ಹಿರಿಯೂರು ಕೃಷಿ ಕ್ಷೇತ್ರದಲ್ಲಿ ಅಡಕೆಯ ಹಿಗ್ಗು

KannadaprabhaNewsNetwork | Published : Dec 24, 2023 1:45 AM

ಸಾರಾಂಶ

2018-19ರಲ್ಲಿ 4434 ಹೆಕ್ಟೇರ್‌ನಿಂದ 2022-23ಕ್ಕೆ 9883 ಹೆಕ್ಟೇರ್‌ಗೆ ಅಡಕೆ ಬೆಳೆ ಕ್ಷೇತ್ರ ಏರಿಕೆ. ಅಡಕೆಗೆ ಈಗ ಕ್ವಿಂಟಲ್‌ಗೆ 48 ಸಾವಿರ ರು. ಧಾರಣೆ, ಈ ವಾರ್ಷಿಕ ಬೆಳೆಯತ್ತ ವಾಲಿದ ಚಿತ್ರದುರ್ಗದ ಜಿಲ್ಲೆ ಜನರು

ಕನ್ನಡಪ್ರಭ ವಾರ್ತೆ ಹಿರಿಯೂರುಬಯಲು ಸೀಮೆ ಹಿರಿಯೂರು ಮಲೆನಾಡಿನ ರೂಪ ಪಡೆಯಲಿದೆಯಾ? ತೋಟಗಾರಿಕೆ ಇಲಾಖೆಯ ಅಂಕಿ-ಸಂಖ್ಯೆ ಗಮನಿಸಿದರೆ ನಿಜ ಅನಿಸುತ್ತಿದೆ. ಇನ್ನು 5-10 ವರ್ಷ ಮಳೆ ಕೊರತೆಯಾಗದಿದ್ದರೆ ಅಡಕೆ ಉತ್ಪಾದನೆಯಲ್ಲಿ ತಾಲೂಕಿನ ಹೆಸರು ಪ್ರಮುಖವಾಗಿ ಕೇಳಿ ಬರಲಿದೆ. ತಾಲೂಕಿನಲ್ಲಿ ಅಡಕೆ ನಾಟಿ ಭರದಿಂದ ಸಾಗಿದ್ದು, ಎತ್ತ ನೋಡಿದರು ಅಡಕೆ ಸಸಿಗಳ ಜಮೀನುಗಳು ಕಂಡು ಬರುತ್ತಿವೆ. ಜಿದ್ದಿಗೆ ಬಿದ್ದವರಂತೆ ರೈತರು ಅಡಕೆ ತೋಟ ಮಾಡುತ್ತಿದ್ದಾರೆ. 3-4 ವರ್ಷ ಹಿಂದೆ ಮಳೆ ಇಲ್ಲದೇ ನೂರಾರು ಎಕರೆ ಸಾವಿರಾರು ತೆಂಗಿನಮರ ಒಣಗಿಹೋಗಿದ್ದವು. ಈಗ ಆ ತೆಂಗಿನ ತೋಟ ಹೋದ ಬಹಳಷ್ಟು ನೆಲದಲ್ಲಿ ಅಡಕೆ ಸಸಿಗಳು ಕಂಡು ಬರುತ್ತಿವೆ. 2017-18 ರಲ್ಲಿ ವಾಣಿವಿಲಾಸ ಜಲಾಶಯದ ನೀರು 66 ಅಡಿಗೆ ಕುಸಿದಾಗ ತಾಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು ಆಗದಿದ್ದರಿಂದ ಮತ್ತು ಮಳೆ ಕೈಕೊಟ್ಟ ಕಾರಣ ಸಾವಿರಾರು ತೆಂಗಿನಮರಗಳು ಒಣಗಿಹೋದವು. ಆ ಮೇಲೆ ಮತ್ತೆ ತೆಂಗಿನ ತೋಟ ಕಟ್ಟಲು ಹಿಂದೇಟು ಹಾಕಿದ ರೈತ ಸಮುದಾಯ ಈಗ ಅಡಕೆ ಬೆಳೆಗೆ ಮುಗೆಬಿದ್ದಿದೆ.ನೀರಾವರಿ ಜೊತೆಗೆ ಖುಷ್ಕಿ ಜಮೀನಿನಲ್ಲಿಯೂ ಸಹ ನೀರಿನ ವ್ಯವಸ್ಥೆ ಮಾಡಿಕೊಂಡು ಅಡಕೆ ಸಸಿ ನಾಟಿ ಮಾಡುತ್ತಿದ್ದಾರೆ. ವಿವಿ ಸಾಗರ ಜಲಾಶಯಕ್ಕೆ 2022ರಲ್ಲಿ ದಾಖಲೆಯ 135ಅಡಿ ನೀರು ಸಂಗ್ರಹವಾದ ಹಿನ್ನೆಲೆ ರೈತರು ಇದೀಗ ಮತ್ತೆ ಬಹುವಾರ್ಷಿಕ ಬೆಳೆಗಳತ್ತ ಮುಖ ಮಾಡಿದ್ದಾರೆ.2018-19ರಲ್ಲಿ ತಾಲೂಕಿನಲ್ಲಿ 4434.08 ಹೆಕ್ಟೇರ್‌ ವಿಸ್ತೀರ್ಣದಲ್ಲಿದ್ದ ಅಡಿಕೆ ಬೆಳೆ 2022-23ರ ಹೊತ್ತಿಗೆ 9883 ಹೆಕ್ಟೇರ್‌ಗೆ ಏರಿಕೆಯಾಗಿದೆ. ಅಂದರೆ ಬರೋಬ್ಬರಿ ಡಬಲ್‌ ಆಗಿದೆ. ಭದ್ರೆ ವಿವಿ ಸಾಗರ ತಲುಪಿದ್ದು, ವೇದಾವತಿ, ಸುವರ್ಣ ಮುಖಿ ನದಿಯಲ್ಲಿ ಹತ್ತಾರು ಚೆಕ್ ಡ್ಯಾಮ್ ನಿರ್ಮಾಣ, ಧರ್ಮಪುರ ಫೀಡರ್ ಚಾನೆಲ್ ಸಾಕಾರ ಹೀಗೆ ಹತ್ತು ಹಲವು ಕಾರಣಗಳು ಸೇರಿ ತಾಲೂಕಿನಲ್ಲಿ ಅಡಕೆ ತೋಟಗಳ ಸಂಖ್ಯೆ ಹೆಚ್ಚುತ್ತಿದೆ.

