ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವ ಆಚರಣೆ
ಎರಡನೇ ದಕ್ಷಿಣ ಕಾಶಿ ಖ್ಯಾತಿಯ ವೇದಾನದಿ ತಟದ ಕಡೂರು ತಾಲೂಕಿನ ಯಗಟಿಪುರದ ಇತಿಹಾಸ ಪ್ರಸಿದ್ಧ ಶ್ರೀ ಕಪಿಲ ಮಲ್ಲಿ ಕಾರ್ಜುನ ಸ್ವಾಮಿ ಲಿಂಗೋದ್ಭವವನ್ನು ಮೊದಲು ಕಂಡ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು, ಭಕ್ತರು ಸೇರಿ 9 ವರ್ಷಕ್ಕೊಮ್ಮೆ ನಡೆಸುವ ‘ಬಾಯಿಬೀಗ ಬಂಡಿ ಜಂಪ ಮಹೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಪಿ. ಕೋಡಿಹಳ್ಳಿಯ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವ ಮಾಡುತ್ತ 9 ವರ್ಷಕ್ಕೊಮ್ಮೆ ಬಾಯಿಬೀಗ ಜಂಪ ಮಹೋತ್ಸವ ಮಾಡುತ್ತಾರೆ. ಪಿ.ಕೋಡಿಹಳ್ಳಿಯಿಂದ ಪುರದವರೆಗೂ ನಡೆಮಡಿಯೊಂದಿಗೆ ಗುರುಕಲಶ, ಹೇರಡಿಗೆ, ಬಾಯಿಬೀಗ, ಮೂರು-ಬಂಡಿಗಳು ಸಾಂಪ್ರಾದಾಯಿಕವಾಗಿ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲಿ ಈ ಮಹೋತ್ಸವಕ್ಕೆ ಬರುತ್ತಾರೆ.
ಜಂಪ ಮಹೋತ್ಸವ: ಪ್ರತಿ 9 ವರ್ಷಕ್ಕೊಮ್ಮೆ ಮೂರು ಬಂಡಿಗಳ ಜೊತೆಗೆ ಗೊಬ್ಬರ ಮೀಸಲು ನೀಡಿ ಜಂಪ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಸ್ವಾಮಿ ಜಂಪಮಹೋತ್ಸವಕ್ಕೆ ಕಡೂರು ತಾಲೂಕಿನ ಸುತ್ತಮುತ್ತಲ ಸೇರಿದಂತೆ ನೆರೆಯ ಗ್ರಾಮಗಳ ಭಾಗದ ಮೂಲ್ವೀಕ ಭಕ್ತರು ಎತ್ತಿನ ಗಾಡಿ ಮತ್ತು ಟ್ರಾಕ್ಟರ್ ಗಳ ಮೂಲಕ ಪುರಕ್ಕೆ ಆಗಮಿಸಿ ಜಂಪದ ಜಮೀನಲ್ಲಿ ಬಿಡಾರ(ಟೆಂಟ್) ಹಾಕಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಹಾಲುಮತದ ಮೂಲ್ವೀಕರ ಮುದ್ರೆಅಯ್ಯನೋರು ಹಾಗೂ ಪೂಜಾರರ ನೇತೃತ್ವದಲ್ಲಿ ಮಘಾ ನಕ್ಷತ್ರದ ಮಹೂರ್ತದಲ್ಲಿ ಮಾ.12ರಂದು ನಡೆಯುವ ಸ್ವಾಮಿ ಬ್ರಹ್ಮ ರಥೋತ್ಸವದಂದು ಪ್ರಥಮ ಪೂಜೆ ಕಾರ್ಯಕ್ರಮನೆರವೇರಿದ ಬಳಿಕ ಬಂಡಿಯಲ್ಲಿ ತಂದ ಮೀಸಲನ್ನು ಸ್ವಾಮಿಗೆ ಸಮರ್ಪಿಸಲಾಗುತ್ತದೆ.
-- ಬಾಕ್ಸ್ ಸುದ್ದಿ--
ದೇವಾಲಯದ ಇತಿಹಾಸ: ವೇದಾನದಿ ದಂಡೆಯಲ್ಲಿ ಅಂದಿನ ಅರತೋಳಲು(ಈಗೀನ ಪುರ) ಎಂಬ ಗ್ರಾಮದಲ್ಲಿ ದಾವಣಗೆರೆ ಮೂಲದ ವಲಸೆ ಬಂದ ವೀರಪ್ಪಶೆಟ್ಟಿಗೌಡ ಮತ್ತು ಪತ್ನಿ ಪಾರ್ವತಿ ದಂಪತಿ ಬಳಿ ಪಿ.ಕೋಡಿಹಳ್ಳಿ ಹಾಲುಗೊಲದ(ಹಾಲುಮತ) ಸಮಾಜದ ಬೀರಪ್ಪ ಎಂಬುವನು ಆಕಳುಗಳನ್ನು ಕಾಯುತ್ತಿದ್ದ. ಅದರಲ್ಲಿ ಕಪಿಲೆ ಎಂಬ ಹಸು ಒಂದು ದಿನ ಸಂಜೆ ಕಪಿಲೆ ವೇದಾ ನದಿ ಎಡದಂಡೆಯ ಮೇಲಿನ ಹುತ್ತಕ್ಕೆ ಹಾಸಲು ಎರೆಯುವುದನ್ನು ಬೀರಪ್ಪ ನೋಡಿ ತಮ್ಮ ಗೌಡರಿಗೆ ತಿಳಿಸಿದನು.
ಕನಸಿನಲ್ಲಿ ಬಂದ ಸ್ವಾಮಿ ಉದ್ಭವಿಸಿದ ಜಾಗದಲ್ಲಿ ದೇವಸ್ಥಾನ ನಿರ್ಮಿಸುವಂತೆ ಆದೇಶಿಸಿದ ಕಾರಣ ಕ್ರಿ.ಶ 1015 ರಿಂದ 1102 ಸಾಲಿನ ಸುಮಾರಿನಲ್ಲಿ ದ್ವಾರ ಸಮುದ್ರದ ಅರಸ ಹರಿಹರ ಸೋಮೇಶ್ವರ ರಾಜನಿಂದ ದೇಗುಲ ನಿರ್ಮಾಣಗೊಂಡಿದ್ದು ಇತಿಹಾಸದಲ್ಲಿದೆ. ಸ್ವಾಮಿ ದೇಗುಲ ಅಭಿವೃದ್ದಿಗೊಂಡು ಇಂದಿಗೂ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.