ಡೆಲ್ಲಿ ಮಂಜು
ಉರಿ (ಜಮ್ಮು&ಕಾಶ್ಮೀರ) : ಕೊನೆಯ ಹಳ್ಳಿ, ಕೊನೆಯ ರಸ್ತೆ, ಕೊನೆಯ ಶಾಲೆ...! ಈ ಪದಗಳು ಕೇಳಲು ಚಂದ. ಕುತೂಹಲವೂ ಹೆಚ್ಚಿಸಿತ್ತೆ. ಆದ್ರೆ ವಾಸ್ತವವಾಗಿ ವಾಸ ಇರುವವರಿಗೆ? ನಮ್ಮೂರು ನಮಗೆ ಚಂದ ಹುಟ್ಟಿ ಬೆಳೆದ ಊರು ಚಂದವೋ ಚಂದ.. ಆದೇ ಊರು ಮತ್ತೊಂದು ದೇಶದ ಗಡಿಗೆ ಹೊಂದಿಕೊಂಡಿದೆ ಅಂದ್ರೆ ಚಂದಗಳ ನಡುವೆ ನಿತ್ಯವೂ ಅನುಭವಿಸುವ ಯಾತನೆ ಆತಂಕಕ್ಕೆ ದೂಡುತ್ತದೆ. ಸದಾ ಆತಂಕ ಇರುವ, ಈ ಆತಂಕವೂ ಮಾಮೂಲಿಯಾಗಿರುವ ಭಾರತದ ಕಟ್ಟಕಡೆಯ ಹಳ್ಳಿ ತುಲವಾರಿ.
ಉರಿ ವಲಯಲ್ಲಿ ಬರುವ ಹಾಗೂ ಉರಿಯಿಂದ ಎಂಟ್ಹತ್ತು ಕಿ.ಮೀ ದೂರ ಇರುವ ತುಲವಾರಿ ಗ್ರಾಮದಲ್ಲಿ ಸದಾ ಆತಂಕ ಇರುತ್ತೆ. ಭಾರತ- ಪಾಕ್ ಎಂಬ ಶಬ್ದಗಳು ಕೇಳಿದ್ರೆ ಆತಂಕ ಇಮ್ಮಡಿಯಾಗುತ್ತೆ. 2 ರಾಷ್ಟ್ರಗಳ ಸಂಘರ್ಷದ ಹೊತ್ತಲ್ಲಿ ಪ್ರತ್ಯಕ್ಷ ವರದಿಗಾಗಿ ‘ಕನ್ನಡ ಪ್ರಭ’ ಇಲ್ಲಿಗೆ ಭೇಟಿ ಕೊಟ್ಟಿತ್ತು.
ಸುಮಾರು 80 ವರ್ಷ ವೃದ್ಧ ಆದಿಲ್ ಸಾಬ್ ಮಾತಿಗೆ ಸಿಕ್ಕಿ, ನಾನು ಹುಟ್ಡಿದ್ದು ಇಲ್ಲೇ. ನನಗೆ ನೆನಪಿಲ್ಲ ನಮ್ಮ 10 ತಲೆಮಾರುಗಳಿಂದ ಇಲ್ಲೇ ಇದ್ದೇವೆ. 1971ರ ಯುದ್ಧ ನೋಡಿದ್ದೇವೆ. ಹಲವು ಬಾರಿ ಶೆಲ್ಲಿಂಗ್ ದಾಳಿ ನೋಡಿದ್ದೇವೆ. ಹಲವು ಬಾರಿ ಊರು ಖಾಲಿ ಮಾಡಿದ್ದೇವೆ. ಮತ್ತೆ ಬಂದಿದ್ದೇವೆ. ದಾಳಿಯ ಸದ್ದು ಹೊಸದಲ್ಲ. ನೋಡಿ ನೋಡಿ ಹಲವು ತಲೆಮಾರುಗಳೇ ಹೋಗಿವೆ. ಇದರಿಂದ ಬಡವರಿಗೆ ಹೊಡೆತ. ಎಲ್ಲಿ ಹೋಗೋದು ನಾವು? ಎಂದ ಸಾಬ್, ಕೇಂದ್ರದ ಕ್ರಮ ಖುಷಿ ತಂದಿದೆ ಅಂದ್ರು. ಇಲ್ಲವಾಗಿದ್ದರೆ ಸುಂದರ, ಸ್ವಚ್ಚಂದ ಪರಿಸರ ನದಿಯ ಕಿನಾರೆ. ಊರಿಗೆ ಜೀವದಾನ. ಇಂಥ ಪರಿಸರಕ್ಕೆ ಕಪ್ಪು ಚುಕ್ಕೆ ಕಣಿವೆಯ ಮತ್ತೊಂದು ಬದಿಯಿಂದ ಹಾರಿಬರುವ ಶೆಲ್‌ಗಳು, ಭೌಗೋಳಿಕವಾಗಿ ನೋಡಿದರೆ ತುಲುವಾರಿ ಗ್ರಾಮ ಅಜಾದ್ ಕಾಶ್ಮೀರ ಕಣಿವೆಗಿಂತ ಸ್ವಲ್ಪ ಎತ್ತರದಲ್ಲಿ ಕಡಿಮೆ ಇದೆ. ಎತ್ತರದ ಪರ್ವತ ಶ್ರೇಣಿಯ ಮೇಲಿಂದ ಮುಗ್ಧ ಜನರ ಮೇಲೆ ಶೆಲ್ ಸಿಡಿಯಲಿವೆ.
ಶೆಲ್ ಶಬ್ದ ಸಾಮಾನ್ಯ ಆದ್ರೆ ಎಚ್ಚರಿಸಲು ನಮ್ಮ ಭಾಗದಲ್ಲಿ ಸೈರನ್ ಇಲ್ಲ. ಮೂರು ವಾರಗಳಿಂದ ಗಡಿಯಲ್ಲಿ ಸಂಘರ್ಷ ನಡೆದರೂ ನಮ್ಮ ಗ್ರಾಮದ ಮೇಲೆ ಒಂದು ಶೆಲ್ ಬಿದ್ದಿದೆ. ಜಮೀನನ ಮೇಲೆ ಬಿದ್ದ ಕಾರಣಕ್ಕೆ ಯಾವುದೇ ಲುಕ್ಸಾನ್ ಆಗಿಲ್ಲ ಅಂತಾರೆ ಸ್ಥಳೀಯರು. ಶೆಲ್ ಶಬ್ದಕ್ಕೆ ಉತ್ತರ ಕೊಡಲು ಸದಾ ನಮ್ಮ ಜೊತೆ ಬಿಎಸ್‌ಎಫ್ ಇರುತ್ತೆ. ಅಲ್ಲದೇ ಈ ಸದ್ದು ಬಂದಾಗ ಸ್ಥಳೀಯರ ರಕ್ಷಣೆಗಾಗಿ 4 ಬಂಕರ್‌ಗಳು ವ್ಯವಸ್ಥೆ ಮಾಡಲಾಗಿದೆ.
ಕೊನೆಯ ಶಾಲೆ, ಕೊನೆಯ ರಸ್ತೆ:ತುಲುವಾರಿ ಗ್ರಾಮ ಕೊನೆಯ ಗ್ರಾಮ ಹಾಗಾಗಿ ಕೊನೆಯ ಶಾಲೆ ಇದೆ ಆಗಿದೆ. ಉರಿ ವಲಯದಲ್ಲಿರುವ ಈ ಶಾಲೆಯಲ್ಲಿ 8ನೇ ತರಗತಿಯ ತನಕ ಇದೆ. ಉನ್ನತ ವಿದ್ಯೆ ಕಲಿಯಬೇಕು ಅಂದ್ರೆ ಉರಿಗೆ ಬರಲೇಬೇಕು.
ಈ ಊರಿನ ಪೂರ್ತಿ ರಸ್ತೆ ಡಾಂಬರುಗೊಂಡಿದೆ. ಕಣಿವೆಯಲ್ಲಿ ಕೂಡ ರಸ್ತೆ ಇಲ್ಲೇ ಕೊನೆಗೊಳ್ಳುತ್ತೆ. 2016ಕ್ಕೆ ಈ ಊರಿನ ರಸ್ತೆಗೆ ಡಾಂಬಾರು ಬಂತು ಅಂಥ ಸ್ಥಳೀಯರು ಹೇಳುತ್ತಾರೆ.