ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆ,
ಶೋಷಿತರು ಮುಂಚೂಣಿಗೆ ಧಾವಿಸುವ ಹಾಗೂ ಅಧಿಕಾರ ಪಡೆಯಲಿಚ್ಚಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಬಿಂಬಿಸುವ ಪಕ್ಷದ ಕೈಬಲಪಡಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳ ಕೊಡುಗೆ ಶೂನ್ಯ. ನೆಹರು ಕಾಲಘಟ್ಟದಿಂದ ಮೋದಿ ಕಾಲದವರೆಗೂ ಶೋಷಿತರಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಿಲ್ಲ. ಒಂದೆಡೆ ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಭಿತ್ತಿದರೆ, ಇನ್ನೊಂದೆಡೆ ಕಾಂಗ್ರೆಸ್ ದಲಿತರ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ದೂರಿದರು.ನೂರಾರು ವರ್ಷಗಳಿಂದ ವಾಸಿಸುವ ಬಹುಜನರಿಗೆ ಇಂದಿಗೂ ಸ್ವಂತ ನಿವೇಶನ, ಭೂಮಿಗಳಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ ಹಾಗೂ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸದಿರುವ ಕಾರಣ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮಿಗಳಿಗೆ ಪರೋಕ್ಷವಾಗಿ ಸಾಲ ಮನ್ನಾ ಮಾಡುವ ಕೇಂದ್ರ ರೈತರಿಗೆ ಬೆಳೆ ಪರಿಹಾರ ನೀಡದೇ ದೂಷಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ವಲಯದ ಸಂಸ್ಥೆ ಖಾಸಗೀಕರಣವಾಗಿ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುವಕರಿಗೆ ಹೊಸದಾಗಿ ಉದ್ಯೋಗ ಕಲ್ಪಿಸುವುದಾಗಿ ಪ್ರಧಾನಮಂತ್ರಿಯವರು ಪೊಳ್ಳು ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಕೇಂದ್ರದ ನಡೆ ರೈತರಿಗೆ ಸುಣ್ಣವಾದರೆ, ಉದ್ಯಮಿಗಳಿಗೆ ಬೆಣ್ಣೆ ಎಂದು ಆರೋಪಿಸಿದರು.
ಇದೀಗ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹಿಂದೆ ಕೈಗೊಂಡ ಮೂರು ಪಕ್ಷದ ಸಾಧನೆಗಳನ್ನು ಚರ್ಚಿಸದೇ, ಪರಸ್ಪರ ಕೆಸರೆಚಾಟದಲ್ಲಿ ತೊಡಗಿವೆ. ಸಿದ್ದರಾಮಯ್ಯ ಅವರದು ಮುಡಾ ಪ್ರಕರಣವಾದರೆ, ಬಿಜೆಪಿ ಶೇ.40 ಕಮೀಷನ್ ಆರೋಪ ಮುಂದಿಟ್ಟು ಮತ ಸೆಳೆಯುವ ಪ್ರಯತ್ನದಲ್ಲಿ ನಿರಂತರ ತೊಡಗಿರುವುದು ಮತದಾರರ ಹಲವಾರು ಪ್ರಶ್ನೆಗಳು ಕಾಡುತ್ತಿದೆ ಎಂದು ಹೇಳಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ತಾಲೂಕು ಅಧ್ಯಕ್ಷ ಎಚ್.ಕುಮಾರ್, ಮುಖಂಡರಾದ ಪರಮೇಶ್, ಜಾಕೀರ್ ಆಲಿಖಾನ್, ವೇಲಾಯುಧನ್, ಮಂಜಯ್ಯ, ಶಂಕರ್, ಪಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು.