ಪಾಳುಬಿದ್ದ ತಮಿಳು ಕಾಲೋನಿ ನಿವಾಸಿಗಳ ಮನೆಗಳು..!

KannadaprabhaNewsNetwork | Published : Apr 6, 2025 1:46 AM

ಸಾರಾಂಶ

ಎರಡು ವರ್ಷದ ಹಿಂದೆ ತಮಿಳು ಕಾಲೋನಿ ನಿವಾಸಿಗಳಿಗಾಗಿ ಕೆರೆಯಂಗಳದಲ್ಲಿ ನಿರ್ಮಿಸಲಾದ ಮನೆಗಳು ಅಕ್ಷರಶಃ ಭೂತಬಂಗಲೆಗಳ ಸ್ವರೂಪ ಪಡೆದುಕೊಂಡಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿ, ಬೀದಿ ನಾಯಿಗಳಿಗೆ ಆಶ್ರಯತಾಣವಾಗಿ, ವಿಷಜಂತುಗಳ ಆವಾಸಸ್ಥಾನವಾಗಿ ಪರಿವರ್ತನೆಗೊಂಡಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಎರಡು ವರ್ಷದ ಹಿಂದೆ ತಮಿಳು ಕಾಲೋನಿ ನಿವಾಸಿಗಳಿಗಾಗಿ ಕೆರೆಯಂಗಳದಲ್ಲಿ ನಿರ್ಮಿಸಲಾದ ಮನೆಗಳು ಅಕ್ಷರಶಃ ಭೂತಬಂಗಲೆಗಳ ಸ್ವರೂಪ ಪಡೆದುಕೊಂಡಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿ, ಬೀದಿ ನಾಯಿಗಳಿಗೆ ಆಶ್ರಯತಾಣವಾಗಿ, ವಿಷಜಂತುಗಳ ಆವಾಸಸ್ಥಾನವಾಗಿ ಪರಿವರ್ತನೆಗೊಂಡಿದೆ.

ಮಿಮ್ಸ್ ಆಸ್ಪತ್ರೆ ಜಾಗದಲ್ಲಿ ನೆಲೆಸಿರುವ ತಮಿಳು ಕಾಲೋನಿ ನಿವಾಸಿಗಳಿಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರು. ಹಣ ಖರ್ಚು ಮಾಡಿ ಕೆರೆಯಂಗಳದ ನಿರ್ಮಿತಿ ಕೇಂದ್ರದ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನೂತನವಾಗಿ ನಿರ್ಮಿಸಿರುವ ಮನೆಗಳಿಗೆ ತೆರಳಲು ಒಪ್ಪದೆ ಹಠಹಿಡಿದಿರುವ ನಿವಾಸಿಗಳು ತಾವಿರುವ ಜಾಗದಲ್ಲೇ ಮನೆಗಳನ್ನು ನಿರ್ಮಿಸಿಕೊಡುವಂತೆ ಬಿಗಿಪಟ್ಟು ಹಿಡಿದಿರುವುದು ಜಿಲ್ಲಾಡಳಿತ ಮತ್ತು ಕೊಳಗೇರಿ ಮಂಡಳಿ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ತಾವಿರುವ ಸ್ಥಳದಿಂದ ತೆರವುಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಜಿಲ್ಲಾಡಳಿತದ ಕೈ ಕಟ್ಟಿಹಾಕಿದೆ. ಎಂಟು ಬಾರಿ ನಿವಾಸಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆ ಜಾಗದಿಂದ ಅವರನ್ನು ತೆರವುಗೊಳಿಸಲು ಜಿಲ್ಲಾಡಳಿತ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮಾಡಿದ ಕಸರತ್ತೆಲ್ಲವೂ ವ್ಯರ್ಥವಾಗಿದೆ.

೨೭ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ:

ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯ ಅರ್ಹ ಫಲಾನುಭವಿಗಳಿಗೆ ಕೆರೆಯಂಗಳದ ಆರು ಎಕರೆ ಜಾಗದಲ್ಲಿ ಎರಡು ವರ್ಷದ ಹಿಂದೆ ರಾಜ್ಯ ಸರ್ಕಾರ ೨೭ ಕೋಟಿ ರು. ವೆಚ್ಚದಲ್ಲಿ ೫೭೬ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಆ ಪ್ರದೇಶದಲ್ಲಿ ೧೮ ಬ್ಲಾಕ್‌ಗಳಿದ್ದು ಒಂದೊಂದು ಬ್ಲಾಕ್‌ನಲ್ಲಿ ೩೨ ಮನೆಗಳನ್ನು ಜಿ+೩ ಮಾದರಿಯಲ್ಲಿ ನಿರ್ಮಿಸಲಾಗಿದೆ. ನಿವಾಸಿಗಳು ಅಲ್ಲಿಗೆ ತೆರಳದಿರುವುದರಿಂದ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಮನೆಗಳಂತೆ ಅನಾಥವಾಗಿವೆ.

