ವಾಕ್‌, ಶ್ರವಣ ದೋಷಿ ವಕೀಲೆಯ ವಾದಕ್ಕೆ ಸಾಕ್ಷಿಯಾದ ಹೈಕೋರ್ಟ್‌

KannadaprabhaNewsNetwork | Updated : Apr 09 2024, 05:05 AM IST

ಸಾರಾಂಶ

ಕೌಟುಂಬಿಕ ವ್ಯಾಜ್ಯವೊಂದರ ಸಂಬಂಧ ವಾಕ್‌ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರ ವಾದವನ್ನು ದುಭಾಷಿಯ ನೆರವಿನಿಂದ ಆಲಿಸುವ ಮೂಲಕ ರಾಜ್ಯ ಹೈಕೋರ್ಟ್‌ ಇತಿಹಾಸ ಸೃಷ್ಟಿಸಿದೆ.

 ಬೆಂಗಳೂರು :   ಕೌಟುಂಬಿಕ ವ್ಯಾಜ್ಯವೊಂದರ ಸಂಬಂಧ ವಾಕ್‌ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರ ವಾದವನ್ನು ದುಭಾಷಿಯ ನೆರವಿನಿಂದ ಆಲಿಸುವ ಮೂಲಕ ರಾಜ್ಯ ಹೈಕೋರ್ಟ್‌ ಇತಿಹಾಸ ಸೃಷ್ಟಿಸಿದೆ.

ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಸಂಬಂಧ ಪತಿಗೆ ಲುಕೌಟ್‌ (ಎಲ್‌ಒಸಿ) ನೋಟಿಸ್ ಜಾರಿಗೊಳಿಸಲಾಗಿದೆ. ಅದನ್ನು ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಸಾರಾ ಸನ್ನಿ ಅವರು ಅರ್ಜಿದಾರ ಪತ್ನಿಯ ಪರವಾಗಿ ವಾದಿಸಿದರು.

ಸಾರಾ ಅವರು ಅರ್ಜಿದಾರನ ಪತ್ನಿ ಪರವಾಗಿ ಸಂಜ್ಞೆಗಳ ಮೂಲಕ ದುಭಾಷಿಯ ನೆರವಿನಿಂದ ವಿಸ್ತೃತವಾಗಿ ವಾದಿಸಿರುವುದಕ್ಕೆ ನ್ಯಾಯಾಲಯ ಮೆಚ್ಚುಗೆ ಸೂಚಿಸುತ್ತಿದೆ ಎಂದು ನ್ಯಾಯಪೀಠ ಇದೇ ವೇಳೆ ಹೇಳಿತು. ಮತ್ತೊಂದಡೆ ಅರ್ಜಿದಾರ ಪತಿಯ ವಿರುದ್ಧದ ಹೊರಡಿಸಿದ್ದ ಲುಕ್‌ ಔಟ್‌ ಸುತ್ತೋಲೆ ಹಿಂಪಡೆದಿರುವ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ. ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಅರ್ಜಿದಾರನ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಏ.19ಕ್ಕೆ ಮುಂದೂಡಿತು.

ವಿಚಾರಣೆಯ ಕೊನೆಯ ಹಂತದಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್ ಕಾಮತ್‌ ಅವರು, ವಾಕ್‌ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ವಾದ ಆಲಿಸುವ ಮೂಲಕ ಕರ್ನಾಟಕ ಹೈಕೋರ್ಟ್‌ ಇತಿಹಾಸ ಸೃಷ್ಟಿಸಿದೆ. ಇಂತಹ ವಕೀಲೆಯ ವಾದ ಆಲಿಸಿದ ದೇಶದ ಮೊದಲ ಹೈಕೋರ್ಟ್‌ ಎಂಬ ಹಿರಿಮೆಗೆ ಪಾತ್ರವಾಗಿದೆ. ಸಾರಾ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ವಾದಿಸಿದ್ದರು. ಆದರೆ, ಹೈಕೋರ್ಟ್‌ವೊಂದರಲ್ಲಿ ಇದೇ ಮೊದಲ ಬಾರಿಗೆ ವಾದಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರಕರಣದ ಹಿನ್ನೆಲೆ:ಮುಂಬೈನ ಥಾಣೆ ಜಿಲ್ಲೆಯ ಪತಿ 2004ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಟ್ಲೆಂಡ್‌ಗೆ ತೆರಳಿ ಸದ್ಯ ಅಲ್ಲಿಯೇ ಬ್ಯಾಂಕ್ ಅಧಿಕಾರಿಯಾಗಿದ್ದು ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಅವರಿಗೆ ಈಗ 41 ವರ್ಷ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅವರು, ಆನ್‌ಲೈನ್‌ ತಾಣದ ಮೂಲಕ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ 21ರಂದು ಎರಡನೇ ವಿವಾಹವಾಗಿದ್ದರು.ಎರಡನೇ ಪತ್ನಿಯು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ,ಜೀವ ಬೆದರಿಕೆ ಹಾಕಿದ, ಉದ್ದೇಶಪೂರ್ವಕವಾಗಿ ಅವಮಾನಿಸಿದ ಹಾಗೂ ವರದಕ್ಷಿಣೆ ಕಿರುಕುಳ ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ದೂರು ನೀಡಿದ್ದರು. ಅದನ್ನು ಆಧರಿಸಿ ದೂರುದಾರೆಯ ಪತಿ, ಅವರ ತಂದೆ-ತಾಯಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಪತಿಯ ವಿರುದ್ಧ ಲುಕ್ ಔಟ್ ನೋಟಿಸ್ ಸಹ ಜಾರಿಗೊಳಿಸಲಾಗಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

 ಪ್ರಕರಣದಲ್ಲಿ ಅರ್ಜಿದಾರ ಪತಿಯ ಪತ್ನಿ ಪರವಾಗಿ ಸಾರಾ ವಾದ ಮಾಡುತ್ತಿದ್ದಾರೆ.ಈ ಮಧ್ಯೆ, ಎಲ್‌ಒಸಿ ಹಿಂಪಡೆದು ಪತಿಗೆ ಪ್ರವಾಸ ಕೈಗೊಳ್ಳಲು ಮ್ಯಾಜಿಸ್ಟ್ರೇಟ್ ಅನುಮತಿಸಿದ್ದನ್ನು ಪ್ರಶ್ನಿಸಿ ಪತ್ನಿ ಸಹ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ದೇಶ ತೊರೆದ ಪತಿಯನ್ನು ಬಂಧಿಸಬೇಕು. ಲುಕ್‌ಔಟ್‌ ಸುತ್ತೋಲೆ ಹೊರಡಿಸಿದ ವ್ಯಕ್ತಿ ಭಾರತಕ್ಕೆ ಮರಳಿದಾಗ ಅನುಸರಿಸಬೇಕಾದ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಆಕೆ ಕೋರಿದ್ದರು. ಸಾರಾಗೆ ನೆರವಾಗಲು ಮಾಹಿತಿ ಮತ್ತು ತಂತ್ರಜ್ಞಾನದ ಸಚಿವಾಲಯದ ನೆರವಿನಿಂದ ದುಭಾಷಿ ಸಹಾಯ ಪಡೆಯುವಂತೆ ಕಳೆದ ಏ.4ರಂದು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶಿಸಿತ್ತು.

Share this article