ಪೂರ್ತಿ ಸ್ವೀಕಾರವಾಗಿಲ್ಲ ಭಾರತೀಯ ಸಂವಿಧಾನ!

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಸಂವಿಧಾನ ಸಿಕ್ಕಂತೆ ತಿದ್ದುಪಡಿ ಮಾಡುವ ಕಥೆ, ಕಾದಂಬರಿ ಹಾಗೂ ಮಹಾಕಾವ್ಯವಲ್ಲ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ನಮಗೆ ನಾವೇ ಚೌಕಟ್ಟು ಹಾಕಿಕೊಂಡು ಅರ್ಪಿಸಿಕೊಂಡ ಬದುಕಿನ ವಿಧಾನ ಇದು.

ಧಾರವಾಡ:

ಸಮಸ್ತ ಭಾರತೀಯರಿಗೆ ಘನತೆಯ ಬದುಕು ನೀಡಿದ ಸಂವಿಧಾನವು ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ, ಅಳವಡಿಕೆ ಹಾಗೂ ಗೌರವಕ್ಕೆ ಪಾತ್ರವಾಗಿಲ್ಲ. ಜತೆಗೆ ಪೂರ್ಣ ಪ್ರಮಾಣದಲ್ಲಿ ಸ್ವೀಕಾರವೂ ಆಗಿಲ್ಲ ಎಂಬ ನೋವಿದೆ ಎಂದು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.

ಪ್ರಬುದ್ಧ ಭಾರತ ನಿರ್ಮಾಣ ಫೌಂಡೇಶನ್‌, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಸ್ಮಾರಕ ಅಭಿವೃದ್ಧಿ ಅಕಾಡೆಮಿ ಹಾಗೂ ರಾಜ್ಯ ಪಜಾ, ಪಪಂ ನೌಕರರ ಸಾಂಸ್ಕೃತಿಕ ಅಭಿವೃದ್ಧಿ ವೇದಿಕೆ ಜಂಟಿಯಾಗಿ ಮಂಗಳವಾರ ಇಲ್ಲಿಯ ಆಲೂರು ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಓದುವ ಮೂಲಕ ಉದ್ಘಾಟಿಸಿದ ಅವರು, ಈಚೆಗೆ ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದು ಒಬ್ಬ ಸ್ವಾಮೀಜಿ ಹೇಳಿದ್ದಾರೆ. ಇಂತಹ ಅಪಸ್ವರಗಳು ಸಂವಿಧಾನ ರಚನೆಯಾಗಿ 75 ವರ್ಷಗಳಲ್ಲಿ ಸಾಕಷ್ಟು ಬಂದಿವೆ. ಹೀಗಾಗಿ ನಮ್ಮ ಸಮಾಜದಲ್ಲಿ ಡಾ. ಅಂಬೇಡ್ಕರ್‌ ಅವರ ಸಂವಿಧಾನ ಹಾಗೂ ಅಲಿಖಿತ ಸಂವಿಧಾನ ನಮ್ಮಲ್ಲಿ ಜಾರಿಯಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಿದ್ದುಪಡಿ ದುರುಪಯೋಗ:

ಸಂವಿಧಾನ ತಿದ್ದುಪಡಿಯಲ್ಲಿ ಅವಕಾಶ ಇದೆ ಎಂದು ಇಲ್ಲಿಯ ವರೆಗೆ ಬರೋಬ್ಬರಿ 116 ಬಾರಿ ತಿದ್ದುಪಡಿಯಾಗಿದೆ. ಅದರಲ್ಲೂ ಆರೇಳು ತಿದ್ದುಪಡಿಗಳು ತುಂಬ ಭಯಾನಕ ಇವೆ ಎಂದ ಅವರು, ಸಂವಿಧಾನ ಸಿಕ್ಕಂತೆ ತಿದ್ದುಪಡಿ ಮಾಡುವ ಕಥೆ, ಕಾದಂಬರಿ ಹಾಗೂ ಮಹಾಕಾವ್ಯವಲ್ಲ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ನಮಗೆ ನಾವೇ ಚೌಕಟ್ಟು ಹಾಕಿಕೊಂಡು ಅರ್ಪಿಸಿಕೊಂಡ ಬದುಕಿನ ವಿಧಾನ ಇದು. ನಮ್ಮ ಬಹುತ್ವದ ಆಶಯಗಳಿಗೆ ವ್ಯತಿರಿಕ್ತ ಆಗದ ರೀತಿಯಲ್ಲಿ ತಿದ್ದಬೇಕು. ದುರಂತ ಎಂದರೆ, ಕಾಲಕ್ಕೆ ತಕ್ಕಂತೆ ತಿದ್ದುಪಡಿಯ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿಸಿಕೊಂಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಇವು ಅಪಾಯಗಳು:

