ಬೆಂಗಳೂರು: ಶಿಗ್ಗಾಂವಿ ತಾಲ್ಲೂಕಿನ ಕಾರಡಗಿ ಗ್ರಾಮದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಎದುರಿಗಿನ ಸಾರ್ವಜನಿಕ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಇರುವ ಭಗವಾ ಧ್ವಜವನ್ನು ಕೆಳಗಿಳಿಸಿ ಗ್ರಾಮದಲ್ಲಿ ಕೋಮು ಸೌಹಾರ್ದ ಕದಡಲು ಪಿತೂರಿ ನಡೆಸಿದ ಆರೋಪ ಮೇಲೆ ಹುಲಗೂರಿನ ಮಾಜಿ ಶಾಸಕ ಸೈಯ್ಯದ್ ಅಜ್ಜಂಪೀರ್ ಖಾದ್ರಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಈ ಆದೇಶ ಮಾಡಿ ವಿಚಾರಣೆ ಮುಂದೂಡಿತು.ಇದಕ್ಕೂ ಮುನ್ನ ಎಫ್‌ಐಆರ್ ಪ್ರತಿಯನ್ನು ವಿಸ್ತೃತವಾಗಿ ಓದಿದ ನ್ಯಾಯಮೂರ್ತಿಗಳು, ಎಫ್‌ಐಆರ್‌ನಲ್ಲಿ ತಿಳಿಸಿರುವಂತೆ ಆರೋಪಿಗಳು ಬಳಸಿರುವ ಅದರಲ್ಲೂ ಮಾಜಿ ಶಾಸಕರ ಭಾಷೆ ಸೌಜನ್ಯಯುತವಾಗಿಲ್ಲ. ಅವರಲ್ಲಿ ಗೂಂಡಾ ಪ್ರವೃತ್ತಿ ಇದ್ದಂತೆ ಕಾಣುತ್ತಿದೆ. ಇಂತಹವರಿಗೆ ಕರುಣೆ ತೋರಿಸಬಾರದು. ಸಮಾಜದಲ್ಲಿ ನಾಳೆ ಏನಾದರೂ ಏರುಪೇರಾದರೆ ಇಂತಹ ಕಿಡಿಗೇಡಿಗಳಿಂದ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಲ್ಲದೆ, ಯಾವುದೇ ಸಮುದಾಯದಲ್ಲಾದರೂ ನಾಲ್ಕೈದು ಪುಂಡರು ಇರುತ್ತಾರೆ. ಅವರು ಕೋಮು ಸೌಹಾರ್ದತೆ ಕದಡುತ್ತಾರೆ. ಅಂತಹವನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದರೆ, ಅವರೇ ಎಲ್ಲರನ್ನೂ ನೆಟ್ಟಗೆ ಮಾಡುತ್ತಾರೆ. ಇಲ್ಲವಾದರೆ ಇಂದು ಭಗವಾ ಧ್ವಜ ಇಳಿಸುತ್ತಾರೆ. ನಾಳೆ ರಾಷ್ಟ್ರಧ್ವಜ ಇಳಿಸಿ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪ್ರಕರಣವೇನು?2024ರ ಮಾ.3ರಂದು ಹುಲಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪರುಶರಾಮ ಕಟ್ಟೀಮನಿ ಅವರಿಗೆ ಬಾತ್ಮಿದಾರರಿಂದ ಆಡಿಯೊ ಸಂದೇಶವೊಂದ ಬಂದಿತ್ತು. ಆ ಸಂಭಾಷಣೆಯಲ್ಲಿ ಕಾರಡಗಿ ಗ್ರಾಮದ ಅಂಜುಮನ್ ಸಮಿತಿ ಅಧ್ಯಕ್ಷ ರಬ್ಬಾನಿ ಬಿನ್ ಅಬ್ದುಲ್ ಮುನಾಫ್ ಹಾಗೂ ಮಾಜಿ ಶಾಸಕ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಉರ್ದುವಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು. ಆ ಕುರಿತು ತನಿಖೆ ಕೈಗೊಂಡಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಖಾದ್ರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.