ಸರ್ವಜ್ಞರ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

KannadaprabhaNewsNetwork | Published : Aug 14, 2024 12:46 AM
Follow Us

ಸಾರಾಂಶ

ಸರ್ವಜ್ಞರಲ್ಲಿನ ವಿದ್ಯೆ, ವಿನಯ, ಪರಿಪೂರ್ಣತೆ, ಲೋಕದ ಡೊಂಕು ತಿದ್ದುವ ದಿಟ್ಟತನ ಎಂದಿಗೂ ಮರೆಯುವಂತಿಲ್ಲ

ಶಿರಹಟ್ಟಿ: ಕನ್ನಡಿಗರ ಜಾನಪದ ಸಾಮ್ರಾಟ, ಅತ್ಯಂತ ಸುಲಭ, ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುವ ಶೈಲಿಯಲ್ಲಿ ತ್ರಿಪದಿ ರಚಿಸಿ ಸರ್ವಜ್ಞ ನೀಡಿದ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.

ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಸಂಜೆ ಪಟ್ಟಣದ ಚಂದ್ರಕಾಂತ್ ನೂರಶೆಟ್ಟರ್ ಅವರ ಮಹಾಮನೆಯಲ್ಲಿ ನಡೆದ ಶ್ರಾವಣ ಸೌರಭ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಸರ್ವಜ್ಞನ ಸಂದೇಶ ಕುರಿತು ಮಾತನಾಡಿದರು.

ಎಲ್ಲ ಬಲ್ಲವನು ಸರ್ವಜ್ಞ, ಶ್ರೇಷ್ಠ ಜೀವತತ್ವಗಳ ಕುರಿತು ಸಾವಿರಕ್ಕೂ ಅಧಿಕ ತ್ರಿಪದಿ ರಚಿಸಿ ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಮಹನೀಯ ಎಂದ ಅವರು, ಸರ್ವಜ್ಞರಲ್ಲಿನ ವಿದ್ಯೆ, ವಿನಯ, ಪರಿಪೂರ್ಣತೆ, ಲೋಕದ ಡೊಂಕು ತಿದ್ದುವ ದಿಟ್ಟತನ ಎಂದಿಗೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರು ತ್ಯಾಗಿ, ಯೋಗಿ, ಮಹಾ ಶಿವಯೋಗಿಯಾಗಿದ್ದು, ಲೋಕಕ್ಕೆ ಅಜರಾಮರ ಎಂದು ಬಣ್ಣಿಸಿದರು.

ಸರ್ವಜ್ಞನೆಂಬುವನು ಗರ್ವ ಬದಿಗಿಟ್ಟು, ಸರ್ವರೋಳು ಒಂದೊಂದು ನುಡಿ ಕಲಿತು ವಿದ್ಯದ ಪರ್ವತವಾಗಿ ಜನರಾಡುವ ಭಾಷೆಯಲ್ಲಿ ತ್ರಿಪದಿ ರಚಿಸಿ ಕನ್ನಡ ಸಾರಸ್ವತ ಲೋಕದಲ್ಲಿ ಜಾನಪದ ಚಕ್ರವರ್ತಿಯಾಗಿ ಮನೆಮಾತಾಗಿದ್ದಾರೆ. ಇಡೀ ಜಗತ್ತನ್ನೇ ಜ್ಞಾನದೇಗುಲವನ್ನಾಗಿ ಮಾಡಲು ಪ್ರಯತ್ನಿಸಿದ ಮಹಾಕವಿ ಎಂದು ಬಣ್ಣಿಸಿದರು.

