ಅನುಭವ ಮಂಟಪ ಮುನ್ನಡೆಸಿದ ಅಲ್ಲಮರ ಪರಿ ಅಪರಿಮಿತ: ಡಾ.ಬಸವಕುಮಾರ ಸ್ವಾಮೀಜಿ

KannadaprabhaNewsNetwork | Published : Apr 1, 2025 12:48 AM

ಸಾರಾಂಶ

ಹನ್ನೆರಡನೆಯ ಶತಮಾನದಲ್ಲಿ ಸಂಸತ್ ಮಾದರಿಯ ಅನುಭವ ಮಂಟಪವ ಅಲ್ಲಮಪ್ರಭು ಮುನ್ನಡೆಸಿದ ರೀತಿ ರೋಮಂಚಕಾರಿಯಾಗಿತ್ತು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಅಲ್ಲಮಪ್ರಭು ಜಯಂತಿ । ಮುರುಘಾ ಮಠದಿಂದ ಶರಣೋತ್ಸವ । ಹೊಸ ವರ್ಷಾರಂಭ ಸಮಾರಂಭ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹನ್ನೆರಡನೆಯ ಶತಮಾನದಲ್ಲಿ ಸಂಸತ್ ಮಾದರಿಯ ಅನುಭವ ಮಂಟಪವ ಅಲ್ಲಮಪ್ರಭು ಮುನ್ನಡೆಸಿದ ರೀತಿ ರೋಮಂಚಕಾರಿಯಾಗಿತ್ತು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿದ್ದ ಶೂನ್ಯಪೀಠ ಪರಂಪರೆಯ ಪ್ರಥಮಾಧ್ಯಕ್ಷ ಅಲ್ಲಮಪ್ರಭುದೇವರ ಜಯಂತಿ (ಶರಣೋತ್ಸವ) ಹಾಗೂ ನೂತನ ವರ್ಷಾರಂಭ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದರು.

ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭುವನ್ನು ತಾತ್ವಿಕವಾಗಿ ಸರಿಗಟ್ಟಲು ಸಾಧ್ಯವಿಲ್ಲವೇನೋ? ಎಂಬ ಆಶಯವನ್ನು ಶಿಶುನಾಳ ಶರೀಫರು ಹೊಂದಿದ್ದರು. ಯಾವುದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಜಾಯಮಾನ ಅಲ್ಲಮರದಾಗಿರಲಿಲ್ಲ. ಅಂತಹ ಪ್ರಚಂಡ ಶಕ್ತಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದು ಒಂದು ವಿಸ್ಮಯ ಎಂದರು.

ಈ ನಾಡಿನಲ್ಲಿ ಅಲ್ಲಮರ ವಚನಗಳಿಗೆ ನಿರ್ವಚನ ಮಾಡಿದವರನ್ನು ಕಂಡಿಲ್ಲ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳವರಿಂದ ಒಂದೆರಡು ಕೃತಿಗಳು ಬಂದದ್ದು ಬಿಟ್ಟರೆ ಪರಿಪೂರ್ಣವಾದ ಸಾರವತ್ತಾದ ವಚನ- ನಿರ್ವಚನ ಕೃತಿಗಳು ಬಂದಿಲ್ಲ. ಮಾತಿಗೆ ಜ್ಯೋತಿರ್ಲಿಂಗವೆಂದು ಪ್ರಭುದೇವರು ಹೇಳಿದ್ದರು. ಶಬ್ದದೆಂಜಲು ಅನ್ನುವ ಪದ ಕಂಡು ಹಿಡಿದರು. ಶಬ್ದದಲ್ಲಿ ನಿಶ್ಯಬ್ದವಿಲ್ಲದೆ ಹೋದಾಗ ಅದು ಶಬ್ದದೆಂಜಲು ಎಂದು ವ್ಯಾಖ್ಯಾನಿಸಿದ್ದದರೆಂದು ಹೇಳಿದರು.

ಶೂನ್ಯ- ಸಂಪಾದನೆ ಆಗಬೇಕು ಆದರೆ ಸಂಪಾದನೆ ಶೂನ್ಯವಾಗಿರಬಾರದು ಎಂದು ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ವಿದ್ವಾಂಸರೊಬ್ಬರಿಗೆ ಹೇಳಿದ ಮಾತನ್ನು ನೆನಪಿಸಿದ ಶ್ರೀಗಳು, ಶೂನ್ಯಪೀಠ ಪರಂಪರೆಯು ಬೌದ್ಧಿಕತೆಗೆ ಒತ್ತು ಕೊಟ್ಟಿದ್ದನ್ನು ನಾವು ಕಾಣಬಹುದು. ಅಲ್ಲಿ ದ್ವೇಷ, ಅಸೂಯೆ ಗುಣಕ್ಕಿಂತ ಜೀವನ ಮೌಲ್ಯವನ್ನು ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಮಗೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.

ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭು ಮಹಾಸ್ವಾಮೀಜಿ ಮಾತನಾಡಿ, ಅಲ್ಲಮರದು ಅನುಭವ ಮಾರ್ಗ, ನಡೆ ಆಧ್ಯಾತ್ಮಿಕದ ಮೌಂಟ್ ಎವರೆಸ್ಟ್ ಇದ್ದಂತೆ. ಅವರ ರಚನೆಯ ವಚನಗಳು ಸಾಮಾನ್ಯರಿಗೆ ಅರ್ಥವಾಗುವುದೇ ಕಷ್ಟ. ಅಂಥವರ ನೆರಳಿನಲ್ಲಿ ನಾವು ಇರುವುದು ನಮ್ಮ ಸೌಭಾಗ್ಯ ಎಂದರು.

ಗುರುಮಠಕಲ್‌ನ ಶ್ರೀಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಬರುವ ಯುಗಾದಿ ಮತ್ತು ಸಂಕ್ರಾಂತಿ ಹಬ್ಬಗಳು ಯಾವುದೇ ದೈವಾರಾಧನೆ ಇಲ್ಲದೆ ನೇರವಾಗಿ ರೈತ ಮತ್ತು ಪ್ರಕೃತಿ ನಡುವೆ ನಡೆಯುವ ಪರಿವರ್ತನೆಯ ಆಚರಣೆಗಳು ಮನುಷ್ಯರ ಜೀವನದಲ್ಲಿಯೂ ಆಗಬೇಕೆಂಬುದು ನಮ್ಮ ಪೂರ್ವಿಕರ ಆಶಯ ಎಂದರು.

ನೂತನ ವರ್ಷಾರಂಭದ ಸಮಾರಂಭಕ್ಕೆ ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ, ಉಮೇಶ್ ಪತ್ತಾರ್, ಶಶಿಕಲ ಬಸವರಾಜ್, ಕರಿಬಸಪ್ಪ ವಚನ ಗಾಯನ. ಭಾವಗೀತೆ ಹಾಡಿದರು.

ಕಥೆಗಾರ ಜಿ.ಎಸ್ ಉಜ್ಜನಪ್ಪ, ಲೇಖಕ ಎಚ್.ಆನಂದ್ ಕುಮಾರ್, ಕೆಇಬಿ ಷಣ್ಮುಖಪ್ಪ, ಕೆ.ಎಂ.ವೀರೇಶ್, ಡಿ.ಎಸ್.ಸುರೇಶ್ ಬಾಬು, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ರುದ್ರಮುನಿ, ಆನಂದ್, ವಿನಯ್, ನವೀನ್ ಸಜ್ಜನ್, ರವಿ ಅಂಬೇಕರ್ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ, ಗಣ್ಯರು ಇದ್ದರು.

Share this article