ಪಿ.ಎಸ್. ಪಾಟೀಲ
ತಾಲೂಕಿನ ಅಮರಗೋಳ ನವಗ್ರಾಮದಲ್ಲಿ ಮನೆಗಳು ನಿರ್ಮಾಣಗೊಂಡು 12 ವರ್ಷವಾಗಿಲ್ಲ. ಸ್ವಲ್ಪ ಮಳೆಯಾದರೂ ಸಾಕು ಸೋರುತ್ತಿವೆ. ಮನೆಗಳ ಕಿಟಕಿ, ಕದ ಕಿತ್ತುಹೋಗಿವೆ.
ಮಳೆಗಾಲದಲ್ಲಿ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ. ರೋಗ ರುಜಿನಗಳು ಬಂದಲ್ಲಿ ಚಿಕಿತ್ಸೆಗೆ ಆಸ್ಪತ್ರೆ ಇಲ್ಲಿಲ್ಲ. ಜಾನುವಾರುಗಳ ಆಸ್ಪತ್ರೆಯಿಲ್ಲ. ಉದ್ಯಾನವನವಿಲ್ಲ, ದೇವಸ್ಥಾನವಿಲ್ಲ, ಇದೆಲ್ಲದಕ್ಕೂ ಸಾಕಷ್ಟು ಜಾಗೆ ಕಾಯ್ದಿರಿಸಿದ್ದು, ಆ ಜಾಗೆಯಲ್ಲಿ ಜಾಲಿಕಂಟೆ ಬೆಳೆದಿವೆ.ಮಲಪ್ರಭಾ ನದಿ ಪ್ರವಾಹಕ್ಕೆ ಪದೇ ಪದೇ ತುತ್ತಾಗುತ್ತಿದ್ದ ಅಮರಗೋಳವನ್ನು 2010ರಲ್ಲಿ ಮೂಲ ಗ್ರಾಮದಿಂದ 7 ಕಿಮೀ ದೂರದಲ್ಲಿ ರೋಣ ರಸ್ತೆಯಲ್ಲಿನ ಜಗನ್ನಾಥ ನಗರ ನವಗ್ರಾಮಕ್ಕೆ ಹೊಂದಿಕೊಂಡೇ ರೈತರಿಂದ 46 ಎಕರೆ ಪ್ರದೇಶವನ್ನು ಭೂಸ್ವಾಧೀನ ಕಾಯ್ದೆಯಡಿ ವಶಪಡಿಸಿಕೊಂಡಿತು. ಈ ಪ್ರದೇಶದಲ್ಲಿ ಗದಗ ನಿರ್ಮಿತಿ ಕೇಂದ್ರದವರು 415 ಮನೆಗಳನ್ನು ನಿರ್ಮಿಸಿ 2012ರಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಿದರು.
ಆದರೆ 2019ರ ಸೆಪ್ಟಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭರ್ತಿಯಾದ ರೇಣುಕಾ ಜಲಾಶಯದಿಂದ 15 ಸಾವಿರಕ್ಕೂ ಹಚ್ಚು ಕ್ಯುಸೆಕ್ ನೀರು ಹರಿ ಬಿಡಲಾಯಿತು. ಜೊತೆಗೆ ಬೆಣ್ಣಿಹಳ್ಳದ ಅಪಾರ ಪ್ರಮಾಣದ ನೀರಿನಿಂದ ಮಲಪ್ರಭೆ ಉಕ್ಕಿದ ಪರಿಣಾಮ ಅಮರಗೋಳ ಗ್ರಾಮ ಮತ್ತೆ (2019) ಜಲಾವೃತಗೊಂಡು, ಆಗ ಮೂಲ ಗ್ರಾಮದ ಜನತೆ ಮತ್ತೆ ಅನೇಕ ತೊಂದರೆ ಎದುರಿಸುವಂತಾಯಿತು. ಜಿಲ್ಲಾಡಳಿತಕ್ಕೆ ಮತ್ತಷ್ಟು ತೆಲೆನೋವಾಯಿತು. ಆಗ ಜಿಲ್ಲಾ ಆಡಳಿತ ಜನರನ್ನು ಮೂಲ ಗ್ರಾಮದಿಂದ ನವಗ್ರಾಮಕ್ಕೆ ಸ್ಥಳಾಂತರಿಸಿತು.