ಸರ್ವಜ್ಞನ ವಚನಗಳಲ್ಲಿರುವ ಆದರ್ಶ ತತ್ವಗಳು ಸಮಾಜದಲ್ಲಿರುವ ಅನಾಚಾರ ತಿದ್ದುವ ಕೆಲಸ ಮಾಡುತ್ತವೆ. ಉತ್ತಮವಾದ ಸಮಾಜ ಬಲಪಡಿಸುವಂತಹ ಸಾರಾಂಶ ಇವರ ತ್ರಿಪದಿಗಳಲ್ಲಿ ಇದೆ. ಪ್ರತಿಯೊಂದು ತ್ರಿಪದಿಯೂ ಸಹ ವೈಜ್ಞಾನಿಕ ವಿಮರ್ಶೆ ಒಳಗೊಂಡಿವೆ. ಸರ್ವಕಾಲಕ್ಕೂ ಅನ್ವಯಿಸುವ ತತ್ವಗಳನ್ನು ಕವಿ ಸರ್ವಜ್ಞ ಕೊಟ್ಟಿದ್ದಾರೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ.ಬಳಿಗೇರ ಮಾತನಾಡಿ, ಸಮಾಜದ ಲೋಪದೋಷ ಗುರುತಿಸಿ ತಿದ್ದುವ ಕಳಕಳಿ ಅಭಿವ್ಯಕ್ತಿಯ ನುಡಿಗಳನ್ನು ಕವಿ ಸರ್ವಜ್ಞ ಸಮಾಜಕ್ಕೆ ನೀಡಿದ್ದಾರೆ. ಇವರ ನುಡಿಗಳು ಸರಳ ಹಾಗೂ ಪ್ರಾಸಬದ್ಧತೆಯಿಂದ ಕೂಡಿರುವುದರಿಂದ ನಾಡಿನ ಎಲ್ಲರ ಜನಮನಗಳಿಗೆ ಮುಟ್ಟುತ್ತಿವೆ ಹಾಗೂ ತಟ್ಟುತ್ತಿವೆ ಎಂದು ಹೇಳಿದರು.

ಸರ್ವಜ್ಞ ಲೆಕ್ಕವಿಲ್ಲದಷ್ಟು ತ್ರಿಪದಿಗಳನ್ನ ಬರೆದಿದ್ದಾರೆ. ಅವುಗಳಲ್ಲಿ ೭೦೭೦ ವಚನಗಳು ಮಾತ್ರ ಲಭ್ಯವಾಗಿವೆ. ಈ ದಿಸೆಯಲ್ಲಿ ಇನ್ನಷ್ಟು ಸಂಶೋಧನೆ ನಡೆದರೆ ಮತ್ತಷ್ಟು ತ್ರಿಪದಿ ಸಿಗಬಹುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ಹೇಳದ ವಿಷಯಗಳೇ ಇಲ್ಲ. ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಇಂಥ ತ್ರಿಪದಿ ಓದುವ ಅಭಿರುಚಿ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.

ಚಂದ್ರಕಾಂತ ನೂರಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ಎಂದು ಬಣ್ಣಿಸಿದ ಅವರು, ಸಾಗರದಂತಹ ದೊಡ್ಡ ವಿಷಯದ ಅಂಶಗಳನ್ನು ಸಾಸಿವೆ ಗಾತ್ರದಲ್ಲಿ ಅರ್ಥೈಸುವ ಸಂತ ಕವಿ ಸರ್ವಜ್ಞ ತನಗೆ ತಿಳಿದಿದ್ದನ್ನು ಹಾಗೂ ನೀಡಿದ್ದನ್ನು ತ್ರಿಪದಿ ಮೂಲಕ ಬರೆದವರು ಎಂದರು.

ಕಾರ್ಯಕ್ರಮದಲ್ಲಿ ಎಚ್.ಎಂ. ದೇವಗಿರಿ, ಬಿ.ಎಸ್. ಹಿರೇಮಠ್, ಡಿ.ಎಚ್. ಸರಕಾವಾಸ್, ಬಸಣ್ಣ ಬೋರಶೆಟ್ಟರ್, ಫಕೀರೇಶ ಹಳ್ಳೆಮ್ಮನವರ್, ಡಾ.ವಿರೂಪಾಕ್ಷ ಪಾಟೀಲ್, ಫಕೀರೇಶ ಕುಳಗೇರಿ, ಎಚ್.ಎಂ. ಪಲ್ಲೆದ, ಗೀತಾ ಸರವಿ, ರೇಣುಕಾ ಲಕ್ಕುಂಡಿ, ಆರ್. ಎಂ.ಬಬಲಿಯವರ, ಜಯಶ್ರೀ ನೂರಶೆಟ್ಟರ್ ಮುಂತಾದವರು ಭಾಗವಹಿಸಿದ್ದರು.

ನೀಲಮ್ಮ ಕುಳಗೇರಿ ವಚನ ಗಾಯನ ಮಾಡಿದರು. ಶಾಂತಾ ಪಾಟೀಲ್ ನಿರೂಪಿಸಿದರು. ನಂದಾ ಕಪ್ಪತ್ತನವರ್ ವಂದಿಸಿದರು.