ಕನ್ನಡಪ್ರಭ ವಾರ್ತೆ ಮಂಗಳೂರು
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬೀದಿಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಗಳೂರು ಮಹಾ ನಗರ ಪಾಲಿಕೆಯು ಬೀದಿಬದಿ ವ್ಯಾಪಾರಿಗಳಿಗಾಗಿ ನಗರದ ಹೃದಯ ಭಾಗದಲ್ಲಿ ಬೃಹತ್ ಬೀದಿ ವ್ಯಾಪಾರ ವಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಮಾತ್ರವಲ್ಲದೆ, ನಗರದ ಎಲ್ಲ 60ವಾರ್ಡ್‌ಗಳಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರತಿ ವಾರ್ಡ್‌ಗಳಲ್ಲಿ ನಗರ ಪಾಲಿಕೆ ವ್ಯಾಪಾರ ವಲಯ ನಿರ್ಮಿಸಿ ಕೊಡಲಿದೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ನಾನು ಸ್ವತಃ ಬೀದಿ ವ್ಯಾಪಾರಿಯಾಗಿ ಅವರ ಹೊಟ್ಟೆಪಾಡಿನ ಕಷ್ಟಗಳು ನನಗೆ ಚೆನ್ನಾಗಿ ತಿಳಿದಿದೆ. ನಾನು ಇಂದು ಪ್ರಧಾನಿ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿರಬಹುದು, ಆದರೆ ನನ್ನ ಕಷ್ಟದ ದಿನಗಳ ಬಗ್ಗೆ ಇನ್ನೂ ನೆನಪಿದೆ. ಬೀದಿ ವ್ಯಾಪಾರಿಗಳು ಸ್ವಾಭಿಮಾನವನ್ನು ಎಂದೂ ಬಿಟ್ಟು ಕೊಡುವವರಲ್ಲ ಎಂದು ಹೇಳಿದರು.ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ರಕ್ತ ಹೀರುತ್ತಿರುವ ಬಡ್ಡಿ ದಂಧೆಕೋರರಿಂದ ಮುಕ್ತಿಗೊಳಿಸಲು ಮತ್ತು ಬೀದಿ ವ್ಯಾಪಾರಿಗಳನ್ನು ಗುರಿಯಾಗಿಸಿ ಪಂಗನಾಮ ಹಾಕುತ್ತಿದ್ದ ಬ್ಲೇಡ್ ಕಂಪೆನಿಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸಿ ಆರ್ಥಿಕ ಸ್ವಾವಲಂಬಿಗಳಾಗಿ ಮಾಡುವ ನಿಟ್ಟಿನಲ್ಲಿ ಸಹಕಾರ ಸಂಘ ರಚಿಸಲಾಗಿದೆ ಎಂದು ಹೇಳಿದರು.
ಸಿಐಟಿಯು ಅಧ್ಯಕ್ಷ, ನಾಗುರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯುವ ವಕೀಲ ಚರಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಬಾವ ಪದರಂಗಿ, ಗ್ಲೋಬಲ್ ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಮೊಹಮ್ಮದ್ ಫೈರೋಜ್, ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು, ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಉಡುಪಿ ಮತ್ತಿತರರು ಇದ್ದರು.