ಬಾಗಿಲು, ಕಿಟಕಿಗಳು ಕಳ್ಳರ ಪಾಲು:

ಹೊಸದಾಗಿ ನಿರ್ಮಿಸಲಾಗಿರುವ ಬಹುತೇಕ ಮನೆಗಳ ಕಿಟಕಿ ಗಾಜುಗಳನ್ನು ಒಡೆದುಹಾಕಲಾಗಿದೆ. ಗಾಜಿನ ಕಿಟಕಿಗಳನ್ನು ಬಿಚ್ಚಿಕೊಂಡು ಕದ್ದೊಯ್ದಿದ್ದಾರೆ. ಬಾಗಿಲುಗಳನ್ನೂ ಬಿಡಿದಂತೆ ಬಿಚ್ಚಿಕೊಂಡು ಹೊತ್ತೊಯ್ದಿದ್ದಾರೆ. ಮನೆಗಳಿಗೆ ಡೋರ್‌ಲಾಕ್ ವ್ಯವಸ್ಥೆ ಇಲ್ಲ. ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲ. ಸೂಕ್ತ ಭದ್ರತೆಯೇ ಇಲ್ಲದ ಮನೆಗಳಲ್ಲಿ ಅಳವಡಿಸಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳನ್ನು ಬಿಚ್ಚಿ ಒಳಗಿರುವ ವೈರ್‌ಗಳನ್ನು ಕಳವು ಮಾಡಿದ್ದಾರೆ. ಹಲವೆಡೆ ನಲ್ಲಿ ಸಂಪರ್ಕಗಳನ್ನು ಹಾಳುಗೆಡವಿದ್ದಾರೆ.

ಬೀದಿನಾಯಿಗಳಿಗೆ ಆಶ್ರಯ ತಾಣ:

ತಮಿಳು ಕಾಲೋನಿ ಜನರಿಗಾಗಿ ನಿರ್ಮಿಸಲಾಗಿರುವ ಮನೆಗಳು ಬೀದಿ ನಾಯಿಗಳಿಗೆ ಆಶ್ರಯ ತಾಣವಾಗಿದೆ. ಸಾಮಾನ್ಯ ಜನರು ಆ ಬೀದಿಗಳಿಗೆ ತೆರಳಲು ಸಾಧ್ಯವಾಗದಂತೆ ಗುಂಪು ಗುಂಪಾಗಿ ನೆಲೆಸಿವೆ. ಹಾವು-ಚೇಳುಗಳಂತಹ ವಿಷಜಂತುಗಳಿಗೆ ಆಶ್ರಯ ಒದಗಿಸಿವೆ. ಹಲವು ಮನೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದ್ದರೆ, ಇನ್ನೂ ಹಲವು ಮನೆಗಳು ಪುಂಡುಪೋಕರಿಗಳ ತಾಣವಾಗಿ, ಜೂಜಾಟದ ಅಡ್ಡೆಗಳಾಗಿಯೂ ಪರಿವರ್ತನೆಗೊಂಡಿರುವುದು ವಿಪರ್ಯಾಸವೇ ಸರಿ.

ಶಿಥಿಲಗೊಳ್ಳುತ್ತಿರುವ ಮನೆಗಳು:

ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಮನೆಗಳು ಶಿಥಿಲಗೊಳ್ಳಲಾರಂಭಿಸಿವೆ. ಮಳೆ, ಗಾಳಿ, ಬಿಸಿಲಿಗೆ ಮೈಯ್ಯೊಡ್ಡಿ ನಿಂತಿರುವುದರಿಂದ ಬಾಗಿಲುಗಳು ಬೆಂಡಾಗಿವೆ. ಕಿಟಕಿ ಗಾಜುಗಳು ಒಡೆದಿರುವುದು, ಕಿಟಕಿಗಳನ್ನು ಬಿಚ್ಚಿಕೊಂಡು ಹೋಗಿರುವುದರಿಂದ ಮಳೆ ಬಿದ್ದ ಸಮಯದಲ್ಲಿ ನೀರೆಲ್ಲವೂ ಮನೆಯೊಳಗೆ ಹೋಗುತ್ತಿದೆ. ಮನೆ ತುಂಬಾ ಧೂಳು ಆವರಿಸಿಕೊಂಡಿದ್ದು, ಸುರಕ್ಷತೆಯಿಲ್ಲದ ಕಾರಣ ಬಹುತೇಕ ಮನೆಗಳು ಹಾಳಾದ ಸ್ಥಿತಿಯಲ್ಲಿವೆ.ನಿವಾಸಿಗಳ ತೆರವಿಗೆ ಆದೇಶ

