ವಿವಿಧ ಸಮುದಾಯಗಳಿಂದ ಪ್ರತಿಭಟನೆ, ಬೈಕ್ ರ್‍ಯಾಲಿ । ಎಸ್‌ಸಿ 99 ಸಮುದಾಯಗಳು ಕಾಂಗ್ರೆಸ್‌ಗೂ ಪಾಠ ಕಲಿಸಲಿವೆ: ಚಂದ್ರನಾಯ್ಕ
ಕನ್ನಡಪ್ರಭ ವಾರ್ತೆ ದಾವಣಗೆರೆನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಮತ್ತೆ ಜಾರಿಗೆ ತಂದು, ಮರು ಜೀವ ನೀಡುವುದನ್ನು ವಿರೋಧಿಸಿ ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಇತರೆ ಸಮುದಾಯಗಳು ಬೈಕ್ ರ್‍ಯಾಲಿ ನಡೆಸಿದವು.
ನಗರದ ಶ್ರೀ ಜಯದೇವ ವೃತ್ತದಿಂದ ವಿವಿಧ ಸಮುದಾಯಗಳ ಮುಖಂಡರು, ಸಮಾಜ ಬಾಂಧವರು ಬೈಕ್ ರ್‍ಯಾಲಿ ಮೂಲಕ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಈ ವೇಳೆ ಮಾತನಾಡಿದ ಸಮುದಾಯದ ಮುಖಂಡ ಜಿ.ಚಂದ್ರನಾಯ್ಕ ಹಾಲೇಕಲ್ಲು, ಹಿಂದಿನ ಸರ್ಕಾರವು ತಿರಸ್ಕರಿಸಿದ್ದ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಗೆ ಮತ್ತೆ ಜೀವ ಕೊಡಲು ಈಗಿನ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಖಂಡನೀಯ. ಈಗಾಗಲೇ ಸತ್ತು ಹೋದ ವರದಿಯನ್ನು ಕಾಂಗ್ರೆಸ್ ಸರ್ಕಾರ ಮುನ್ನೆಲೆಗೆ ತಂದು, ಪರಿಶಿಷ್ಟ ಜಾತಿಯ 99 ಸಮುದಾಯಗಳಲ್ಲಿ ಆತಂಕ ಹುಟ್ಟು ಹಾಕಿದೆ ಎಂದು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ, ಒಳ ಮೀಸಲಾತಿ ನೀಡಿತ್ತು. ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ 99 ಸೋದರ ಸಮುದಾಯಗಳು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದವು. ಅದೇ ರೀತಿ ಕಾಂಗ್ರೆಸ್ ಸಂಪುಟದಲ್ಲಿ ಪ್ರಮುಖ ಖಾತೆ ಸಚಿವರಾದ ಮುನಿಯಪ್ಪ, ಡಾ.ಜಿ.ಪರಮೇಶ್ವರ ಬೆಳಗಾವಿ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಗೆ ಮರು ಜೀವ ನೀಡಿ, ವರದಿ ಜಾರಿಗೊಳಿಸುವ ಹೇಳಿಕೆ ನೀಡಿದ್ದು ಖಂಡನೀಯ ಎಂದು ಆಕ್ಷೇಪಿಸಿದರು.ಬಹಿರಂಗ ಸಭೆಗಳಲ್ಲಿ ಸಚಿವರಾದ ಮುನಿಯಪ್ಪ, ಡಾ.ಜಿ.ಪರಮೇಶ್ವರ ಹೇಳಿಕೆಗಳನ್ನು ನೀಡುತ್ತಿರುವುದು 99 ಸಮುದಾಯಗಳ ವಿರೋಧಕ್ಕೂ ಕಾರಣವಾಗಿದೆ. ಪರಿಶಿಷ್ಟ ಜಾತಿಯ ಸಾಮರಸ್ಯ ಕದಡಲು ಯತ್ನಿಸುತ್ತಿರುವ ಸಚಿವ ಮುನಿಯಪ್ಪಗೆ ಸಂಪುಟದಿಂದ ವಜಾ ಮಾಡಬೇಕು. ಯಾವುದೇ ಕಾರಣಕ್ಕೂ ನ್ಯಾ.ಸದಾಶಿವ ಆಯೋಗದ ವರದಿಗೆ ಕಾಂಗ್ರೆಸ್ ಸರ್ಕಾರ ಕೈ ಹಾಕಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇಂತಹ ಸೂಕ್ಷ್ಮ ವಿಚಾರಕ್ಕೆ ಕೈ ಹಾಕಿದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಸೂಚ್ಯವಾಗಿ ಎಚ್ಚರಿಸಿದರು.
ಭೋವಿ ಸಮಾಜದ ಮುಖಂಡ ಎಚ್.ಜಯಣ್ಣ ಮಾತನಾಡಿ, ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ಪರಿಶಿಷ್ಟ ಜಾತಿಯ 99 ಸಮುದಾಯಗಳ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗ ತುತ್ತು ಅನ್ನ, ಕೆಲಸ ಅರಸಿ, ದೊಡ್ಡ ನಗರ, ಬೇರೆ ಪ್ರದೇಶಗಳಿಗೆ ಗುಳೇ ಹೋಗುವ ಸಂದರ್ಭ ನಿರ್ಮಾಣವಾಗಿದೆ ಎಂದರು.ವಿವಿಧ ಸಮುದಾಯಗಳ ಮುಖಂಡರಾದ ಮಂಜುನಾಯ್ಕ ತೋಳಹುಣಸೆ, ಜಿ.ಸಿ.ಮಂಜುನಾಥ, ನಾಗರಾಜ ನಾಯ್ಕ, ರಾಘವೇಂದ್ರ ನಾಯ್ಕ, ಚಾಮರಾಜ, ಪರಶುರಾಮ, ತಿಮ್ಮೇಶ, ಚಿದಾನಂದ, ಮುರುಗೇಶ ನಾಯ್ಕ, ವಿಠ್ಠಲ, ಬಸವರಾಜ ಇತರರಿದ್ದರು.
99 ಸಮುದಾಯಗಳು ಮತ್ತು ಸೋದರ ಸಮುದಾಯಗಳಾದ ಎಡ ಮತ್ತು ಬಲ ಸಮುದಾಯಗಳ ಬೀದಿಗೆ ತರಲು ಕಾಂಗ್ರೆಸ್ ಹುನ್ನಾರ ನಡೆಸಿದ್ದು, ಇದಕ್ಕೆ ನಾವು ಅವಕಾಶ ನೀಡಲ್ಲ. 99 ಸಮುದಾಯಗಳು, ಸೋದರ ಸಮಾಜಗಳ ನೆಮ್ಮದಿಯಾಗಿರಲು ಬಿಡದಿದ್ದರೆ, ಹಿಂದೆ ಬಿಜೆಪಿಗೆ ಕಲಿಸಿದ ಪಾಠವನ್ನೇ ಕಾಂಗ್ರೆಸ್ಸಿಗೂ ಕಲಿಸಲಿದ್ದೇವೆ.ಎಚ್.ಜಯಣ್ಣ, ಭೋವಿ ಸಮಾಜದ ಮುಖಂಡ
.................