ಮೆಗಾ ಟೆಕ್ಸ್‌ ಟೈಲ್ ಪಾರ್ಕ್ ಆಸೆ ಇನ್ನೂ ಜೀವಂತ

KannadaprabhaNewsNetwork | Updated : Nov 10 2024, 01:57 AM IST

ಸಾರಾಂಶ

ಈ ಎಲ್ಲ ಬೆಳೆವಣಿಗಳಿಂದಾಗಿ ಎಲ್ಲ ತರಹದ ಅರ್ಹತೆ ಇರುವ ರಾಯಚೂರಿಗೆ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ಗೆ ನೀಡಬೇಕು ಎನ್ನುವ ಆಸೆ ಮತ್ತೆ ಹುಟ್ಟಿಕೊಂಡಿದ್ದು, ಜಿಲ್ಲೆ ಸಚಿವರು, ಸಂಸದರು,ಶಾಸಕರು ಹಾಗೂ ಉದ್ಯಮಿದಾರರು, ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸುವ ಅನಿವಾರ್ಯತೆಯು ಸೃಷ್ಠಿಗೊಂಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಅತೀ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುವ ಪ್ರದೇಶ, ಅಷ್ಟೇ ಪ್ರಮಾಣದಲ್ಲಿ ಹತ್ತಿ ಜಿನ್ನಿಂಗ್‌ ಹಾಗೂ ಪ್ರೆಸ್ಸಿಂಗ್‌ ಕಾರ್ಖಾನೆಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ ಟೈಲ್ ಪಾರ್ಕ್ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದೀಗ ಮರುಜೀವ ಬಂದಿದೆ.

ಹತ್ತಿಗೆ ಹೆಸರುವಾಸಿಯಾಗಿರುವ ರಾಯಚೂರಿನಲ್ಲಿ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ ಸ್ಥಾಪಿಸಿದ್ದಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಲಕ್ಷಾಂತರ ನಿರುದ್ಯೋಗಿಗಳ ಉದ್ಯೋಗ, ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದುಬರುವ ಕಾರಣಕ್ಕೆ ಭೌತಿಕವಾಗಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎನ್ನುವ ಆಶಾಭಾವನೆಯನ್ನು ಹೊಂದಿದ್ದ ಜಿಲ್ಲೆಯ ಜನರಿಗೆ ಕಳೆದ ವರ್ಷ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ತಣ್ಣೀರು ಎರಚಿತ್ತು.

ಅರ್ಹತೆ ಇದ್ದರೂ ದೊರಕಲಿಲ್ಲ:

ಎಲ್ಲ ರೀತಿಯಲ್ಲಿಯೂ ಅರ್ಹತೆಯನ್ನು ಹೊಂದಿದ್ದ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿ ಕಲಬುರಗಿಗೆ ಘೋಷಿಸಿದ್ದರು. ಇದಕ್ಕೆ ಎಲ್ಲಾ ಕಡೆ ವ್ಯಾಪಕ ವಿರೋಧವು ಸಹ ವ್ಯಕ್ತವಾಗಿತ್ತು. ಇದೀಗ ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ ಟೈಲ್ಸ್‌ ಪಾರ್ಕ್‌ ನಡಿ ಬಂಡವಾಳ ಹೂಡಲು ಉದ್ಯಮಿಗಳ ಹಿಂದೇಟು ಹಾಕುತ್ತಿರುವುದರಿಂದ ಮತ್ತೆ ರಾಯಚೂರಿಗೆ ಮೆಗಾ ಟೆಕ್ಸ್‌ಟೈಲ್ ನೀಡಬೇಕು ಎನ್ನುವ ಕೂಗಿಗೆ ಮರುಕಳಿಸುವಂತೆ ಮಾಡಿದೆ.

ದೇಶದಲ್ಲಿ ವಿಶ್ವದರ್ಜೆಯ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಿ ಆಮುಖಾಂತರ ದೊಡ್ಡ ಕಂಪನಿಗಳಿಂದ ಬಂಡವಾಳ ಹೂಡಿಕೆ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ಸದುದ್ದೇಶದಡಿ ರೂಪಿತಗೊಂಡ ಪಿಎಂ ಮಿತ್ರ ಯೋಜನೆಯಡಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯವು ಕಳೆದ ವರ್ಷ ರಾಜ್ಯದ ಕಲಬುರಗಿ ಸೇರಿ ದೇಶದ ಏಳು ಪ್ರದೇಶಗಳಲ್ಲಿ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ ಘೋಷಿಸಿತ್ತು. ಅದರಂತೆ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಸಮಾರಂಭವನ್ನು ಮಾಡಿ ಯೋಜನೆಗೆ ಚಾಲನೆಯನ್ನು ಸಹ ನೀಡಿತ್ತು.