ಮಿಮ್ಸ್ ಆಸ್ಪತ್ರೆ ಪಕ್ಕದ ತಮಿಳು ಕಾಲೋನಿ ನಿವಾಸಿಗಳು ವಾಸಿಸುತ್ತಿರುವ ೫.೨೫ ಎಕರೆ ಜಾಗ ಮಿಮ್ಸ್ ಆಸ್ಪತ್ರೆಗೆ ಸೇರಿದ ಜಾಗವಾಗಿದೆ. ಈ ಜಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ೨೦೧೦ರಲ್ಲಿ ಕನ್ನಡಪರ ಹೋರಾಟಗಾರ ಜಿ.ಟಿ.ರವೀಂದ್ರಕುಮಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಆಸ್ಪತ್ರೆ ಜಾಗದಿಂದ ನಿವಾಸಿಗಳನ್ನು ತೆರವುಗೊಳಿಸುವಂತೆ ಕೋರಿದ್ದರು. ೨೦೧೫ರಲ್ಲಿ ಈ ಜಾಗವನ್ನು ಆಸ್ಪತ್ರೆಗೆ ದೊರಕಿಸಿಕೊಟ್ಟು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಎಂಟು ಬಾರಿ ಮನವೊಲಿಕೆ ಪ್ರಯತ್ನ ವಿಫಲ..!

ತಮಿಳು ಕಾಲೋನಿ ನಿವಾಸಿಗಳನ್ನು ಹಾಲಿ ಇರುವ ಜಾಗದಿಂದ ತೆರವುಗೊಳಿಸಲು ಜಿಲ್ಲಾಡಳಿತ, ಶಾಸಕರು ಹಾಗೂ ಕೊಳೆಗೇರಿ ಮಂಡಳಿ ಅಧಿಕಾರಿಗಳು ಎಂಟು ಬಾರಿ ಮನವೊಲಿಕೆ ಪ್ರಯತ್ನ ನಡೆಸಿದರೂ ನಿವಾಸಿಗಳು ಮಣಿಯುತ್ತಿಲ್ಲ. ಸರ್ವೇ ಕಾರ್ಯಕ್ಕೂ ಅವಕಾಶ ನೀಡದೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅಡ್ಡಿಪಡಿಸುತ್ತಿದ್ದಾರೆ. ಕೆಲವೊಂದು ರಾಜಕೀಯ ಪ್ರಭಾವಿಗಳು, ಪಟ್ಟಭದ್ರಹಿತಾಸಕ್ತಿಗಳು ನಿವಾಸಿಗಳ ಬೆಂಬಲಕ್ಕೆ ನಿಂತಿರುವುದರಿಂದ ತೆರವು ಕಾರ್ಯಕ್ಕೆ ಪ್ರಮುಖ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ವಿಳಂಬಗತಿಯಲ್ಲಿ ನಡೆಯುತ್ತಿರುವುದರಿಂದ ಆಸ್ಪತ್ರೆಗೆ ಜಾಗವನ್ನು ದೊರಕಿಸಲಾಗದಂತಾಗಿದೆ.ಮನೆಗಳಿರುವ ಪ್ರದೇಶಕ್ಕೆ ಭದ್ರತೆ ಇಲ್ಲ