ನೀರಿನ ಸೌಕರ್ಯದ ನಂಬಿಕೆಯಿಂದ ಅರ್ಧ ಎಕರೆ ಜಮೀನಿರುವ ರೈತರು ಸಹ ಅಡಿಕೆ ಸಸಿ ನೆಡುತ್ತಿದ್ದಾರೆ. ಕೂಲಿಯಾಳುಗಳ ಕೊರತೆ, ಮನೆಯಲ್ಲಿ ಜಮೀನು ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದು. ಕೂಲಿ ದರ ಹೆಚ್ಚಳ ಹೀಗೆ ಹತ್ತಾರು ಕಾರಣಗಳಿಂದ ಇಂದು ರೈತರು ಭತ್ತ, ರಾಗಿ ಯಂತಹ ಆಹಾರ ಧಾನ್ಯ ಬೆಳೆ ಬಿಟ್ಟು ಅಡಕೆಯತ್ತ ವಾಲಿದ್ದಾರೆ. ಕೆ. ಲೋಕೇಶ್, ಹಿರಿಯ ತೋಟಗಾರಿಕೆ ನಿರ್ದೇಶಕರು. ತೋಟಗಾರಿಕೆ ಇಲಾಖೆ ಅಡಕೆಗೆ ಈಗ ಕ್ವಿಂಟಲ್‌ಗೆ 48 ಸಾವಿರ ರು. ಧಾರಣೆ ಇದೆ. ಕಳೆದ ಮೂರು ವರ್ಷದ ಹಿಂದೆಯೂ ಇದಕ್ಕಿಂತ ಸ್ವಲ್ಪ ಕಡಿಮೆ ದರವಿತ್ತು. ದರ ಎಷ್ಟೇ ಇದ್ದರೂ ನಷ್ಟ ಆಗುವುದಿಲ್ಲ ಮತ್ತು ಒಮ್ಮೆ ತೋಟ ಕಟ್ಟಿದರೆ, ಹತ್ತಾರು ವರ್ಷ ತೊಂದರೆಯಿಲ್ಲ ಎಂಬ ಉದ್ಧೇಶದಿಂದ ಬಹಳಷ್ಟು ರೈತರು ಅಡಕೆ ಬೆಳೆಗೆ ಮಾರುಹೋಗಿದ್ದಾರೆ. ಇದೇ ರೀತಿ ಅಡಿಕೆ ಬೆಳೆಗಾರರು ಹೆಚ್ಚುತ್ತಲೇ ಹೋದರೆ ಬೆಲೆ ಏರು ಪೇರಾಗುವ ಸಾಧ್ಯತೆ ಇರುತ್ತದೆ. ಕನಕರಾಜ್ ಆಲೂರು, ಅಡಿಕೆ ಬೆಳೆಗಾರ

Share this article