಲಯಾರಾಧನೆ ಸಂಗೀತ ಸಂಸ್ಥೆಯ ಸಮಧ್ವ ಸಂಗೀತ ವಿದ್ಯಾಲಯವು ಏರ್ಪಡಿಸಿದ್ದ ಗುರುಪೂರ್ಣಿಮಾ ಪ್ರಯುಕ್ತ ಸಂಗೀತೋತ್ಸವವನ್ನು ಹ.ವೆಂ. ಕಾಖಂಡಕಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ದ.ರಾ.ಬೇಂದ್ರೆಯವರು ತಮಗೆ ಬರೆದ ಪತ್ರದಲ್ಲಿ “ಉತ್ತಮ ಸಂಗತಿಯಲ್ಲಿ, ಉತ್ತಮ ಅಭ್ಯಾಸ ಮಾಡಿ, ಉತ್ತಮ ನಡತೆಯವನಾಗಬೇಕು, ಮನೆಗೂ, ದೇಶಕ್ಕೂ ಇದೇ ಭೂಷಣ” ಎಂಬ ಗುರುವಾಣಿಯನ್ನು ಇಂದಿಗೂ ಪ್ರತಿನಿತ್ಯವೂ ಸ್ಮರಿಸುತ್ತೇನೆ.

ಧಾರವಾಡ: ‘ಗುರು’ಪದದಲ್ಲಿ ಗು ಎಂದರೆ ಅಜ್ಞಾನ, ಕತ್ತಲೆ. ರು ಎಂದರೆ ಅಜ್ಞಾನವನ್ನು ತೆಗೆದು ಹಾಕುವವ. ಕತ್ತಲೆ ಎಂಬ ಅಜ್ಞಾನ ತೆಗೆದು ಹಾಕುವವ ಗುರು ಎಂದರ್ಥ. ವ್ಯಾಸ ಮಹರ್ಷಿಗಳು ಹುಟ್ಟಿದ ದಿನವನ್ನು ವ್ಯಾಸಪೂರ್ಣಿಮೆ, ಗುರು ಪೂರ್ಣಿಮೆ ಎಂದು ಕರೆಯುತ್ತೇವೆ ಎಂದು ಹಿರಿಯ ಸಾಹಿತಿ ಡಾ. ಹ.ವೆಂ. ಕಾಖಂಡಿಕಿ ಹೇಳಿದರು.

ಇಲ್ಲಿಯ ಬೇಂದ್ರೆ ಭವನದಲ್ಲಿ ಸ್ವರ ಲಯಾರಾಧನೆ ಸಂಗೀತ ಸಂಸ್ಥೆಯ ಸಮಧ್ವ ಸಂಗೀತ ವಿದ್ಯಾಲಯವು ಏರ್ಪಡಿಸಿದ್ದ ಗುರುಪೂರ್ಣಿಮಾ ಪ್ರಯುಕ್ತ ಸಂಗೀತೋತ್ಸವ ಉದ್ಘಾಟಿಸಿದ ಅವರು, ಪೂರ್ವಿ ಕಲಾವಿದರು ಯಾವುದೇ ಹಣದ ಫಲಾಪೇಕ್ಷೆ ಇಲ್ಲದೇ ಸಂಗೀತವನ್ನು ನಾಲ್ಕು ಜನರಲ್ಲಿ ಬಿತ್ತಬೇಕು, ಲಯಬದ್ಧ ಸ್ವರದ ಸಂಗೀತವನ್ನು ನಾಲ್ಕು ಜನ ಕೇಳಿಸಬೇಕು ಎಂಬ ಸಾಮಾಜಿಕ ಕಳಕಳಿ ಹೊಂದಿರುತ್ತಿದ್ದರು. ದ.ರಾ.ಬೇಂದ್ರೆಯವರು ತಮಗೆ ಬರೆದ ಪತ್ರದಲ್ಲಿ “ಉತ್ತಮ ಸಂಗತಿಯಲ್ಲಿ, ಉತ್ತಮ ಅಭ್ಯಾಸ ಮಾಡಿ, ಉತ್ತಮ ನಡತೆಯವನಾಗಬೇಕು, ಮನೆಗೂ, ದೇಶಕ್ಕೂ ಇದೇ ಭೂಷಣ” ಎಂಬ ಗುರುವಾಣಿಯನ್ನು ಇಂದಿಗೂ ಪ್ರತಿನಿತ್ಯವೂ ಸ್ಮರಿಸುತ್ತೇನೆ ಎಂದು ಹೇಳಿದರು.

ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಸೌಭಾಗ್ಯ ಕುಲಕರ್ಣಿ, ಸಂಗೀತಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಮುಖ್ಯವಾಗಿ ಮನುಷ್ಯನಿಗೆ ದೈಹಿಕ, ಮಾನಸಿಕ ಒತ್ತಡದ ನಿವಾರಣೆಗಾಗಿ ಸಂಗೀತ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತಿದೆ. ಸಂಗೀತವು ಒಂದು ಯೋಗ ಮತ್ತು ಆಧ್ಯಾತ್ಮ ಸಾಧನೆಯ ಮಾರ್ಗವಾಗಿದೆ ಎಂದರು.

ಖ್ಯಾತ ಹಿಂದೂಸ್ತಾನಿ ಕಲಾವಿದ ಪಂ. ಕೃಷ್ಣೇಂದ್ರ ವಾಡೇಕರ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ, ಪವನ ಥಿಟೆ ಮಾತನಾಡಿದರು. ಗುರುಪೂರ್ಣಿಮೆ ನಿಮಿತ್ತ ಜಯತೀರ್ಥ ಪಂಚಮುಖಿ ಮತ್ತು ವೈಷ್ಣವಿ ಅವರಿಗೆ ಹಾಗೂ ಡಾ. ಹ.ವೆಂ. ಕಾಖಂಡಕಿ, ಡಾ. ಸೌಭಾಗ್ಯ ಕುಲಕರ್ಣಿ ಮತ್ತು ಪ್ರಕಾಶ ಬಾಳಿಕಾಯಿ ಅವರಿಗೆ ಸನ್ಮಾನಿಸಲಾಯಿತು.

ಪಂ. ಕೃಷ್ಣೇಂದ್ರ ವಾಡೇಕರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ತಬಲಾದಲ್ಲಿ ಜಯತೀರ್ಥ ಪಂಚಮುಖಿ, ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ, ತಾಳದಲ್ಲಿ ಸುಧೀಂದ್ರ ಆಚಾರ, ಸಾಥ್ ನೀಡಿದರು. ಸುಮನ್ಯು ಪಂಚಮುಖಿ ತಬಲಾ ಸೋಲೋ, ಸುಮಧ್ವ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತ ಪಡಿಸಿದರು. ಜಯತೀರ್ಥ ಪಂಚಮುಖಿ ಶಿಷ್ಯರು ತಬಲಾ ವಾದನ ಪ್ರಸ್ತುತ ಪಡಿಸಿದರು. ಶ್ರೇಯಶ್ರೀ ಬಳ್ಳಾರಿ ಮತ್ತು ವಂದನಾ ಥಿಟೆ ನಿರೂಪಿಸಿದರು. ವೈಷ್ಣವಿ ಪಂಚಮುಖಿ ವಂದಿಸಿದರು.

PREV