ತಾಲೂಕಿನ ಒಟ್ಟು 11 ಗ್ರಾಮಗಳ ಪೈಕಿ ಶೆ. 85ರಷ್ಟು ಅಮರಗೋಳ ಮೂಲ ಗ್ರಾಮ ತೊರೆದು ನವಗ್ರಾಮದ ಆಸರೆ ಸೂರಿನಲ್ಲಿ ವಾಸವಾಗಿದ್ದಾರೆ. ನವಗ್ರಾಮದಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅಮರಗೋಳ, ಕುರವಿನಕೊಪ್ಪ ಮತ್ತು ಹೊಳೆಆಲೂರ (ಜಗನ್ನಾಥ ನಗರ) ನವಗ್ರಾಮಗಳಿಗೆ ಪೂರೈಕೆಯಾಗುವ ನೀರು ಜಲ ಸಂಗ್ರಹಗಾರ ಒಂದೇ ಇರುವದರಿಂದ ಕೆಲವೊಮ್ಮೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬಹುಗ್ರಾಮ ಕುಡಿವ ನೀರು ಯೋಜನೆ ಮೂಲಕವೇ ಇಲ್ಲಿನ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಎತ್ತರದ ಪ್ರದೇಶದಲ್ಲಿರುವ ಕೆಲ ಮನೆಗಳಿಗೆ ಆಗಾಗ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸದ್ಯ ಬೇಸಿಗೆ ಆರಂಭಗೊಂಡಿದ್ದು , ಸ್ಥಳೀಯ ಗ್ರಾಪಂ ಮುಂಜಾಗ್ರತ ಕ್ರಮ ಕೈಗೊಂಡು ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು.
ವಿತರಣೆಯಾದ 267 ಹಕ್ಕುಪತ್ರಗಳ ಪೈಕಿ ಈವರೆಗೆ ಕೇವಲ 50 ಮನೆಗಳ ಹಕ್ಕುಪತ್ರ ಗ್ರಾ.ಪಂ.ದಲ್ಲಿ ನೋಂದಣಿ ಮಾಡಿಸಲಾಗಿದ್ದು , ಹಕ್ಕುಪತ್ರ ನೋಂದಣಿಗೆ ಸಾವಿರ ರುಪಾಯಿಗೆ ಹೆಚ್ಚು ಖರ್ಚಾಗುತ್ತಿದ್ದು, ಹೀಗಾಗಿ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದಾರೆ. ಆದರೆ ವಾಸ್ತವ ಸಂಗತಿಯೇ ಬೇರೆಯಿದ್ದು, ನವಗ್ರಾಮದಲ್ಲಿ ಮನೆಗಳ ಹಕ್ಕುಪತ್ರ ಗ್ರಾಪಂನಲ್ಲಿ ನೋಂದಣಿ ಮಾಡಿಸಿಕೊಂಡಲ್ಲಿ, ಮೂಲ ಗ್ರಾಮದಲ್ಲಿನ ಮನೆ ಹಕ್ಕನ್ನು, ಸೌಲಭ್ಯವನ್ನು ಸಂಪೂರ್ಣ ಕಳದೆಕೊಳ್ಳಬಹುದಾದ ಆತಂಕದಿಂದ ಬಹುತೇಕರು ಹಕ್ಕುಪತ್ರ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿಲ್ಲ.
ಇಲ್ಲಿನ ಯಾವುದೇ ರಸ್ತೆಗೂ ಗಟಾರ ನಿರ್ಮಿಸಿಲ್ಲ. ಗಟಾರ ಇಲ್ಲದ್ದರಿಂದ ಗಲೀಜು ನೀರು ನಿಂತಲ್ಲೆ ನಿಲ್ಲುತ್ತದೆ. ಸೊಳ್ಳೆ ಕಾಟ ವಿಪರೀತವಾಗಿದೆ. ಜನ ಮತ್ತು ಜಾನುವಾರುಗಳಿಗೆ ಆಸ್ಪತ್ರೆ ನಿರ್ಮಿಸಬೇಕು ಎನ್ನುತ್ತಾರೆ ಅಮರಗೋಳ ನವಗ್ರಾಮ ನಿವಾಸಿ ಹನಮಂತಗೌಡ ಪಾಟೀಲ, ಶಾಂತವ್ವ ಮುನವಳ್ಳಿ ಹೇಳಿದರು.