ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ಪಟ್ಟಿ ನಕಲಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಒಕ್ಕೂಟಕ್ಕೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳಿಂದ ನಕಲಿ ಪಟ್ಟಿ ಬಿಡುಗಡೆ । ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅಧ್ಯಕ್ಷ

ಒಕ್ಕೂಟಕ್ಕೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳಿಂದ ನಕಲಿ ಪಟ್ಟಿ ಬಿಡುಗಡೆ । ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವವರ ಬಗ್ಗೆ ತನಿಖೆ ನಡೆಸಲಾಗುವುದು, ಒಕ್ಕೂಟಕ್ಕೆ ಕೆಟ್ಟ ಹೆಸರು ತರುವ ಹಿನ್ನೆಲೆಯಲ್ಲಿ ಇಂತಹ ಷಡ್ಯಂತ್ರ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ನೇಮಕಾತಿ ಪಟ್ಟಿ ಹರಿದಾಡಿರುವುದರಲ್ಲಿ ಯಾವುದೇ ಸತ್ಯಾಂಶ ಇಲ್ಲ, ೧.೫ ಅನುಪಾತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ ೫ ದಿವಸಗಳಿಂದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಲಾಗುತ್ತಿದೆ, ಒಕ್ಕೂಟದಿಂದ ಇದುವರೆಗೂ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ, ಒಕ್ಕೂಟಕ್ಕೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಕೆಲವರು ಈ ಕೃತ್ಯವನ್ನು ಮಾಡಿದ್ದಾರೆ, ಅಂತಹವರ ಬಗ್ಗೆ ಕ್ರಮ ಕೈಗೊಳ್ಳಲು ಇಂದು ನಡೆದ ಆಡಳಿತ ಮಂಡಳಿ ತೀರ್ಮಾನಿಸಿದೆ, ೨-೩ ದಿನಗಳಲ್ಲಿ ತನಿಖೆ ಮಾಡಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ಹಾಲು ಒಕ್ಕೂಟದಿಂದ ವಿಭಜನೆಗೊಂಡು ೩೮ ವರ್ಷಗಳಾಯಿತು, ಅಲ್ಲಿಂದ ಇಲ್ಲಿಯವರೆಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಉತ್ತಮವಾಗಿ ಕೆಲಸ ಮಾಡುತ್ತಾ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ, ರಾಜ್ಯದಲ್ಲಿ ನಂ.೧ ಸ್ಥಾನಕ್ಕೆ ಬಂದಿದ್ದೇವೆ, ಇದನ್ನು ಪರಿಗಣಿಸಿ ಸರ್ಕಾರ ನನಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ನಾವು ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಒಕ್ಕೂಟದಲ್ಲಿ ಖಾಲಿ ಇರುವ ೧೯೨ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು, ಇದರಲ್ಲಿ ಕೆಲವು ಹುದ್ದೆಗಳು ಹೈಕೋರ್ಟ್ ಮೆಟ್ಟಿಲೇರಿದ ಕಾರಣ ೮೧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ೭೫ ಹುದ್ದೆಗಳಿಗೆ ೨೦೦೦ ಅಭ್ಯರ್ಥಿಗಳಿಂದ ಅರ್ಜಿ ಬಂದಿದ್ದು, ನ.೫ರಂದು ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ೧.೫ ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಡಿ.೧೫ರಿಂದ ಸಂದರ್ಶನವನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಯಾವುದೇ ಆಮಿಷ ಮತ್ತು ರಾಜಕೀಯ ಒತ್ತಡಗಳಿಗೆ ಹಾಗೂ ಶಿಫಾರಸ್ಸಿಗೆ ಮಣಿಯದೆ ಪಾರದರ್ಶಕವಾಗಿ ಸಂದರ್ಶನ ನಡೆಸಲಾಗುತ್ತಿದೆ. ಯಾವುದೇ ಪಟ್ಟಿ ಸಹ ಒಕ್ಕೂಟ ಬಿಡುಗಡೆ ಮಾಡಿಲ್ಲ. ಸೋಮವಾರ ರಾತ್ರಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುಗಡೆಯಾಗಿರುವ ಪಟ್ಟಿ ನಮ್ಮ ಒಕ್ಕೂಟದ್ದಲ್ಲ, ೧.೫ರ ಅನುಪಾತದಲ್ಲಿ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪಡೆದು ಕೆಲವರು ಹಾಲಿ ಮತ್ತು ಮಾಜಿ ಶಾಸಕರ ಹಾಗೂ ನಿರ್ದೇಶಕರ ಹೆಸರನ್ನೂ ಸೇರಿಸಿ ಶಿಫಾರಸ್ಸು ಪಟ್ಟಿ ಎಂದು ಜಾಲತಾಣಗಳಲ್ಲಿ ಹರಿಬಿಟ್ಟು ಷಡ್ಯಂತ್ರ ನಡೆಸಿದ್ದಾರೆ. ಇಂತಹವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ರಾಜಕೀಯ ವ್ಯಕ್ತಿಗಳು, ನಿರ್ದೇಶಕರು ಶಿಫಾರಸ್ಸು ಮಾಡಿರುವ ಹೆಸರುಗಳನ್ನು ನೇಮಕಾತಿ ಮಾಡಿದರೆ ಅದು ಭ್ರಷ್ಟಾಚಾರವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಆಯ್ಕೆ ಮಾಡುವ ನೇಮಕಾತಿ ಪಟ್ಟಿ ಅಂಕಗಳಿಕೆ ಮತ್ತು ಆದ್ಯತೆ ಮೇರೆಗೆ ಇರುತ್ತದೆ, ಈಗ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿರುವ ಹೆಸರುಗಳೇ ಒಕ್ಕೂಟ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಇದ್ದರೆ ಅದು ಭ್ರಷ್ಟಾಚಾರವೇ ಎಂದು ತಿಳಿದುಕೊಳ್ಳಿ, ಆ ರೀತಿ ಆದರೆ ನಾವು ರಾಜಕೀಯದಲ್ಲಿ ಮುಂದುವರೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್, ಎನ್.ಹನುಮೇಶ್, ಕಾಂತರಾಜ್, ಮಂಜುನಾಥರೆಡ್ಡಿ, ಡಿ.ವಿ.ಹರೀಶ್, ಕಾಂತಮ್ಮ, ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಭರಣಿ ವೆಂಕಟೇಶ್, ಸುನಂದಮ್ಮ, ಎಂ.ಡಿ.ಗೋಪಾಲಮೂರ್ತಿ ಇದ್ದರು.

---

Share this article