ಗುತ್ತಲ: ಜಾತಿ ಭೇದ ಮರೆತು ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಅಂಬಿಗರ ಚೌಡಯ್ಯನವರ ಮಠದಲ್ಲಿ ಅರ್ಧಕ್ಕೆ ನಿಂತ ಎಲ್ಲ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ನರಸಿಪುರ ಗ್ರಾಮದ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಡೆಯುತ್ತಿರುವ ಅಂಬಿಗರ ಚೌಡಯ್ಯನವರ 7ನೇ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾ ರಥೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಠದಲ್ಲಿ ಅರ್ಧಕ್ಕೆ ನಿಂತ ಅಭಿವೃದ್ಧಿ ಕಾರ್ಯಗಳನ್ನು ಶೀರ್ಘದಲ್ಲಿ ಪೂರ್ಣಗೊಳಿಸಲಾಗುವುದು. ಗಂಗಾಮತ ಸಮಾಜ ಹಿಂದುಳಿದಿದೆ. ಎಲ್ಲ ಸಮಾಜಕ್ಕೂ ನ್ಯಾಯ ಸಿಗುವಂತಹ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಮಠದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯ ಆಗಬೇಕಿದೆ. ಜಾತಿ ಭೇದ ಮರೆತು ಎಲ್ಲರೂ ಒಂದಾಗಬೇಕು. ಅಂದಾಗ ಮಾತ್ರ ಮಠಗಳು ಉದ್ಧಾರ ಆಗುವುದರಲ್ಲಿ ಸಂದೇಹವಿಲ್ಲ. ಅಂಬಿಗರ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಹೇಳಿದರು.
ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಧರ್ಮ ಉಳಿದರೆ ಸಮಾಜ ಉಳಿಯುತ್ತದೆ ಎಂದು ಅವರು ಹೇಳಿದರು.ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಗಂಗಾಮತ ಸಮಾಜಕ್ಕೆ ಉತ್ತಮ ಗುರು ಸಿಕ್ಕಿದ್ದಾರೆ. ಈ ಗುರುವಿನಿಂದ ಮಠ ಮತ್ತು ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ ಮಧ್ವರಾಜ ಮಾತನಾಡಿ, ಮಠಕ್ಕೆ ಬರುವ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ಶಾಸಕರು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಮಠ ಮತ್ತು ಸಮಾಜವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.ಧರ್ಮ ಧ್ವಜಾರೋಹಣವನ್ನು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ನೆರವೇರಿಸಿದರು. ನಿಜಶರಣ ಅಂಬಿಗರ ಚೌಡಯ್ಯ, ಗಂಗಾಮಾತೆ, ಶಾಂತಮುನಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಗ್ರಂಥ ಬಿಡುಗಡೆ ಮಾಡಲಾಯಿತು. ವಚನಾಮೃತ, ಅಂಬಿಗರ ಚೌಡಯ್ಯನ ದರ್ಶನ, ಅಂಬಿಗರ ಚೌಡಯ್ಯನ ವಚನಗಳ ಪುಸ್ತಕ ಬಿಡುಗಡೆ ಮಾಡಲಾಯಿತು.
ವೀರಗಣಾಚಾರಿ ನಿಜಶರಣ ಅಂಬಿಗರ ಚೌಡಯ್ಯ ಪ್ರಶಸ್ತಿಯನ್ನು ಡಾ. ಬಸವರಾಜ ಸಿದ್ದರಾಮ ಅವರಿಗೆ ನೀಡಲಾಯಿತು. ರಾಜ್ಯ ವಚನ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಣಿಕಂಠ ಅವರಿಗೆ ಬಹುಮಾನ ನೀಡಲಾಯಿತು.ಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಹರ್ಷಿ ಭಗೀರಥ ಪೀಠದ ಡಾ. ಪುರುಷೋತ್ತಮನಂದಪುರಿ, ಹಡಪದ ಅಣ್ಣಪ್ಪ ಗುರುಪೀಠದ ಅನ್ನದಾನಿ ಬಸವಪ್ರೀಯ ಅಪ್ಪಣ್ಣ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಕುಷ್ಟಗಿ ಹನುಮಂತ ಸಂತ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಬಸವರಾಜ ಸಪ್ಪನಗೋಳ, ಮಾರುತಿ ಕಬ್ಬೇರ, ಎಂ.ಎಂ. ಮೈದೂರ, ಅಶೋಕ ವಾಲಿಕಾರ, ಮಂಜಪ್ಪ ಅಬ್ಬಿಗೇರಿ ಇದ್ದರು.