ಸಂವಿಧಾನಕ್ಕೆ ಹಲವು ರೀತಿಯ ಅಪಾಯಗಳು ಸೃಷ್ಟಿಯಾಗಿವೆ. ಮೂಢನಂಬಿಕೆ, ಸಂವಿಧಾನದ ಹಕ್ಕು ಪಡೆದು ಸರ್ಕಾರಿ ನೌಕರಿ ಪಡೆದವರು, ರಾಜಕೀಯ ಅನುಕೂಲಕ್ಕಾಗಿ ಸಂಸದ, ಶಾಸಕರು, ಸಂವಿಧಾನದ ಆಶಯ ಒಪ್ಪದ ವರ್ಗ, ಮಾನವ ವಿರೋಧಿ ನ್ಯಾಯಾಧೀಶರು, ಕೆಲ ಐಎಎಸ್‌, ಐಪಿಎಸ್‌ ಅಧಿಕಾರಿ ವರ್ಗಗಳಿಂದ ಸಂವಿಧಾನ ವಿರೋಧಿ ನಿಲುವುಗಳು ತೆಗೆದುಕೊಳ್ಳುತ್ತಿದ್ದಾರೆ. ಇವರೆನ್ನೆಲ್ಲಾ ನಿಯಂತ್ರಿಸುವ ಕಾವಲು ನಾಯಿ ಮಾಧ್ಯಮ ವರ್ಗವು ಕೈ-ಕಾಲು ಹಾಗೂ ಬಾಯಿ ಕಟ್ಟಿಸಿಕೊಂಡು ಸುಮ್ಮನೆ ಕೂತಿದೆ. ಇನ್ನೂ ಬೇಸರ ಎಂದರೆ, ಸಂವಿಧಾನ ಕೊಲ್ಲಲು ಹೊರಟವರನ್ನು ಇವತ್ತು ಕರೆದು ಅದನ್ನು ರಕ್ಷಿಸಲು ಹೊರಟಿದ್ದೇವೆ ಎಂದು ಸಿದ್ದಣ್ಣವರ ಅತೀವ ಬೇಸರ ವ್ಯಕ್ತಪಡಿಸಿದರು.

ಶಿಕ್ಷಕರನ್ನು ಮುಕ್ತಗೊಳಿಸಿ:

ಪ್ರತಿಯೊಬ್ಬ ಮಗುವಿಗೆ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ಬೇಕೆಂದು ರಾಜ್ಯ ಸರ್ಕಾರ ಕಡ್ಡಾಯ ಶಿಕ್ಷಣ ಕಾನೂನು ಮಾಡಿದೆ. ಆದರೆ, ಶಿಕ್ಷಕರು ಮಕ್ಕಳಿಗೆ ಕಲಿಸುವುದನ್ನು ಬಿಟ್ಟು ಹಾಲು-ಚಿಕ್ಕಿ, ಮೊಟ್ಟೆ, ನ್ಯಾಪಕಿನ್‌ ಕೊಡಲು ಹಚ್ಚಿರುವ ಸರ್ಕಾರದ ಕ್ರಮ ಸರಿಯಲ್ಲ. ಅವರನ್ನು ಶುದ್ಧವಾಗಿ ಪಾಠ ಮಾಡಲು ಬಿಡಿ ಅಂದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದ ಪ್ರತಿಪಾದಿಸಿದ ಸಿದ್ದಣ್ಣವರ, ಸದ್ಯ ಇರುವ ಶಿಕ್ಷಕರ ಮೇಲಿನ ಈ ಎಲ್ಲ ಹೊರೆಯನ್ನು ತೆಗೆಯಲು ಚಳಿಗಾಲದ ಅಧಿವೇಶನದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಚುಕ್ಕೆ ಗುರುತಿನ ಪ್ರಶ್ನೆ ಕೇಳಬೇಕೆಂದು ಆಗ್ರಹಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಹೆಚ್ಚುವರಿ ಹೊರೆ ಇದ್ದು, ಶಿಕ್ಷಕರಿಗೂ ಇದೆ. ಎಲ್ಲ ನೌಕರರ ಪೈಕಿ ಶಿಕ್ಷಕರಿಗೆ ಸರ್ಕಾರ ಅತ್ಯಂತ ಹೆಚ್ಚಿನ ವೆಚ್ಚ ಮಾಡುತ್ತಿದೆ. ಇಷ್ಟಾಗಿಯೂ ಸರ್ಕಾರಿ ಶಾಲೆಗಳ ಫಲಿತಾಂಶ ಗಮನಾರ್ಹವಾಗಿಲ್ಲ ಎಂದರು.