ಕೆರೆಯಂಗಳದಲ್ಲಿರುವ ತಮಿಳು ಕಾಲೋನಿ ನಿವಾಸಿಗಳ ಮನೆಗಳಿರುವ ಪ್ರದೇಶಕ್ಕೆ ಸೂಕ್ತ ಭದ್ರತೆ ಇಲ್ಲ. ಮನೆಗಳನ್ನು ನಿರ್ಮಿಸಿದ ಬಳಿಕ ಭದ್ರತೆಗೆ ಮುತುವರ್ಜಿ ವಹಿಸಿದ್ದರೆ ಇಷ್ಟೊಂದು ಅವ್ಯವಸ್ಥೆ ಎದುರಾಗುತ್ತಿರಲಿಲ್ಲ. ಈ ಪ್ರದೇಶಕ್ಕೆ ರಸ್ತೆ, ಚರಂಡಿ, ಕುಡಿಯುವ ನೀರು, ಸ್ಯಾನಿಟರಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ದೊರಕಿಸಲಾಗಿದೆ. ಆದರೂ ಮನೆಗಳಿಗೆ ಯಾರೂ ಹೋಗದಿರುವುದರಿಂದ ಅವೆಲ್ಲವೂ ನಿರುಪಯುಕ್ತವಾಗಿ ಉಳಿದುಕೊಂಡಿವೆ. ಈಗಾಗಲೇ ಮನೆಗಳಿಗೆ ಅಳವಡಿಸಿರುವ ಬಾಗಿಲು-ಕಿಟಿಕಿಗಳು ಸೇರಿದಂತೆ ಇತರೆ ವಸ್ತುಗಳು ಕಳ್ಳರ ಪಾಲಾಗುತ್ತಿವೆ. ಇನ್ನೆರಡು ವರ್ಷ ಹೀಗೆಯೇ ಬಿಟ್ಟರೆ ಸಂಪೂರ್ಣವಾಗಿ ವಾಸಕ್ಕೆ ಯೋಗ್ಯವಲ್ಲದ ಮನೆಗಳಾಗುವುದು ನಿಶ್ಚಿತವಾಗಲಿದೆ ಎಂದು ಹೇಳಲಾಗುತ್ತಿದೆ.ಸಿದ್ಧತೆ ಮಾಡಿಕೊಡುತ್ತೇವೆ

ತಮಿಳು ಕಾಲೋನಿ ನಿವಾಸಿಗಳು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಹೋಗುವುದಕ್ಕೆ ಸಿದ್ಧರಾದರೆ ಅಲ್ಲಿ ಏನೆಲ್ಲಾ ದುರವಸ್ಥೆ ಎದುರಾಗಿದೆಯೋ ಅದೆಲ್ಲವನ್ನೂ ಮತ್ತೆ ಹೊಸದಾಗಿ ಅಳವಡಿಸಿಕೊಡುವುದಕ್ಕೆ ಸಿದ್ಧರಿದ್ದೇವೆ. ಹೈಕೋರ್ಟ್ ತಡೆಯಾಜ್ಞೆ ಇರುವುದಾಗಿ ತೆರವು ಮಾಡದೆ ಅಲ್ಲೇ ನೆಲೆಸಿದ್ದಾರೆ. ಜಿಲ್ಲಾಡಳಿತ, ಶಾಸಕರ ಸಹಯೋಗದೊಂದಿಗೆ ನಾವೂ ಸಾಕಷ್ಟು ಪ್ರಯತ್ನಿಸಿದರೂ ಸರ್ವೇ ಕಾರ್ಯಕ್ಕೂ ಅವಕಾಶ ನೀಡಿಲ್ಲ.

- ನಾಗೇಂದ್ರ, ಅಸಿಸ್ಟೆಂಟ್ ಎಂಜಿನಿಯರ್, ಕೊಳಚೆ ನಿರ್ಮೂಲನಾ ಮಂಡಳಿಪ್ರಮುಖ ಅಂಶಗಳು

ಮಂಡ್ಯ ಕೆರೆಯಂಗಳದ ೬ ಎಕರೆ ಪ್ರದೇಶದಲ್ಲಿ ೧೮ ಬ್ಲಾಕ್‌ಗಳಲ್ಲಿ ೫೭೬ ಮನೆಗಳ ನಿರ್ಮಾಣ

ಒಂದೊಂದು ಬ್ಲಾಕ್‌ನಲ್ಲಿ ೩೨ ಮನೆಗಳು ಜಿ+೩ ಮಾದರಿಯಲ್ಲಿ ನಿರ್ಮಾಣ

೨೭ ಕೋಟಿ ರು. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿರುವ ಕೊಳಗೇರಿ ಮಂಡಳಿ

ಮಿಮ್ಸ್ ಆಸ್ಪತ್ರೆಗೆ ಸೇರಿದ ೫.೨೫ ಎಕರೆ ಪ್ರದೇಶದ ತಮಿಳು ಕಾಲೋನಿಯಲ್ಲಿ ನಿವಾಸಿಗಳು ವಾಸ

Share this article