ಯಾಕೆ ಹಿಂದೇಟು?:

ಕಲಬುರಗಿಯ ಫೀರೋಜಾಬಾದ್‌ನಲ್ಲಿ ಸುಮಾರು ಒಂದು ಸಾವಿರ ಎಕರೆಯಲ್ಲಿ ಮೆಗಾ ಟೈಕ್ಸ್‌ ಟೈಲ್‌ ಪಾರ್ಕ್‌ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಂದ ನಾಲ್ಕೈದು ದೊಡ್ಡ ದೊಡ್ಡ ಕಂಪನಿಗಳು ಬಂದು ಸ್ಥಳವನ್ನು ಪರಿಶೀಲಿಸಿ ಹೋಗಿದ್ದು, ಅಲ್ಲಿ ಹತ್ತಿ ಬೆಳೆಯ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಹಾಗೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಿಮೆಂಟ್‌ ಕಂಪನಿಗಳಿರುವುದರಿಂದ, ಹತ್ತಿ ನೂಲಿನ ಸಾಗಾಟ ಸೇರಿದಂತೆ ಜವಳಿ ಸಗಟು ಉತ್ಪನ್ನಗಳಿಗೂ ಹೊಡೆತ ಬೀಳುವ ಸಾಧ್ಯತೆಗಳನ್ನು ಗುರುತಿಸಿದ ಬಡಾ ಉದ್ಯಮಿಗಳು ಬಂಡವಾಳ ಹೂಡಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಹತ್ತಿ ಬೆಳೆಯದ ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಿದ್ದಲ್ಲಿ ಅಗತ್ಯವಾದ ವಸ್ತುವನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳಲು ಕಷ್ಟಸಾಧ್ಯವಾಗಲಿದ್ದು, ರೈತರು, ಹತ್ತಿ ಫ್ಯಾಕ್ಟರಿಗಳು ಸಹ ದೂರದ ಪ್ರದೇಶಕ್ಕೆ ಹೋಗಿ ವ್ಯವಹಾರ ಮಾಡಲು ಸಮಸ್ಯೆಯಾಗಲಿದೆ.

ಈ ಎಲ್ಲ ಬೆಳೆವಣಿಗಳಿಂದಾಗಿ ಎಲ್ಲ ತರಹದ ಅರ್ಹತೆ ಇರುವ ರಾಯಚೂರಿಗೆ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ಗೆ ನೀಡಬೇಕು ಎನ್ನುವ ಆಸೆ ಮತ್ತೆ ಹುಟ್ಟಿಕೊಂಡಿದ್ದು, ಜಿಲ್ಲೆ ಸಚಿವರು, ಸಂಸದರು,ಶಾಸಕರು ಹಾಗೂ ಉದ್ಯಮಿದಾರರು, ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸುವ ಅನಿವಾರ್ಯತೆಯು ಸೃಷ್ಠಿಗೊಂಡಿದೆ.

ಇನ್ನು, ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್ ನಿರ್ಮಿಸುವ ತೀರ್ಮಾನ ಕೇಂದ್ರ ಸರ್ಕಾರ ಮಾಡಿದೆ. ಸಿಮೆಂಟ್‌ ಕಂಪನಿಗಳಿರುವ ಕಾರಣಕ್ಕೆ ಉದ್ಯಮಿಗಳ ಬಂದಿಲ್ಲ ಎನ್ನುವುದು ಸಮಂಜಸವಲ್ಲ, ರಾಯಚೂರು ಜಿಲ್ಲೆಗೆ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್ ಪಡೆಯುವ ಪ್ರಯತ್ನವನ್ನು ಮುಂದುವರೆಸಲಾಗುವುದು ಎಂದು

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಪರಿಣಾಮಕಾರಿ ಹೋರಾಟಕ್ಕೆ ಅಣಿ: ಲಕ್ಷ್ಮೀರೆಡ್ಡಿ

ಹತ್ತಿ ಬೆಳೆಯದ ಯಾವುದೇ ರೀತಿಯ ಪೂರಕ ವಾತಾವರಣ ಇಲ್ಲದ ಕಲಬುರಗಿಗೆ ಮೆಗಾ ಟೆಕ್ಸ್‌ ಟೈಲ್‌ಪಾರ್ಕ್‌ ನೀಡಿರುವುದು ದುರಂತದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಮೆಂಟ್‌ ಫ್ಯಾಕ್ಟರಿಗಳಿರುವುದರಿಂದ ಹತ್ತಿ ನೂಲು, ಇತರೆ ಕಚ್ಚಾವಸ್ತುಗಳಿಗೆ ಸಮಸ್ಯೆಯಾಗುತ್ತವೆ ಎನ್ನುವ ಕಾರಣಕ್ಕೆ ಉದ್ಯಮಿ ಗಳ ಬಂಡವಾಳ ಹೂಡಲು ಹಿಂದೇಟು ಹಾಕಿದ್ದು, ರಾಯಚೂರಿನಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಮಂಜೂರು ಮಾಡಿಸುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಡ ಹೇರಲಾಗುವುದು. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಹೋರಾಟಕ್ಕೆ ಅಣಿಗೊಳ್ಳಲಾಗುವುದು ಎಂದು ರಾಯಚೂರು ಜಿಲ್ಲಾ ಕಾಟನ್ ಮಿಲ್ಲರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳಿದರು.

Share this article