ಜಾತಿ ವ್ಯವಸ್ಥೆ ಬರೀ ಭಾರತ ಹಾಗೂ ಹಿಂದೂಗಳಲ್ಲಿ ಮಾತ್ರ ಇಲ್ಲ. ಎಲ್ಲ ಧರ್ಮಗಳು ಸೇರಿ ಪ್ರಪಂಚದಲ್ಲಿಯೇ ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವೆಲ್ಲಾ ಚಿಂತನೆ ಮಾಡಬೇಕೆಂದರು.

ಸಮಾಜಕ್ಕೆ ಮರಳಿಸಿ:

ದಿಕ್ಸೂಚಿ ಭಾಷಣ ಮಾಡಿದ ಸಿಸ್ಲೆಪ್‌ ಕರ್ನಾಟಕ ಸಂಸ್ಥೆ ನಿರ್ದೇಶಕ ಡಾ. ಬಿ.ಕೆ. ಎಸ್‌. ವರ್ಧನ್‌, ಸಂವಿಧಾನ ಹಕ್ಕು ಪಡೆದು ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವವರು ಸಮಾಜದ ಉಳಿದವರನ್ನು ಉನ್ನತ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡಬೇಕು ಎನ್ನುವುದೇ ನಮ್ಮ ಆಶಯ. ಸಮಾಜದಿಂದ ಪಡೆದಿರವುದನ್ನು ಮರಳಿ ಸಮಾಜಕ್ಕೆ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಸಂವಿಧಾನ ದಿನಾಚರಣೆಯಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಉದ್ಘಾಟನೆ ನಂತರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಾಧನೆಗೆ ಕಾರ್ಯತಂತ್ರಗಳು ಹಾಗೂ ಭಾರತದ ಸಂವಿಧಾನ ಮತ್ತು ಯುವಕರ ಭವಿಷ್ಯ ಸಂವಾದ ನಡೆಯಿತು. ಸಾಧಕರಿಗೆ ಸನ್ಮಾನವೂ ನಡೆಯಿತು.

ಹಿರಿಯ ಕಲಾವಿದ ಬಿ. ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ಎಸ್‌.ಎಂ. ಹುಡೇದಮನಿ, ರವಿ ಭಜಂತ್ರಿ, ಮೀನಾಕ್ಷಿ ವರ್ಧನ್‌ ಇದ್ದರು. ಸಿದ್ದರಾಮ ಹಿಪ್ಪರಗಿ ನಿರೂಪಿಸಿದರು. ಹೇಮಂತ ಕುಂದರಗಿ ಸ್ವಾಗತಿಸಿದರು.

ಈ ಹಿಂದೆ ಪ್ರತಿ ಊರಿನಲ್ಲಿ ಹರಿಜನ ಕೇರಿಗಳಿದ್ದವು. ಈಗ ಎಸ್ಸಿ-ಎಸ್ಟಿ ಎಂದು ಪ್ರತ್ಯೇಕ ವಸತಿ ನಿಲಯಗಳನ್ನಾಗಿ ಮಾಡುವ ಮೂಲಕ ಅವುಗಳಿಗೆ ಹೊಸ ರೂಪ ಕೊಡುತ್ತಿದ್ದೇವೆ. ಸಮಾಜದ ಎಲ್ಲ ವರ್ಗ, ಜಾತಿಗಳ ಜನರು ಒಂದೆಡೆ ಸೇರಲು ವಸತಿ ನಿಲಯಗಳು ಉತ್ತಮ ಅವಕಾಶ. ಆದರೆ, ಎಲ್ಲ ಜಾತಿ-ಧರ್ಮಗಳಿಗೆ ಪ್ರತ್ಯೇಕ ವಸತಿ ನಿಲಯ ಮಾಡುವ ಮೂಲಕ ಹರಿಜನ ಕೇರಿಗಳನ್ನು ಸರ್ಕಾರದಿಂದಲೇ ಮುಂದುವರಿಸಲಾಗುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Share this article